ಈ ಜಗತ್ತಿನ ಸೃಷ್ಠಿಕರ್ತ ಬ್ರಹ್ಮ. ಅಲ್ಲದೇ ಜಗತ್ತಿನ ಅಣು ರೇಣು ತೃಣಕಾಷ್ಟಗಳನ್ನು ಅವನೇ ಸೃಷ್ಠಿ ಮಾಡಿದ್ದಾನೆ ಎಂಬುದು ನಮ್ಮ ಪೌರಾಣಿಕ ಕಥೆಗಳು ಹೇಳುತ್ತವೆ. ಆದರೆ ಬ್ರಹ್ಮದೇವನನ್ನು ಎಲ್ಲೋ ಒಂದೆರಡು ಕಡೆ ಬಿಟ್ಟರೆ ಬಹುತೇಕ ಹೆಚ್ಚಾಗಿ ಪೂಜೆ ಮಾಡುವುದಿಲ್ಲ. ಹಾಗಾದರೆ ಏಕೆ ಬ್ರಹ್ಮ ದೇವನನ್ನು ಪೂಜೆ ಮಾಡುವುದಿಲ್ಲ ಎಂಬ ವಿಚಾರವನ್ನು ನಾವಿಲ್ಲಿ ನಿಮಗೆ ತಿಳಿಸಿಕೊಡುತ್ತಿದ್ದೇವೆ.
ಸೃಷ್ಠಿಯ ಕಲ್ಯಾಣಕ್ಕಾಗಿ ಬ್ರಹ್ಮದೇವ ಯಜ್ಞವೊಂದನ್ನು ಮಾಡಬೇಕಾಗಿರುತ್ತದೆ. ಈ ಯಜ್ಞ ಮಾಡಲು ಸೂಕ್ತವಾದ ಜಾಗ ಸಿಕ್ಕಿರುವುದಿಲ್ಲ. ಹಾಗಾಗಿ ಕಮಲವೊಂದನ್ನು ಭೂಮಿಗೆ ಕಳುಹಿಸಲಾಗುತ್ತದೆ. ಈ ಕಮಲ ಯಾವ ಜಾಗದಲ್ಲಿ ಬೀಳುವುದೋ ಅಲ್ಲಿ ಯಜ್ಞ ಮಾಡುವ ನಿರ್ಣಯವನ್ನು ತೆಗೆದುಕೊಳ್ಳಲಾಗುತ್ತದೆ.
ಈ ಕಮಲವು ರಾಜಸ್ಥಾನದ ಪುಷ್ಕರ ಎಂಬ ಜಾಗದಲ್ಲಿ ಬೀಳುತ್ತದೆ. ಕಮಲ ಬಿದ್ದ ಜಾಗ ನದಿಯಾಗಿ ಬದಲಾಗುತ್ತದೆ. ಹಾಗಾಗಿ ಈ ನದಿ ದಡದಲ್ಲಿ ಯಜ್ಞ ಮಾಡಲು ಬೇಕಾದ ಎಲ್ಲಾ ತಯಾರಿಯನ್ನು ಮಾಡಿಕೊಳ್ಳಲಾಗುತ್ತದೆ. ಈ ಯಜ್ಞ ಸಂಪೂರ್ಣವಾಗಬೇಕಾದರೆ ಒಂದು ಹೆಣ್ಣು ಅದರಲ್ಲೂ ನಿಮ್ಮ ಪತ್ನಿಯ ಉಪಸ್ಥಿತಿ ಬಹಳ ಪ್ರಮುಖವಾಗಿರುತ್ತದೆ ಎನ್ನಲಾಗುತ್ತದೆ. ಬ್ರಹ್ಮನ ಹೆಂಡತಿ ಅಂದರೆ ಸಾವಿತ್ರಿ ಆ ಯಜ್ಞದ ಸ್ಥಳಕ್ಕೆ ತಲುಪುವುದು ನಿಧಾನವಾಗುತ್ತದೆ.ಈ ಸಂದರ್ಭದಲ್ಲಿ ಬ್ರಹ್ಮನಿಗೆ ಏನು ಮಾಡುವುದು ಎಂಬುದು ಗೊತ್ತಾಗುವುದಿಲ್ಲ. ಸಾಕಷ್ಟು ಸಮಯದವರೆಗೆ ಆಕೆಯ ಬರುವಿಕೆಗಾಗಿ ಕಾಯಲಾಗುತ್ತದೆ.

ಸಮಯ ಮೀರುತ್ತಿರುವುದನ್ನು ಕಂಡು ಬ್ರಹ್ಮದೇವ ಅಲ್ಲಿಯೇ ಇರುವ ದಾಸಿಯೊಬ್ಬಳನ್ನು ಕರೆದುಕೊಂಡು ಬಂದು ಮದುವೆಯಾಗಿ ಆಕೆಯನ್ನೇ ಯಜ್ಞ ಕುಂಡ ಬಳಿ ಕರೆತಂದು ಕೂರಿಸಲಾಗುತ್ತದೆ. ಇನ್ನೇನು ಯಜ್ಞ ಮುಗಿಯಬೇಕು ಎನ್ನುವಷ್ಟರಲ್ಲಿ ಸಾವಿತ್ರಿ ಯಜ್ಞ ನಡೆಯುತ್ತಿರುವ ಸ್ಥಳಕ್ಕೆ ತಲುಪುತ್ತಾಳೆ. ಅದೇ ವೇಳೆಗೆ ಬ್ರಹ್ಮನ ಬಳಿ ಇನ್ನೊಂದು ಹೆಣ್ಣು ಕೂತಿರುವುದನ್ನು ನೋಡಿ ಕೋಪಗೊಳ್ಳುತ್ತಾಳೆ.
ಅಲ್ಲದೇ ಸಾವಿತ್ರಿ ಭೂಮಿಯಲ್ಲಿ ಯಾರೂ ನಿನ್ನನ್ನು ಪೂಜೆ ಮಾಡುವುದಿಲ್ಲ ಹಾಗೂ ಯಾರೇ ಪೂಜೆ ಮಾಡಬೇಕಾದರೂ ಕೂಡ ನಿನ್ನನ್ನು ನೆನಪು ಮಾಡಿಕೊಳ್ಳುವುದಿಲ್ಲ ಎಂದು ಶಾಪ ನೀಡುತ್ತಾಳೆ. ಈ ಶಾಪದಿಂದ ಇಡೀ ದೇವಾನುದೇವತೆಗಳೇ ನಡುಗಿ ಹೋಗುತ್ತಾರೆ. ಏಕೆಂದರೆ, ಬ್ರಹ್ಮನೇ ಸೃಷ್ಟಿಕರ್ತ ಅವನನ್ನೇ ಪೂಜೆ ಮಾಡಲಿಲ್ಲ ಎಂದರೆ ಏನು ಅರ್ಥ ಎಂದು ಚಿಂತಾಕ್ರಾಂತರಾಗುತ್ತಾರೆ. ಸಾವಿತ್ರಿ ಶಾಂತಳಾದ ನಂತರ ಲೋಕ ಕಲ್ಯಾಣಕ್ಕಾಗಿ ಈ ಯಜ್ಞವನ್ನು ಮಾಡಬೇಕಾಗಿ ಬಂತು. ಅಲ್ಲದೇ, ಈ ಶಾಪವನ್ನು ಹಿಂಪಡೆಯುವಂತೆಯೂ ಹೇಳಲಾಗುತ್ತದೆ. ಆದರೆ ಈ ಶಾಪವನ್ನು ಸಂಪೂರ್ಣವಾಗಿ ಹಿಂಪಡೆಯಲು ಸಾಧ್ಯವಿಲ್ಲ. ನೀವು ಮಾಡಿದ ಯಜ್ಞ ಮಾಡಿದ ಸ್ಥಳದಲ್ಲಿ ಮಾತ್ರವೇ ಪೂಜೆ ಮಾಡಲಾಗುತ್ತದೆ ಎಂದು ಹೇಳುತ್ತಾಳೆ.

ಹಾಗಾಗಿ ಬ್ರಹ್ಮನಿಗಾಗಿ ಆ ಜಾಗದಲ್ಲಿ ದೇವಸ್ಥಾನವೊಂದನ್ನು ನಿರ್ಮಾಣ ಮಾಡಲಾಗುತ್ತದೆ. ಇಂದಿಗೂ ರಾಜಸ್ಥಾನದಲ್ಲಿ ಈ ದೇವಸ್ಥಾನವಿದೆ.