ವೇತನ ಹೆಚ್ಚಳದ ಕನಸು ಕಂಡಿದ್ದ ಪೊಲೀಸರ ಆಸೆಗೆ ತಣ್ಣೀರು ಎರಚಿದ ಯಡಿಯೂರಪ್ಪ..!

0
265

ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ರಾಘವೇಂದ್ರ ಔರಾದ್ಕರ್ ಶಿಫಾರಸಿನಂತೆ ಪೊಲೀಸರ ವೇತನ ಹೆಚ್ಚಳಕ್ಕೆ ಅಂದಿನ ಸಿಎಂ ಎಚ್..ಡಿ. ಕುಮಾರಸ್ವಾಮಿ ಅವರು ಅಧಿಸೂಚನೆ ಹೊರಡಿಸಿದ್ದರು. ಕಳೆದ ತಿಂಗಳ ಆಗಸ್ಟ್ 1ರಿಂದಲೇ ಅನ್ವಯವಾಗುವಂತೆ ವೇತನ ಹೆಚ್ಚಳ ಮಾಡಬೇಕು ಎಂದು ಆದೇಶ ಹೊರಡಿಸಿದ್ದರು. ಆದರೆ ಈ ಮಧ್ಯೆ ಅಧಿಕಾರಕ್ಕೆ ಬಂದ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಇದೀಗ ವೇತನ ಹೆಚ್ಚಳದ ಕನಸು ಕಂಡಿದ್ದ ಪೊಲೀಸರ ಆಸೆಗೆ ತಣ್ಣೀರು ಎರಚಿದೆ.

ಹೌದು, ಮೈತ್ರಿ ಸರ್ಕಾರ ಕೊನೆ ಕ್ಷಣದಲ್ಲಿ ಹೊರಡಿಸಿದ ಈ ಆದೇಶವನ್ನು ಬಿ.ಎಸ್. ಯಡಿಯೂರಪ್ಪನವರು ಅಧಿಕಾರ ಸ್ವೀಕರಿಸಿದ ಬಳಿಕ ಆದೇಶಗಳನ್ನು ರದ್ದು ಪಡಿಸಿದ್ದರು. ಹೀಗಾಗಿ ವೇತನ ಹೆಚ್ಚಳ ಕನಸು ಕಂಡಿದ್ದ ಪೊಲೀಸರಿಗೆ ಭಾರೀ ನಿರಾಸೆ ಉಂಟಾಗಿದೆ. ಇನ್ನು ಔರಾದ್ಕರ್ ವರದಿ ಅನ್ವಯ ನೂತನ ವೇತನ ಪರಿಷ್ಕಣೆಯಿಂದ ಪೊಲೀಸ್ ರಿಸರ್ವ್ ಕಾನ್ಸ್‍ಸ್ಟೆಬಲ್ 23,500ರಿಂದ 47,650 ರೂ. ಆಗಲಿದೆ. ಹೆಡ್ ಕಾನ್ಸ್‍ಸ್ಟೇಬಲ್‍ಗೆ 27,650ದಿಂದ 52,650 ರೂ. ಏರಿಕೆಯಾಗಲಿದೆ. ಅಸಿಸ್ಟೆಂಟ್ ಸಬ್ ಇನ್ಸ್‍ಪೆಕ್ಟರ್ ಅವರಿಗೆ 30,350 ದಿಂದ 58,250 ರೂ. ವೇತನ ಹೆಚ್ಚಲಿದೆ. ಇನ್ಸ್‍ಪೆಕ್ಟರ್ 43,100ರಿಂದ 83,900 ರೂ. ಹೆಚ್ಚಳ ಆಗಬೇಕಿತ್ತು.

ಇನ್ನು ಮೂರು ದಿನಗಳ ಹಿಂದೆಯಷ್ಟೇ ವೇತನ ಪರಿಷ್ಕರಣೆಗೆ ಆದೇಶಿಸಿ ಡಿಜಿ ಐಜಿಪಿ ಕಚೇರಿಯಿಂದ ಸುತ್ತೋಲೆ ಹೊರಡಿಸಲಾಗಿತ್ತು. ಆದರೆ ಈಗ ವೇತನ ಪರಿಷ್ಕರಣೆಗೆ ಆದೇಶದ ಸುತ್ತೋಲೆಗೆ ತಡೆ ನೀಡಿ ಆಡಳಿತ ವಿಭಾಗದ ಎಡಿಜಿಪಿ ಸಲೀಂ ಅವರು ಆದೇಶ ಪ್ರಕಟಿಸಿದ್ದಾರೆ. ವೇತನ ಪರಿಷ್ಕರಣೆ ಸಂಬಂಧ ಸರ್ಕಾರದಿಂದ ಆದೇಶ ಬರುವರೆಗೂ ಯಾವುದೇ ಕ್ರಮ ಕೈಗೊಳ್ಳದಿರಲು ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಹೀಗಾಗಿ ರಾಜಕೀಯ ಕಾರಣಗಳಿಂದಾಗಿ ಪೊಲೀಸರಿಗೆ ಮೈತ್ರಿ ಸರ್ಕಾರ ನೀಡಿದ್ದ ಕೊಡುಗೆಯನ್ನು ಬಿಜೆಪಿ ಸರ್ಕಾರ ತಡೆ ಹಿಡಿದಿದೆ.

LEAVE A REPLY

Please enter your comment!
Please enter your name here