ಖ್ಯಾತ ನಿರ್ದೇಶಕರೊಬ್ಬರು ಹೀರೋಯಿನ್ ಕಾಲಿಗೆ ಬೀಳುವುದು ಎಂದರೇನು..? ಇದು ನಿಜಕ್ಕೂ ಆಶ್ಚರ್ಯ. ಹಿರಿಯ ನಟರ ಕಾಲಿಗೆ ಬಿದ್ದರೆ ಅದು ಆಶೀರ್ವಾದ ಎನಿಸಿಕೊಳ್ಳುತ್ತದೆ. ಆದರೆ ತನಗಿಂತ ಬಹಳ ಚಿಕ್ಕವಳಾದ ನಾಯಕಿ ಕಾಲಿಗೆ ಬಿದ್ದರೆ..!
ಅಂದಹಾಗೆ ಆ ನಾಯಕಿ ಕಾಲಿಗೆ ಬಿದ್ದವರು ಮತ್ಯ್ತಾರೂ ಅಲ್ಲ, ಖ್ಯಾತ ನಿರ್ದೇಶಕ ರಾಮ್ಗೋಪಾಲ್ ವರ್ಮಾ. 4-5 ದಿನಗಳ ಹಿಂದೆ ತೆಲುಗಿನ ‘ಬ್ಯೂಟಿಫುಲ್’ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮದ ವೇಳೆ ನಾಯಕಿ ಜೊತೆ ವೇದಿಕೆ ಮೇಲೆ ಸ್ಟೆಪ್ ಹಾಕಿ ವರ್ಮಾ ಎಲ್ಲರ ಗಮನ ಸೆಳೆದಿದ್ದರು. ಇದೀಗ ಆ ಚಿತ್ರದ ನಾಯಕಿ ನೈನಾ ಗಂಗೂಲಿ ಕಾಲಿನ ಮೇಲೆ ಬಿದ್ದು ವರ್ಮಾ ಸುದ್ದಿಯಾಗಿದ್ದಾರೆ.
ಅಗಸ್ತ್ಯ ಮಂಜು ನಿರ್ದೇಶನದ ‘ಬ್ಯೂಟಿಫುಲ್’ ಸಿನಿಮಾ ಜನವರಿ 1 ರಂದು ಪ್ರೇಕ್ಷಕರ ಮುಂದೆ ಬರಲಿದೆ. ಚಿತ್ರದಲ್ಲಿ ನೈನಾ ಗಂಗೂಲಿ ಹಾಗೂ ಸೂರಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಭಾನುವಾರ ನಡೆದ ಪ್ರೀ ನ್ಯೂ ಇಯರ್ ಪಾರ್ಟಿಯಲ್ಲಿ ಇಡೀ ಚಿತ್ರತಂಡ ಹಾಜರಿತ್ತು. ಅಭಿಮಾನಿಗಳು ಕೂಡಾ ದೊಡ್ಡ ಸಂಖ್ಯೆಯಲ್ಲಿ ಹಾಜರಿದ್ದರು. ಈ ವೇಳೆ ‘ರಾ ಕಸಿತಿರಾ’ ಎಂಬ ಹಾಡಿಗೆ ಎಲ್ಲರೂ ಡ್ಯಾನ್ಸ್ ಮಾಡುವಾಗ ಇದ್ದಕ್ಕಿದ್ದಂತೆ ರಾಮ್ಗೋಪಾಲ್ ವರ್ಮಾ ನೈನಾ ಕಾಲಿಗೆ ಬಿದ್ದರು. ಕೂಡಲೇ ನೈನಾ ಗಾಬರಿಯಿಂದ ಅವರನ್ನು ಮೇಲೆತ್ತಿ ಭಾವೋದ್ವೇಗಕ್ಕೆ ಒಳಗಾಗಿ ನೈನಾ ಆರ್ಜಿವಿ ಅವರನ್ನು ಹಿಡಿದುಕೊಂಡು ಕಣ್ಣೀರು ಹಾಕಿದರು. ಇದಕ್ಕೆ ಸಂಬಂಧಿಸಿದ ಫೋಟೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.