ಚಲಿಸುವ ರೈಲಿನಿಂದ ಕೆಳಗೆ ಬಿದ್ದು 22 ವರ್ಷದ ಯುವತಿಯೊಬ್ಬಳು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಠಾಣೆಯಲ್ಲಿ ಜರುಗಿದೆ. ರೈಲಿನಲ್ಲಿ ಜನಸಂದಣಿ ಹೆಚ್ಚಾಗಿದ್ದು, ನಿಯಂತ್ರಣ ತಪ್ಪಿ ಯುವತಿ ರೈಲಿನಿಂದ ಕೆಳಗೆ ಬಿದ್ದಿದ್ದಾಳೆ ಎನ್ನಲಾಗುತ್ತಿದೆ.
ಸಾವನ್ನಪ್ಪಿದ ಯುವತಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಎಂದಿನಂತೆ ಬೆಳಗ್ಗೆ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಡೊಂಬಿವಾಲಿ ಮತ್ತು ಕೋಪರ್ ನಿಲ್ದಾಣಗಳ ನಡುವೆ ಸಂಚರಿಸುತ್ತಿದ್ದ ಉಪನಗರ ರೈಲಿನಲ್ಲಿ ಹೆಚ್ಚು ಜನರು ತುಂಬಿದ್ದರು. ಯುವತಿ ಹೇಗೋ ಸ್ಥಳ ಮಾಡಿಕೊಂಡು ರೈಲು ಹತ್ತಿದ್ದಾಳೆ. ಆದರೆ ರೈಲು ಚಲಿಸುವಾಗ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದಾಳೆ. ಕೂಡಲೇ ಸ್ಥಳದಲ್ಲಿದ್ದವರು ಯುವತಿಯನ್ನು ಆಸ್ಪತ್ರೆಗೆ ಸೇರಿಸಿದರೂ ತೀವ್ರ ಗಾಯಗಳಾಗಿದ್ದರಿಂದ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.
ವಿಪರ್ಯಾಸ ಎಂದರೆ ಈ ಮಾರ್ಗದಲ್ಲಿ ಆಗ್ಗಾಗ್ಗೆ ಇಂತಹ ದುರ್ಘಟನೆಗಳು ಜರುಗುತ್ತಲೇ ಇರುತ್ತವೆ. ಇಲ್ಲಿನ ರೈಲುಗಳಲ್ಲಿ ಜನಸಂದಣಿ ಹೆಚ್ಚು ಎಂದು ಪೊಲೀಸರು ಹೇಳಿದ್ದಾರೆ. 2010 ಜನವರಿಯಿಂದ ಇಲ್ಲಿವರೆಗೂ ಉಪನಗರ ರೈಲು ಅಪಘಾತದಲ್ಲೇ ಸುಮಾರು 27,000 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಇನ್ನಾದರೂ ರೈಲ್ವೆ ಇಲಾಖೆ ಇತ್ತ ಗಮನ ಹರಿಸಬೇಕಿದೆ.