ಇಂದು ‘ವಿಶ್ವ ಸೊಳ್ಳೆ ದಿನ’ ಈ ದಿನದ ಇತಿಹಾಸ ಮತ್ತು ಮಹತ್ವವೇನು ಗೊತ್ತಾ..?!

0
310

ಆಗಸ್ಟ್-20 ವಿಶ್ವ ಸೊಳ್ಳೆ ದಿನ. ಹೌದು, ಅಚ್ಚರಿ ಎನಿಸಿದರು ಇದು ಸತ್ಯ. ಜಗತ್ತಿನಾದ್ಯಂತ ಆಗಸ್ಟ್ 20ರಂದು ಸೊಳ್ಳೆಗಳ ದಿನವನ್ನಾಗಿ ಆಚರಿಸಲಾಗುತ್ತದೆ. ಇಂದಿನ ದಿನಗಳಲ್ಲಿ ಪ್ರಾಣಿಗಳಿಂದ ಹಿಡಿದು ಮನುಷ್ಯರ ತನಕ ಪ್ರತಿಯೊಂದಕ್ಕೂ ವಿಶೇಷ ದಿನಗಳಿವೆ. ಅದೇ ರೀತಿ ಸೊಳ್ಳೆಗಳ ದಿನವು ಒಂದಿದೆ. ಈ ದಿನಕ್ಕೂ ಅದರದೇ ಆದ ಇತಿಹಾಸ ಮತ್ತು ಮಹತ್ವವಿದೆ.

ವಿಶ್ವ ಸೊಳ್ಳೆ ದಿನದ ಮಹತ್ವ
‘ದ ಲಂಡನ್ ಸ್ಕೂಲ್ ಆಫ್ ಹೈಜಿನ್ ಆಂಡ್ ಟ್ರಾಪಿಕಲ್ ಮೆಡಿಸನ್’ ಈ ದಿನವನ್ನು ಆಚರಣೆ ಮಾಡುತ್ತದೆ. ಸೊಳ್ಳೆಯಿಂದ ಹರಡುವಂತಹ ಮಲೇರಿಯಾ ಮತ್ತು ಇತರ ಪ್ರಾಣಾಂತಿಕ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸುವುದೇ ಸೊಳ್ಳೆ ದಿನದ ಉದ್ದೇಶವಾಗಿದೆ. ಮಲೇರಿಯಾವು ಸೊಳ್ಳೆಯಿಂದ ಹರಡುವುದು ಎಂದು ಪತ್ತೆ ಮಾಡಿದಂತಹ ಸರ್ ರೋಸ್ ಮತ್ತು ಈ ಬಗ್ಗೆ ಕೆಲಸ ಮಾಡಿದಂತಹ ಹಲವಾರು ವಿಜ್ಞಾನಿಗಳಿಗೆ ಈ ದಿನದಂದು ಗೌರವ ಸಲ್ಲಿಸಲಾಗುತ್ತದೆ. ವಿಶ್ವದ ಹಲವು ದೇಶಗಳಲ್ಲಿ ವಿಶ್ವ ಸೊಳ್ಳೆ ದಿನವನ್ನು ಆಚರಿಸಲಾಗುತ್ತದೆ. ಆ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತದೆ.

ವಿಶ್ವ ಸೊಳ್ಳೆ ದಿನದ ಇತಿಹಾಸ
ಸರ್ ರೊಸ್ ಎಂಬ ಬ್ರಿಟಿಷ್ ವಿಜ್ಞಾನಿ ಮಾರಣಾಂತಿಕ ಮಲೇರಿಯಾ ಕಾಯಿಲೆಯನ್ನು ಹೆಣ್ಣು ಅನಾಫಿಲೀಸ್ ಸೊಳ್ಳೆ ಹರಡುತ್ತದೆ ಎಂಬುದನ್ನು ಮೊದಲ ಬಾರಿಗೆ ಪತ್ತೆ ಮಾಡಿದರು. ಹೀಗಾಗಿ ವಿಶ್ವ ಸೊಳ್ಳೆಗಳ ದಿನವನ್ನು ಸರ್ ಡೊನಾಲ್ಡ್ ರೊಸ್ ಅವರು 1897ರಲ್ಲಿ ಸೊಳ್ಳೆಗಳು ಮತ್ತು ಮಲೇರಿಯಾ ನಡುವಿನ ಸಂಬಂಧವನ್ನು ಕಂಡುಹಿಡಿದಿರುವುದಕ್ಕಾಗಿ ಪ್ರತಿ ವರ್ಷ ಆಗಸ್ಟ 20ರಂದು ಆಚರಿಸಲಾಗುತ್ತದೆ. ಇದರ ಸ್ಮರಣಾರ್ಥ ಆಗಸ್ಟ್-20 ರಂದು ವಿಶ್ವ ಸೊಳ್ಳೆ ದಿನವನ್ನು ಆಚರಿಸಲಾಗುತ್ತದೆ.

ಮಾರಣಾಂತಿಕ ಈ ಸೊಳ್ಳೆ
ಪ್ರಪಂಚದಲ್ಲಿ ಹಲವು ಪ್ರಭೇಧದ ಸೊಳ್ಳೆಗಳಿದ್ದು, ಇವುಗಳಿಂದ ಕೆಲವೊಂದು ಕಾಯಿಲೆಗಳು ಹರಡುತ್ತಿದೆ. ಮಲೇರಿಯಾ ಎನ್ನುವ ಮಾರಣಾಂತಿಕ ಜ್ವರದಿಂದಾಗಿ ಪ್ರತೀ ವರ್ಷ ಲಕ್ಷಾಂತರ ಜನರು ಪ್ರಾಣ ಕಳೆದುಕೊಳ್ಳುತ್ತಾರೆ. ಮಲೇರಿಯಾದಿಂದಾಗಿಯೇ ಪ್ರತೀ ದಶಕದಲ್ಲಿ ಸುಮಾರು ಆರು ಮಿಲಿಯನ್ ಸಾವುಗಳು ಸಂಭವಿಸುತ್ತವೆ. ಏಡಿಸ್, ಅನಾಫಿಲೀಸ್, ಕುಲೆಕ್ಸ್ ಸೊಳ್ಳೆಗಳು ಕಾಯಿಲೆಗಳನ್ನು ಹರಡುವ ವಾಹಕಗಳಾಗಿ ಕಾರ್ಯನಿರ್ವಹಿಸುತ್ತವೆ.

ಸೊಳ್ಳೆಗಳ ಸೋಂಕು ಹರಡುವ ವಿಧಾನ
ಮಳೆ ನೀರು ನಿಂತ ಹೊಂಡ ಮತ್ತು ಕೊಚ್ಚೆ ಗುಂಡಿಗಳು, ಭತ್ತದ ಗದ್ದೆ, ಬಾವಿ, ಕೆರೆಗಳು ಮತ್ತಿತ್ತರ ಕಡೆಗಳಲ್ಲಿ ಸೊಳ್ಳೆಗಳು ಸಂತಾನೋತ್ಪತ್ತಿ ಮಾಡುತ್ತವೆ. ಅನಾಫಿಲೀಸ್ ಸೊಳ್ಳೆಯು ಹೆಚ್ಚಾಗಿ ಮುಸ್ಸಂಜೆ ಹಾಗೂ ಮುಂಜಾನೆ ವೇಳೆಯಲ್ಲಿ ಕಚ್ಚುವುದು. ಏಡೀಸ್ ಈಜಿಪ್ಟಿ ಸೊಳ್ಳೆಯು ಯಾವುದೇ ರೀತಿಯ ನೀರಿನ ಸಂಗ್ರಹಾಗಾರದಲ್ಲಿ ಅಥವಾ ಸಣ್ಣ ಮಟ್ಟದ ನೀರಿನಲ್ಲೂ ತನ್ನ ಸಂತಾನೋತ್ಪತ್ತಿ ಮಾಡಬಲ್ಲದು. ಹೆಣ್ಣು ಏಡೀಸ್ ಈಜಿಪ್ಟಿ ಸೊಳ್ಳೆಯು ಡೆಂಗ್ಯೂ, ಚಿಕನ್ ಗುನ್ಯಾ, ಜಿಕಾ ಮತ್ತು ಹಳದಿ ಜ್ವರನವನ್ನು ಮನುಷ್ಯರಿಗೆ ಹರಡುತ್ತವೆ. ಅನಾಫಿಲೀಸ್ ಸೊಳ್ಳೆ ಮಲೇರಿಯಾ, ದುಗ್ಧರಸ ಫೈಲೇರಿಯಾಸಿಸ್ ನಂಥ ಕಾಯಿಲೆಗಳನ್ನು ಹಾಗೂ ಕುಲೆಕ್ಸ್ ಎಂಬ ಸೊಳ್ಳೆ ಜಪಾನೀಸ್ ಎನ್ಸೆಫಾಲಿಟಿಸ್, ದುಗ್ಧರಸ ಫೈಲೇರಿಯಾಸಿಸ್, ವೆಸ್ಟ್ ನೈಲ್ ಜ್ವರವನ್ನು ಹರಡುತ್ತದೆ. ಅದೇ ರೀತಿ ಏಡಿಸ್ ಸೊಳ್ಳೆ ಚಿಕನ್ ಗುನ್ಯಾ, ಡೆಂಗ್ಯೂ, ದುಗ್ಧರಸ ಫೈಲೇರಿಯಾಸಿಸ್, ರಿಫ್ಟ್ ವ್ಯಾಲಿ ಜ್ವರ, ಹಳದಿ ಜ್ವರ, ಜಿಕಾನಂಥ ಕಾಯಿಲೆಗಳನ್ನು, ಅದರಲ್ಲೂ ಹೆಣ್ಣು ಅನಾಫಿಲೀಸ್ ಸೊಳ್ಳೆಯು ಮಲೇರಿಯಾ ಕಾಯಿಲೆ ಹರಡುವ ಪ್ರಮುಖ ಕೀಟವಾಗಿದೆ.

LEAVE A REPLY

Please enter your comment!
Please enter your name here