ನಿಮ್ಮ ಮಗು ಕಾರ್ಟೂನ್ ನೋಡುತ್ತಾ..! ಹಾಗಾದ್ರೆ ಹುಷಾರ್

0
156

ಆಧುನಿಕ ಜಗತ್ತಿನಲ್ಲಿ ಕಾರ್ಟೂನ್‌ಗಳು ತುಂಬಾ ಜನಪ್ರಿಯತೆಗಳನ್ನು ಗಳಿಸಿದೆ. ಈ ಕಾರ್ಟೂನ್‌ಗಳು ಮಕ್ಕಳಿಗೆ ಹಗಲು ರಾತ್ರಿ ದೂರದರ್ಶನ ವೀಕ್ಷಿಸುವ ಚಪಲವನ್ನು ಹೆಚ್ಚಿಸಿವೆ. ಕಾರ್ಟೂನ್‌ಗಳ ಇಂಪಾದ ಸಂಗೀತ ಪ್ರಭಾವವನ್ನು ಬೀರುತ್ತವೆಂಬುದು ಕೆಲವು ಸಂಶೋಧನೆಗಳಿಂದ ವ್ಯಕ್ತವಾಗಿದೆ. ಇದರಿಂದ ಕೆಟ್ಟ ಪರಿಣಾಮವೇ ಹೆಚ್ಚು ಎಂಬುದು ಬೆಳಕಿಗೆ ಬಂದಿದೆ.

 

 

ಭಾವನಾತ್ಮಕ ಮಾನಸಿಕ ಹಾಗೂ ಸಾಮಾಜಿಕ ವಲಯಗಳಲ್ಲಿ ನಡೆಸಿದ ಸಂಶೋಧನೆಯಿಂದಲೂ ಈ ದುಷ್ಪರಿಣಾಮಗಳು ಹೆಚ್ಚು ಎಂದು ಕಂಡು ಬಂದಿದೆ. ಸಂಶೋಧಕರ ಪ್ರಕಾರ ಅತಿಯಾದ ಕಾರ್ಟೂನ್ ವೀಕ್ಷಣೆಯಿಂದ ಮಕ್ಕಳಲ್ಲಿ ಹಠಮಾರಿತನ, ಒಂಟಿಯಾಗಿ ಇರಲು ಇಚ್ಛಿಸುವುದು, ಅತಿಯಾದ ತುಂಟಿತನ, ಸಿಡುಕುವುದು ಕಾಣಬಹುದು.

 

 

ಕಾರ್ಟೂನ್ ಅಥವಾ ಆಯನಿಮೇಟೆಡ್ ವಿಡಿಯೋಗಳನ್ನು ಮಕ್ಕಳಿಗೆ ತೋರಿಸುವುದು ತಪ್ಪಲ್ಲ. ಆದರೆ ಮುಂದೆ ಅದುವೇ ಅಭ್ಯಾಸವಾಗಿ ಬಿಟ್ಟರೆ ತುಂಬಾ ಕಷ್ಟ. ಇಂದಿನ ಕಾಲದ ಮಕ್ಕಳ ಜೀವನದ ದೈನಂದಿನ ಭಾಗವಾಗಿ ಪರಿವರ್ತನೆಯಾಗಿದೆ ಈ ಕಾರ್ಟೂನ್. ಅತಿಯಾದ ಕೆಲಸದ ಒತ್ತಡದಲ್ಲಿ ಮುಳುಗಿರುವ ಪೋಷಕರಿಗೆ ಮಗುವಿನೊಂದಿಗೆ ಕುಳಿತು ಹರಟೆ ಹೊಡೆಯುವಷ್ಟು ಪುರುಸೊತ್ತು ಇರುವುದಿಲ್ಲ.

 

 

ಕೆಲಸ ಬಿಟ್ಟು ಮನೆಗೆ ಬಂದರೂ ಸಮಯ ಸಿಗುವುದಿಲ್ಲ. ಮನೆಗೆ ಬಂದ ಅಪ್ಪ ಆಫೀಸ್ ಕೆಲಸದಲ್ಲಿ ಮುಳುಗಿದ್ದರೆ ಅಮ್ಮ ಮನೆಯ ಕೆಲಸದಲ್ಲಿ ಬ್ಯುಸಿ. ಅಂಥಹ ಸಮಯದಲ್ಲಿ ಮಗುವಿನ ಕಿರಿಕಿರಿ ಕಡಿಮೆ ಮಾಡಲು ಕಾರ್ಟೂನ್ ಮೊರೆ ಹೋಗುತ್ತಾರೆ. ಮಗುವಿನ ತಿಂಡಿ, ಊಟ, ಬರೆಯುವುದು ಎಲ್ಲಾ ಕಾರ್ಟೂನ್ ನೋಡಿಕೊಂಡು ಎನ್ನುವಷ್ಟು ಅವರಿಗೆ ಅದು ಅಭ್ಯಾಸವಾಗಿ ಬಿಡುತ್ತದೆ.

 

 

ಸದಾ ಕಾಲ ಕಾರ್ಟೂನ್ ಅಥವಾ ಆಯನಿಮೇಟೆಡ್ ವಿಡಿಯೋಗಳನ್ನು ನೋಡುವುದರಿಂದ ಮಕ್ಕಳ ಮೇಲೆ ಆಗುವ ಕೆಟ್ಟ ಪರಿಣಾಮಗಳನ್ನು ಮರೆಯದಿರಿ. ಕಾರ್ಟೂನ್ ನೋಡುವುದರಿಂದ ಮಕ್ಕಳ ಕಲ್ಪನಾ ಸಾಮರ್ಥ್ಯ ಕಡಿಮೆಯಾಗುತ್ತದೆ. ಅವರಿಗೆ ಕಲ್ಪನೆ ಮಾಡಿಕೊಳ್ಳುವುದಕ್ಕೆಲ್ಲಾ ಅವಕಾಶಗಳೇ ಇರುವುದಿಲ್ಲ. ಒಂದೂರಿನಲ್ಲಿ ರಾಜ ಇದ್ದ ಎಂದು ನಮ್ಮ ಅಜ್ಜಿ ಕಥೆ ಹೇಳುವಾಗ ನಮಗೆ ಆ ರಾಜನ ಕಲ್ಪನೆ ಬರುತ್ತಿತ್ತು.

 

 

ವಾಸ್ತವವಾಗಿ ನಾವು ರಾಜನನ್ನೇ ನೋಡಿರುವುದಿಲ್ಲ! ಆದರೆ ಈಗ ಅದೆಲ್ಲಾ ಈಗ ಕಾರ್ಟೂನ್ ನಲ್ಲಿ ಕಾಣುವಾಗ ಕಲ್ಪನೆ ಮಾಡುವ ಸಂದರ್ಭವೇ ಬರುವುದಿಲ್ಲ. ಒಂದೇ ಕಡೆ ಕುಳಿತು ಕಾರ್ಟೂನ್ ನೋಡುವುದರಿಂದ ಮಕ್ಕಳು ಜಡ ಭರಿತರಾಗುತ್ತಾರೆ. ಬೇರೆ ಏನನ್ನೂ ಮಾಡುವುದಕ್ಕೆ ಮನಸ್ಸು ಬರುವುದಿಲ್ಲ.

 

 

ಇನ್ನು ಕಾರ್ಟೂನ್ ಎರಡನೆಯದಾಗಿ ಮಕ್ಕಳ ದೈಹಿಕ ಚಟುವಟಿಕೆಯ ಮೇಲೆ ಗಾಢವಾದ ಪರಿಣಾಮ ಬೀರುವುದು ಸುಳ್ಳಲ್ಲ. ನಾಲ್ಕು ಗೋಡೆಯ ಮಧ್ಯೆ ಕುಳಿತು ಟಿವಿ ಅಥವಾ ಲ್ಯಾಪ್ ಟಾಪ್ ನೋಡುವ ಕಾರಣ ಅವರಿಗೆ ಹೊರ ಜಗತ್ತಿನ ಅರಿವೇ ಇರುವುದಿಲ್ಲ. ಯಾವುದೇ ಆಟ ಆಡಲು ಮನಸ್ಸು ಬಯಸದ ಕಾರಣ ದೈಹಿಕವಾದ ವ್ಯಾಯಾಮಗಳು ಕೂಡ ಆಗುವುದಿಲ್ಲ. ಯಾವಾಗಲೂ ನಿರುತ್ಸಾಹದಿಂದ ಇರುವಂತೆ ಕಾಣುತ್ತದೆ.

 

 

ಬೆಳೆಯುತ್ತಿರುವ ಮಕ್ಕಳು ತಮ್ಮ ವ್ಯಕ್ತಿತ್ವವನ್ನು ರೂಪಿಸುವುದಕ್ಕಾಗಿ ಸಮಾಜದಲ್ಲಿ ಬೆರೆಯುವುದು ಮುಖ್ಯ. ಆದರೆ ಕಾರ್ಟೂನ್ ನೋಡುವುದು ಒಂದು ಚಟವಾಗಿ ಪರಿವರ್ತನೆಯಾಗುವುದರಿಂದ ಮಕ್ಕಳು ಅದರಿಂದ ಹೊರ ಬರಲು ಸುತರಾಂ ಒಪ್ಪುವುದಿಲ್ಲ. ಏನು ಬೇಕಾದರೂ ಬಿಟ್ಟೇನು, ಆದರೆ ಕಾರ್ಟೂನ್ ಬಿಡಲಾರೆ ಎಂಬ ನಿರ್ಧಾರ ಮಾಡಿದರೂ ಸಂಶಯವಿಲ್ಲ.

 

 

ಜೊತೆಗೆ ಯಾರೊಂದಿಗೂ ಬೆರೆಯುವುದಕ್ಕೆ ಇಷ್ಟ ಪಡುವುದಿಲ್ಲ. ಬದಲಿಗೆ ಏಕಾಂಗಿಯಾಗಿ ಇರಲು ಬಯಸುವುದೇ ಹೆಚ್ಚು. ಮಕ್ಕಳಿಗೆ ಯಾರೊಂದಿಗೆ ಹೇಗೆ ಮಾತನಾಡಬೇಕು ಎಂಬ ವಿಷಯದೇ ಅರಿವೇ ಇರುವುದಿಲ್ಲ. ಒಂದು ವೇಳೆ ಯಾರಾದರೂ ಮನೆಗೆ ಬಂದರೆ ಅಥವಾ ಕಾಣ ಸಿಕ್ಕರೆ ಜಸ್ಟ್ ಹಾಯ್ ಅಥವಾ ಹಲೋ ಎಂದು ಅವರ ಉತ್ತರಕ್ಕೆ ಕಾಯದೇ ಮರೆಯಾಗುವ ಕಾಲ ಇದು..!

 

 

ನಿಮ್ಮ ಮಕ್ಕಳು ಇದೇ ರೀತಿ ಕಾರ್ಟೂನ್ ನೋಡುತ್ತಿದ್ದರೆ ಎಚ್ಚರ ವಹಿಸಬೇಕಾದುದು ಅಗತ್ಯ. ಅದು ಅಭ್ಯಾಸವಾಗದಂತೆ ಜಾಗ್ರತೆ ವಹಿಸಿ. ನೀವು ತೆಗೆದುಕೊಳ್ಳುವ ನಿರ್ಧಾರದಲ್ಲಿ ನಿಮ್ಮ ಕಂದನ ಭವಿಷ್ಯ ಅಡಗಿದೆ. ಪ್ರತಿ ಹಂತದಲ್ಲೂ ಯೋಚಿಸಿ ನಿರ್ಧಾರ ತೆಗೆದುಕೊಳ್ಳುವಂತೆ ಇದರಲ್ಲೂ ಯೋಚಿಸಬೇಕಾದುದು ಅಗತ್ಯ.

LEAVE A REPLY

Please enter your comment!
Please enter your name here