ಯಡಿಯೂರಪ್ಪನವರ ರಾಜೀನಾಮೆ ಪಡೆಯುವಂತೆ ಕೇಂದ್ರದ ಇಬ್ಬರು ಸಚಿವರ ಮೇಲೆ ಒತ್ತಡ – ಬಸವನಗೌಡ ಪಾಟೀಲ್ ಯತ್ನಾಳ್.!

0
106
Loading...

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ರಾಜೀನಾಮೆ ಪಡೆಯುವಂತೆ ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರದ ಇಬ್ಬರು ಸಚಿವರು ಪಕ್ಷದ ವರಿಷ್ಠರ ಮೇಲೆ ಒತ್ತಡ ಹಾಕುತ್ತಿದ್ದಾರೆಂದು ಮಾಜಿ ಸಚಿವ ಹಾಗೂ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಇಂದಿಲ್ಲಿ ಹೊಸ ಬಾಂಬ್ ಸಿಡಿಸಿದರು. ಒಂದೆಡೆ ಪಕ್ಷದ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಮತ್ತು ಬಿ.ಎಸ್.ಯಡಿಯೂರಪ್ಪನವರ ಸಂಬಂಧ ದಿನದಿಂದ ದಿನಕ್ಕೆ ಹದಗೆಡುತ್ತಿರುವ ಬೆನ್ನಲ್ಲೇ ಯತ್ನಾಳ್ ಅವರ ಈ ಹೇಳಿಕೆ ಪಕ್ಷದ ವಲಯದಲ್ಲಿ ಮಹತ್ವ ಪಡೆದುಕೊಂಡಿದೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರಿಗೆ 76 ವರ್ಷ ವಯಸ್ಸಾಗಿರುವುದರಿಂದ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಈ ಇಬ್ಬರು ಸಚಿವರು ಹೈಕಮಾಂಡ್ ಮೇಲೆ ನಿರಂತರವಾಗಿ ಒತ್ತಡ ಹಾಕುತ್ತಿದ್ದಾರೆ. ಆದರೆ ಆ ಸಚಿವರು ಯಾರು ಎಂಬುದನ್ನು ಸೂಕ್ತ ಸಮಯದಲ್ಲಿ ಬಹಿರಂಗಪಡಿಸುತ್ತೇನೆ ಎಂದು ಹೇಳಿದರು.

ಕಳೆದ ಒಂದು ತಿಂಗಳಿನಿಂದ ಬಿಎಸ್‍ವೈ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಈ ಇಬ್ಬರು ಸಚಿವರು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಹೈಕಮಾಂಡ್‍ಗೆ ಬಿಎಸ್‍ವೈ ಶಕ್ತಿ ಏನೆಂಬುದು ಗೊತ್ತಿರುವುದರಿಂದಲೇ ಅಷ್ಟು ಸುಲಭವಾಗಿ ಮುಟ್ಟಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು. ಒಂದು ವೇಳೆ ಯಡಿಯೂರಪ್ಪನವರ ಬಗ್ಗೆ ಹೈಕಮಾಂಡ್‍ಗೆ ಅಸಮಾಧಾನವಿದ್ದರೆ ರಾಜೀನಾಮೆ ಪಡೆಯಲಿ. ಈ ರೀತಿ ನಡೆಸಿಕೊಳ್ಳುವುದು ಸರಿಯಲ್ಲ ಎಂದು ಆಕ್ಷೇಪಿಸಿದರು. ಹಿಂದೆ ಅನಂತ್‍ಕುಮಾರ್ ಮತ್ತು ಯಡಿಯೂರಪ್ಪ ಪಕ್ಷದ ವಿಚಾರ ಬಂದಾಗ ಒಬ್ಬರಿಗೊಬ್ಬರು ಜಗಳವಾಡುತ್ತಿದ್ದರು. ಆದರೆ ಎಂದೂ ಕುತಂತ್ರ ರಾಜಕಾರಣ ಮಾಡಲಿಲ್ಲ. ಪಕ್ಷ, ದೇಶ, ರಾಜ್ಯದ ವಿಷಯ ಬಂದಾಗ ಒಂದಾಗುತ್ತಿದ್ದರು.

ಪ್ರಸ್ತುತ ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆ ಬೇರೆಯೇ ಆಗಿವೆ ಎಂದು ಅಸಮಾಧಾನ ಹೊರಹಾಕಿದರು. ನನಗೆ ಬಂದಿರುವ ಮಾಹಿತಿ ಪ್ರಕಾರ ಯಡಿಯೂರಪ್ಪನವರನ್ನು ಮುಗಿಸಲು ಈ ಇಬ್ಬರು ವ್ಯವಸ್ಥಿತವಾದ ಷಡ್ಯಂತ್ರ ನಡೆಸುತ್ತಿದ್ದಾರೆ. ನನಗೆ ದೆಹಲಿಯಿಂದ ವಿಶ್ವಾಸನೀಯ ಮೂಲಗಳು ಇದನ್ನು ಖಚಿತಪಡಿಸಿವೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಪ್ರಧಾನಿ ಭೇಟಿಯಾಗಲು ಅವಕಾಶ ಕೊಡುತ್ತಾರೆ. ಆದರೆ ಯಡಿಯೂರಪ್ಪನವರಿಗೆ ಆ ಅವಕಾಶ ಏಕೆ ಸಿಗುತ್ತಿಲ್ಲ ಎಂದು ಯತ್ನಾಳ್ ಪ್ರಶ್ನೆ ಮಾಡಿದರು.‘ನನ್ನ ಜೀವನದಲ್ಲಿ ನಾನು ಎಂದಿಗೂ ಆಧಾರರಹಿತವಾಗಿ ಆರೋಪ ಮಾಡಿಲ್ಲ. ಹಿಂದೆ ಯಡಿಯೂರಪ್ಪನವರ ಬಗ್ಗೆ ಭಿನ್ನಾಭಿಪ್ರಾಯವಿದ್ದಾಗ ಬಹಿರಂಗವಾಗಿಯೇ ಮಾತನಾಡಿದ್ದೆ.

ಈಗ ಮುಖ್ಯಮಂತ್ರಿಯಾಗಿ ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ. ನಾವು ಅವರಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕೆಂದು ಸಲಹೆ ಮಾಡಿದರು. ರಾಜ್ಯದಲ್ಲಿ ಬಿಜೆಪಿ ಉಳಿಯಬೇಕಾದರೆ ಮೊದಲು ಯಡಿಯೂರಪ್ಪ ಅವರ ವಿರೋಧಿಗಳನ್ನು ಒಗ್ಗೂಡಿಸಿ ಸಮಸ್ಯೆ ಪರಿಹರಿಸಬೇಕು. ಇದನ್ನು ಪರಿಹರಿಸದಿದ್ದರೆ ನಿಮ್ಮನ್ನು ನಾಯಕರೆಂದು ನಾವು ಹೇಗೆ ಕರೆಯುವುದು. ಒಂದಿಬ್ಬರು ಚಾಡಿಕೋರರಿಂದಲೇ ಪಕ್ಷ ಹಾಳಾಗುತ್ತಿದೆ ಎಂದು ಕಿಡಿಕಾರಿದರು. ನಾನು ನೆರೆ ಸಂತ್ರಸ್ತರಿಗೆ ಹಣ ಬಿಡುಗಡೆ ಮಾಡಿಲ್ಲ ಎಂದು ಅಸಮಾಧಾನ ಹೊರಹಾಕಿದ್ದೆ.ಇದನ್ನೇ ಆಧಾರವಾಗಿಟ್ಟುಕೊಂಡು ಕೇಂದ್ರ ನಾಯಕರಿಂದ ನನಗೆ ನೋಟಿಸ್ ಕೊಟ್ಟಿದ್ದಾರೆ. ಇದಕ್ಕೆ ನಾನು ಹೆದರುವ ಜಾಯಮಾನ ನನ್ನದಲ್ಲ ಎಂದು ಎಚ್ಚರಿಸಿದರು.

ಪ್ರಧಾನಿ ಬಳಿ ನನ್ನ ಭಾವನೆಗಳನ್ನು ಹೇಳಿಕೊಳ್ಳಲು ನನಗೇನು ಹೆದರಿಕೆ ಇಲ್ಲ. ಈಗಾಗಲೇ ನೋಟಿಸ್‍ಗೆ ಸಂಬಂಧಿಸಿದಂತೆ ಜೆ.ಪಿ.ನಡ್ಡಾಗೆ ಪತ್ರ ಬರೆದಿದ್ದೇನೆ. ಪ್ರಧಾನಿಯನ್ನು ಭೇಟಿಯಾಗಿಯೇ ನನ್ನ ಭಾವನೆಗಳನ್ನು ಹಂಚಿಕೊಳ್ಳುತ್ತೇನೆ ಎಂದರು. ಕರ್ನಾಟಕದಿಂದ ಕೇಂದ್ರದಲ್ಲಿ ಸಚಿವರಾದ ಪೈಕಿ ನಾನು 4ನೇಯವನು. ನನ್ನನ್ನು ಪಕ್ಷದಿಂದ ಹೊರ ಹಾಕಿದರೂ ಯಾರಿಗೂ ಹೆದರುವುದಿಲ್ಲ. ನನ್ನ ಶಕ್ತಿ ಏನೆಂಬುದು ವಿಧಾನಪರಿಷತ್ ಚುನಾವಣೆಯಲ್ಲಿಯೇ ತೋರಿಸಿದ್ದೇನೆ. ಒಂದಿಬ್ಬರಿಗೆ ಹೆದರಿಕೊಂಡು ಬಾಯಿಮುಚ್ಚಿಕೊಂಡು ಕೂರುವ ವ್ಯಕ್ತಿ ನಾನಲ್ಲ ಎಂದು ಗುಡುಗಿದರು.ನನ್ನ ಶಕ್ತಿ ಏನೆಂಬುದನ್ನು ನೋಡಿಕೊಂಡು ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಷಾ ಮತ್ತು ಪ್ರಕಾಶ್ ಜಾವ್ಡೇಕರ್ ಬಿಜೆಪಿಗೆ ಸೇರ್ಪಡೆ ಮಾಡಿಕೊಂಡರು. ನಾನು ಬಿಜೆಪಿಗೆ ಬರುವಾಗ ಇವರೇನು ಸ್ವಾಗತಕೋರಿರಲಿಲ್ಲ ಎಂದು ಪರೋಕ್ಷವಾಗಿ ತಮ್ಮ ಎದುರಾಳಿಗಳ ವಿರುದ್ಧ ವಾಗ್ದಾಳಿ ನಡೆಸಿದರು.

Loading...

LEAVE A REPLY

Please enter your comment!
Please enter your name here