2016 ರಲ್ಲಿ ಬಿಡುಗಡೆಯಾದ ‘ತಿಥಿ’ ಸಿನಿಮಾ ರಾಷ್ಟ್ರೀಯ ಮಟ್ಟದಲ್ಲಿ ಮಾತ್ರವಲ್ಲ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಮನ್ನಣೆ ಗಳಿಸಿದ ಗ್ರಾಮೀಣ ಹಿನ್ನೆಲೆ ಕಥೆ ಹೊಂದಿರುವ ಅತ್ಯುತ್ತಮ ಚಿತ್ರ.
ಪ್ರದೀಪ್ ರೆಡ್ಡಿ ನಿರ್ಮಾಣದ ಈ ಸಿನಿಮಾವನ್ನು ರಾಮ್ರೆಡ್ಡಿ ನಿರ್ದೇಶಿಸಿದ್ದಾರೆ. ಈ ಚಿತ್ರದ ಕಥೆ ಈರೇಗೌಡ ಅವರದ್ದು. 63ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸೇರಿ ಇದುವರೆಗೂ ಸುಮಾರು 15 ಪ್ರಶಸ್ತಿಗಳನ್ನು ಸಿನಿಮಾ ಬಾಚಿಕೊಂಡಿದೆ. ಇನ್ನು ಒಂದಿಬ್ಬರು ಬಿಟ್ಟರೆ ಈ ಸಿನಿಮಾದಲ್ಲಿ ನಟಿಸಿರುವ ಬಹುತೇಕ ಕಲಾವಿದರು ವೃತ್ತಿಪರರಲ್ಲ. ಚಿತ್ರೀಕರಣವೆಲ್ಲಾ ಮಂಡ್ಯ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಜರುಗಿದ್ದು ಹಳ್ಳಿ ಜನರನ್ನೇ ಸಿನಿಮಾ ನಟರನ್ನು ಬಳಸಿಕೊಳ್ಳಲಾಗಿತ್ತು.
ಇನ್ನು ಈ ಸಿನಿಮಾದಲ್ಲಿ ಕುರಿ ಕಾಯುವ ಹುಡುಗಿ ಆಗಿ ನಟಿಸಿದ್ದ ಕಾವೇರಿ ನಿಮಗೆ ನೆನಪಿರಬಹುದು. ಈಕೆಯ ನಿಜ ಹೆಸರು ಪೂಜಾ. ಮೂಲತ: ರಾಣೆಬೆನ್ನೂರಿನ ಹುಡುಗಿ. ಸಿನಿಮಾದಲ್ಲಿ ಈಕೆಯನ್ನು ನೋಡಿದವರು ನಿಜಕ್ಕೂ ಇವರು ಹಳ್ಳಿ ಹುಡುಗಿ ಎಂದೇ ನಂಬಿದ್ದರು. ಏಕೆಂದರೆ ಪೂಜಾ ತಮ್ಮ ಪಾತ್ರಕ್ಕಾಗಿ ಅಷ್ಟು ತಯಾರಿ ಮಾಡಿಕೊಂಡಿದ್ದರು. ಪೂಜಾಗೆ ಕೂಡಾ ಈ ಸಿನಿಮಾ ಮೊದಲನೆಯದ್ದು. ಮೈಸೂರಿನಲ್ಲಿ ಬಿಸಿಎ ಓದುತ್ತಿದ್ದ ಪೂಜಾಗೆ ‘ತಿಥಿ’ ಚಿತ್ರಕ್ಕಾಗಿ ಆಡಿಶನ್ ನಡೆಯುತ್ತಿದೆ ಎಂಬ ವಿಷಯ ತಿಳಿಯಿತು. ನಟನೆಯಲ್ಲಿ ಆಸಕ್ತಿ ಇದ್ದ ಪೂಜಾ ಸಿನಿಮಾದಲ್ಲಿ ನಟಿಸಲು ಸೆಲೆಕ್ಟ್ ಆದರು.
ಆದರೆ ಆ ಸಿನಿಮಾಗಾಗಿ ಅವರು ತೂಕ ಇಳಿಸಬೇಕಾಯ್ತು. ಅದಕ್ಕಾಗಿ ಮೈಸೂರಿನ ಚಾಮುಂಡಿ ಬೆಟ್ಟವನ್ನು ಪ್ರತಿದಿನ ಹತ್ತಿ ಇಳಿಯುತ್ತಿದ್ದರು. ಇದರಿಂದ ಪೂಜಾ 2-3 ತಿಂಗಳಲ್ಲಿ 15 ಕಿಲೋ ತೂಕ ಇಳಿಸಿದರು. ಇನ್ನು ಹಳ್ಳಿ ಹುಡುಗಿಯಂತೆ ನೈಸರ್ಗಿಕವಾಗಿ ಕಾಣಲು ಪೂಜಾರನ್ನು ಶೂಟಿಂಗ್ ಸಮಯದಲ್ಲಿ ರಾಮ್ರೆಡ್ಡಿ ಹಾಗೂ ಈರೇಗೌಡ ಬಿಸಿಲಿನಲ್ಲಿ ನಿಲ್ಲಲು ಹೇಳುತ್ತಿದ್ದರಂತೆ. ಜೊತೆಗೆ ಚಿತ್ರದಲ್ಲಿ ಪೂಜಾ ಉತ್ತರ ಕರ್ನಾಟಕದ ಹುಡುಗಿ ಪಾತ್ರ ಮಾಡಬೇಕಿದ್ದರಿಂದ ಆ ಭಾಷೆ ಕಲಿಯಲು ಶೂಟಿಂಗ್ ವೇಳೆ ಹೆಚ್ಚಾಗಿ ಆ ಜನರ ನಡುವೆ ಹೆಚ್ಚು ಕಾಲ ಕಳೆಯುತ್ತಿದ್ದರಂತೆ. ಅಂತೂ ಇಂತೂ ಶೂಟಿಂಗ್ನಲ್ಲಿ ಪಾಲ್ಗೊಂಡಿದ್ದೂ ಆಯ್ತು, ಸಿನಿಮಾಗೂ ಒಳ್ಳೆ ಹೆಸರು ಬಂತು. ಜೊತೆಗೆ ಪೂಜಾಗೆ ಮೊದಲ ಸಿನಿಮಾದಲ್ಲೇ ಉತ್ತಮ ನಟಿ ಪ್ರಶಸ್ತಿ ಕೂಡಾ ಸಿಕ್ತು.
ಇನ್ನು ‘ತಿಥಿ’ ಚಿತ್ರದ ನಂತರ ‘ಮೂಕಹಕ್ಕಿ’ ಹಾಗೂ ‘ನೀವು ಕರೆಮಾಡಿದ ಚಂದಾದಾರರು ಬ್ಯುಸಿಯಾಗಿದ್ದಾರೆ’ ಸಿನಿಮಾದಲ್ಲಿ ಪೂಜಾ ನಟಿಸಿದರು. ‘ಮೂಕಹಕ್ಕಿ’ ಚಿತ್ರದ ಶೂಟಿಂಗ್ ವೇಳೆ ಆಕಸ್ಮಿಕವಾಗಿ ಗೂಳಿ ತಿವಿದು ಪೆಟ್ಟಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸ್ವಲ್ಪ ದಿನಗಳ ಕಾಲ ರೆಸ್ಟ್ ಮಾಡಲು ನಟನೆಯಿಂದ ದೂರವಿದ್ದರು. ಜೊತೆಗೆ ಎಂಸಿಎ ಮಾಡುತ್ತಿದ್ದರಿಂದ ಓದಿನ ಕಡೆಗೆ ಗಮನ ಹರಿಸಬೇಕಾಯ್ತು. ಪೂಜಾ ಆಕ್ಟಿಂಗ್ ಮಾತ್ರವಲ್ಲ ಸ್ಪೋಟ್ರ್ಸ ಹಾಗೂ ಓದಿನಲ್ಲಿ ಕೂಡಾ ಮುಂದೆ ಇದ್ದಾರೆ. ಎಂಸಿಎನಲ್ಲಿ ಶೇಕಡಾ 82 ರಷ್ಟು ಅಂಕ ಗಳಿಸಿ ಡಿಸ್ಟಿಂಕ್ಷನ್ನಲ್ಲಿ ಪಾಸ್ ಆಗಿದ್ದಾರೆ.
ಇದೀಗ ಸುಮಾರು ಒಂದೂವರೆ ವರ್ಷದ ನಂತರ ಮತ್ತೆ ನಟನೆಗೆ ವಾಪಸಾಗಿದ್ದಾರೆ. ‘ಬೀದಿದೀಪ’ ಹಾಗೂ ‘ದಾರಿ ಯಾವುದಯ್ಯಾ ವೈಕುಂಠಕೆ’ ಎಂಬ ಸಿನಿಮಾಗಳಿಗೆ ಸಹಿ ಹಾಕಿದ್ದಾರೆ. ಎರಡೂ ಸಿನಿಮಾಗಳಲ್ಲೂ ಪೂಜಾ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಪೂಜಾಗೆ ಹೆಚ್ಚಿನ ಅವಕಾಶಗಳು ದೊರೆಯಲಿ ಹಾಗೂ ಅವರ ಸಿನಿಮಾಗಳು ‘ತಿಥಿ’ ಸಿನಿಮಾದಂತೆ ಹೆಸರು ಮಾಡಲಿ ಎಂದು ಹಾರೈಸೋಣ.