ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ ಮಹಾರಾಷ್ಟ್ರ ಸಂಪೂರ್ಣ ನಲುಗಿದೆ ಎನ್ನಬಹುದು. ಇತ್ತ ಮಹಾರಾಷ್ಟ್ರದಲ್ಲಿ ಉಂಟಾಗಿರುವ ಭಾರಿ ಮಳೆಯಿಂದ ಕರ್ನಾಟಕಕ್ಕೂ ಮಳೆಯ ಆರ್ಭಟ ಬಿಸಿದೆ. ಕೊಯ್ನಾ ಡ್ಯಾಂ ಸಂಪೂರ್ಣ ಭರ್ತಿಯಾಗಿದ್ದು, ಕೊಯ್ನಾ ಡ್ಯಾಂನಲ್ಲಿ ನೀರಿನ ಪ್ರಮಾಣ ಹೆಚ್ಚಿರುವ ಕಾರಣ ಪ್ರವಾಹದ ಭೀತಿ ಎದುರಾಗಿದೆ. ಡ್ಯಾಂನಲ್ಲಿ ನೀರು ಗರಿಷ್ಠ ಮಟ್ಟವನ್ನು ಮೀರಿ ತುಂಬಿರುವ ಕಾರಣ ಎಲ್ಲ ಒಂಬತ್ತು ಕ್ರಸ್ಟ್ ಗೇಟ್ಗಳನ್ನು ತೆರೆದು ನೀರು ಹೊರಬಿಡಲಾಗುತ್ತಿದೆ.
ಬೆಳಗಾವಿ ಜಿಲ್ಲೆಯಲ್ಲೂ ವರುಣನ ಆರ್ಭಟ ಹೆಚ್ಚಿದ್ದು, ಕೆರೆ,ಕಟ್ಟೆಗಳೆಲ್ಲ ತುಂಬಿ ಹೋಗಿದೆ. ಜೊತೆಗೆ ಸೇತುವೆ ಸಂಪೂರ್ಣ ಮುಳುಗಿ ಹೋಗಿದ್ದು, ಸೇತುವೆ ಮೇಲೆ ಯಾರು ಹೋಗಲು ಸಾಧ್ಯವಿರದ ಪರಿಸ್ಥಿತಿ ಉಂಟಾಗಿದೆ. ಇಂತಹ ಪರಿಸ್ಥಿತಿಯಲ್ಲೂ ಬೆಳಗಾವಿ ಜನರು ಯಾರ ಮಾತಿಗೂ ತಲೆ ಕೆಡಿಸಿಕೊಳ್ಳದೆ, ಸೇತುವೆ ಮೇಲೆ ಓಡಾಡುತ್ತಿದ್ದಾರೆ. ಜೊತೆಗೆ ಕೆಲವರು ನೀರಿನಲ್ಲಿ ಮೋಜು ಮಸ್ತಿ ಮಾಡುತ್ತಿದ್ದಾರೆ. ಜಿಲ್ಲೆಯ ಅಧಿಕಾರಿಗಳು ಮನೆಯಿಂದ ಯಾವುದೆ ಕಾರಣಕ್ಕೂ ಹೊರ ಬರಬೇಡಿ, ಮಳೆಯ ಆರ್ಭಟ ಜೋರಾಗಿರುವ ಕಾರಣ ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಳ್ಳಿ ಎಂದು ಅಧಿಕಾರಿಗಳು ಎಷ್ಟೇ ಸೂಚನೆ ನೀಡಿದರೂ ಇದಕ್ಕೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಚಿಕ್ಕೋಡಿಯ ಕುರ್ಲಿ, ನಾಗನೂರು ಜನರು ಈ ಹುಚ್ಚು ಸಾಹಸಕ್ಕೆ ಮುಂದಾಗಿದ್ದಾರೆ ಎನ್ನಬಹುದು. ಪವನ ಡ್ಯಾಂಗೆ ಹೆಚ್ಚು ಪ್ರಮಾಣದಲ್ಲಿ ನೀರು ತುಂಬಿದ್ದ ಕಾರಣ ಡ್ಯಾಂ ಗೇಟ್ ಓಪನ್ ಮಾಡಿ ನೀರು ಹೊರಬಿಟ್ಟಿದ್ದಾರೆ. ಮಳೆಯ ಅವಾಂತರ ಇನ್ನೂ ಹೆಚ್ಚಾಗಲಿದ್ದು, ಹವಾಮಾನ ಇಲಾಖೆ ಹಾಗೂ ಜಿಲ್ಲಾಧಿಕಾರಿಗಳು ಈಗಾಗಲೇ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಸೂಚನೆ ಹೊರಡಿಸಿದೆ.