ಸಚಿವ ಸ್ಥಾನ ಯೋಗೇಶ್ವರ್ ಕೊಡಬಾರದು ಅಂತ ನೇರವಾಗಿ ಹೇಳಿದ್ದೇವೆ: ರಾಜುಗೌಡ

0
35

ಬೆಂಗಳೂರು: ಸೋತವರಿಗೆ ಸಚಿವ ಸ್ಥಾನ ಕೊಡೊ ಬದಲು ಗೆದ್ದವರಿಗೆ ಕೊಟ್ರೆ ಒಳ್ಳೆಯದು. ಸಿಪಿ ಯೋಗೇಶ್ವರ್ ವಿಚಾರ ಬಂದಾಗ ಕೊಡಬಾರದು ಅಂತ ನೇರವಾಗಿ ಮುಖ್ಯಮಂತ್ರಿಗೆ ಹೇಳಿದ್ದೇವೆ ಎಂದು ಶಾಸಕ ರಾಜುಗೌಡ ಹೇಳಿದರು.

ಮುಖ್ಯಮಂತ್ರಿ ಭೇಟಿ ಬಳಿಕ ಮಾತನಾಡಿದ ಅವರು, ಬೇರೆ ಯಾರಿಗೆ ಸಚಿವ ಸ್ಥಾನ ನೀಡೋದಕ್ಕೆ ನಮಗೇನು ತಕರಾರು ಇಲ್ಲ. ಯೋಗೇಶ್ವರ್ ಮೇಲೆ ರಮೇಶ್ ಜಾರಕಿಹೊಳಿ ಪ್ರೀತಿ ಇದೆ ಅಂತ ಗೊತ್ತಿಲ್ಲ. ಹೆಚ್ ವಿಶ್ವನಾಥ್, ಎಂಟಿಬಿ,ಆರ್ ಶಂಕರ್ ಅವರಿಗೆ ಸಚಿವ ಸ್ಥಾನ ಕೊಟ್ಟರೆ ಏನೂ ಬೇಸರ ಇಲ್ಲ.‌ ಯೋಗೇಶ್ವರ್ ಕೊಡಬಾರದು ಅಂತ ನೇರವಾಗಿ ಹೇಳಿದ್ದೇವೆ. ಸಿಎಂ ಹೈಕಮಾಂಡ್ ಏನು ತೀರ್ಮಾನ ಕೈಗೊಂಡ್ರು ನಾನು ಬದ್ದ. ನಾವು ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದೇವೆ. ಆದ್ರೆ ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ಕೊಟ್ಟರೆ, ಬಾಬುರಾವ್ ಚಿಂಚನಸೂರ್, ಮಾಲಕಯ್ಯ ಗುತ್ತೆದಾರ್ ಅವರಿಗೂ ಸಚಿವ ಸ್ಥಾನ ಕೊಡಲಿ. ಅವರು ಕೂಡ ಕಷ್ಟ ಪಟ್ಟಿದ್ದಾರೆ ಆದ್ರೂ ಸೋತ್ರು ಎಂದು ವಿರೋಧ ವ್ಯಕ್ತಪಡಿಸಿದರು.

“ಬಿಜೆಪಿಯಲ್ಲಿ ಪವರ್ ಸೆಂಟರ್ ಅನ್ನೋ ಪ್ರಶ್ನೆ ಇಲ್ಲ”

ರಮೇಶ್ ಜಾರಕಿಹೊಳಿ ಪರ್ಯಾಯ ಪವರ್ ಸೆಂಟರ್ ಎಂಬ ಆರೋಪದ ಬಗ್ಗೆ ಮಾತನಾಡಿದ ಅವರು,
ಬಿಜೆಪಿಯಲ್ಲಿ ಪವರ್ ಸೆಂಟರ್ ಅನ್ನೋ ಪ್ರಶ್ನೆ ಇಲ್ಲ.‌‌ ಬಿಜೆಪಿಯಲ್ಲಿ ಒಂದೇ ಪವರ್ ಸೆಂಟರ್ ಇರೋದು. ಅದು ಯಡಿಯೂರಪ್ಪನವರು ಮಾತ್ರ. ರಾಜ್ಯಾಧ್ಯಕ್ಷರು ಸಹ ಇದಾರೆ. ಇವರಿಬ್ಬರು ಬಿಟ್ಟರೆ ನಮ್ಮಲ್ಲಿ ಬೇರೆ ಪವರ್ ಸೆಂಟರ್ ಇಲ್ಲ ಎಂದು ಹೇಳಿದರು.

ಯೋಗೇಶ್ವರ್ ಆಸ್ತಿ ನಾವ್ ತಗೊಂಡಿಲ್ಲ. ನಮ್ ಆಸ್ತಿ ಯೋಗೇಶ್ವರ್ ತಗೊಂಡಿಲ್ಲ. ಯೋಗೇಶ್ವರ್ ಮೇಲೆ ನಮಗೆ ದ್ವೇಷ ಇಲ್ಲ. ಆದ್ರೆ ಸೋತವರಿಗೆ ಸಚಿವ ಸ್ಥಾನ ಕೊಡೋದು ಬೇಡ ಅಂತ ಸಿಎಂಗೆ ಮನವಿ ಮಾಡಿದ್ದೇವೆ. ಸೋತವರ ಬದಲು ಶಾಸಕರಿಗೆ ಕೊಡಿ ಅಂದಿದ್ದೇವೆ. ಎಂಟಿಬಿ ನಾಗರಾಜ್, ವಿಶ್ವನಾಥ್, ಶಂಕರ್ ಪಕ್ಷಕ್ಕೆ ತ್ಯಾಗ ಮಾಡಿ ಬಂದವರು. ಈ ಮೂವರಿಗೂ ಸಚಿವ ಸ್ಥಾನ ಕೊಡಲಿ, ನಮ್ಮ ಆಕ್ಷೇಪ ಇಲ್ಲ. ಆದ್ರೆ ಯೋಗೇಶ್ವರ್ ವಿಚಾರದಲ್ಲಿ ನಮ್ಮ ಅಭಿಪ್ರಾಯ ತಿಳಿಸಿದ್ದೇವೆ.‌ ಯೋಗೇಶ್ವರ್ ರಿಗೆ ಮಂತ್ರಿ ಮಾಡೇ ಮಾಡ್ತೀವಿ ಅಂದ್ರೆ ಮಾಡಲಿ. ಹೈಕಮಾಂಡ್, ಸಿಎಂ ನಿರ್ಧಾರಕ್ಕೆ ಬದ್ಧ. ಆದ್ರೆ ಸೋತವರ ಬದಲು ಗೆದ್ದವರಿಗೆ ಕೊಟ್ಟರೆ ಉತ್ತಮ ಅಷ್ಟೇ ಎಂದು ಅಸಮಧಾನ ವ್ಯಕ್ತಪಡಿಸಿದರು.

ನಿನ್ನೆ ನಡೆದ ವಲಸಿಗರ ಸಭೆ ವಿಚಾರದ ಬಗ್ಗೆ ಮಾತನಾಡಿದ ರಾಜುಗೌಡ, ನಿನ್ನೆ ಅವರೆಲ್ಲ ಔತಣಕೂಟಕ್ಕೆ ಸೇರಿದ್ದಿರಬಹುದು. ಆದ್ರೆ ಪಕ್ಷಕ್ಕೆ ಬಂದವರಿಗೆ ಸಿಎಂ ಅವರು ಕೊಟ್ಟ ಮಾತು ಈಡೇರಿಸ್ತಿದ್ದಾರೆ. ಯಾರಿಗೂ ಅಸಮಾಧಾನ ಅನ್ನೋದು ಇಲ್ಲ.‌ಏನೇ ಇದ್ರೂ ನಾಲ್ಕು ಗೋಡೆಗಳ ಮಧ್ಯೆ ಚರ್ಚೆ ನಡೆಯುತ್ತೆ ಎಂದರು. ಪಕ್ಷದಲ್ಲಿ ನಾವೆಲ್ಲ ಒಂದೇ. ಹೊಸಬರು ಹಳಬರು ಭೇದ ಇಲ್ಲ. ನಮ್ಮಲ್ಲಿ ಗುಂಪುಗಾರಿಕೆ ಇಲ್ಲ. ರಮೇಶ್ ಜಾರಕಿಹೊಳಿ ನೇರ ಮಾತಾಡ್ತಾರೆ. ದೆಹಲಿಯಲ್ಲಿ ಏನ್ ಮಾತಾಡ್ತಾರೋ ಇಲ್ಲೂ ಅದೇ ಮಾತಾಡ್ತಾರೆ. ಅವರವರ ಮಧ್ಯೆ ಏನಿದೆಯೋ ಗೊತ್ತಿಲ್ಲ ಎಂದರು.

LEAVE A REPLY

Please enter your comment!
Please enter your name here