ನಾವು ಎಸ್ ಬಿಎಂ ಒಂದೇ, ಬೇರೆ ಅಲ್ಲ: ಎಸ್ ಟಿ ಸೋಮಶೇಖರ್

0
54

ತುಮಕೂರು: ಮೊನ್ನೆಯಷ್ಟೇ, ಮುನಿರತ್ನ ಗೆ ನಮ್ಮ ಮೇಲೆ ನಂಬಿಕೆ ಇದ್ದರೆ ಜೊತೆಗೆ ಇರುತ್ತೇವೆ. ಇಲ್ಲದಿದ್ದರೆ ಅವರ ಪಾಡು ಅವರಿಗೆ ಎಂದಿದ್ದ ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಇಂದು ಪ್ಲೇಟ್ ಬದಲಿಸಿದ್ದಾರೆ. ನಮ್ಮ ನಡುವೆ ಯಾವುದೇ ಅಸಮಧಾನ ಇಲ್ಲ. ನಾವು ಎಸ್ ಬಿ ಎಂ ಒಂದೇ. ಬೇರೆ ಯಲ್ಲ ಎಂದು ತೇಪೆ ಹಾಕಿದರು.

“ಮುನಿರತ್ನ ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ”

ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹಾಗೂ ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜು ತುಮಕೂರಿನ ಶ್ರೀ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಸಿದ್ಧಲಿಂಗ ಸ್ವಾಮೀಜಿ ಅವರ ಆಶೀರ್ವಾದ ಪಡೆದರು. ಬಳಿಕ ಮಾತನಾಡಿದ ಅವರು, ಶಾಸಕರಾದ ಮುನಿರತ್ನ ಹಾಗೂ ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ನಾವು ಎಸ್ ಬಿಎಂ ಒಂದೇ ಆಗಿದ್ದೇವೆ. ನಾವು ಬೇರೆ ಅಲ್ಲ ಎಂದು ಸಹಕಾರ ಸಚಿವರಾದ ಎಸ್.ಟಿ. ಸೋಮಶೇಖರ್ ತಿಳಿಸಿದರು.

ಆಗ ನಡೆದ ಚುನಾವಣೆಯಲ್ಲಿ ನಾನು, ಬಿ.ಎ. ಬಸವರಾಜು ಅವರು ಗೆದ್ದು ಮಂತ್ರಿ ಆಗಿದ್ದೇವೆ. ಆಗ ಎಸ್ ಬಿ ಎಂದು ಕರೆಯಲ್ಪಟ್ಟೆವು. ಮುನಿರತ್ನ ಅವರು ಮಂತ್ರಿಯಾದಾಗ ಮತ್ತೆ ಎಸ್ ಬಿಎಂ ಎಂದು ನೀವೇ ಹೇಳುತ್ತೀರಿ. ಮುನಿರತ್ನ ಅವರಿಗೆ ಸಚಿವ ಸ್ಥಾನ ನೀಡುವುದು ಮುಖ್ಯಮಂತ್ರಿಗಳ ಪರಮಾಧಿಕಾರ. ಅವರು ಕೊಟ್ಟ ಮಾತಿಗೆ ಎಂದೂ ತಪ್ಪಿಲ್ಲ. ಮಾತು ಕೊಟ್ಟಂತೆ ಸೋತವರಿಗೂ ಸಹ ಮಂತ್ರಿ ಸ್ಥಾನವನ್ನು ಕೊಟ್ಟವರು ಅವರು. ಹೀಗಾಗಿ ಮುಖ್ಯಮಂತ್ರಿಗಳೇ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಸಚಿವರಾದ ಸೋಮಶೇಖರ್ ತಿಳಿಸಿದರು.

ಆರ್. ಶಂಕರ್, ಎಂಟಿಬಿ ನಾಗರಾಜ್, ಮುನಿರತ್ನ ಸೇರಿದಂತೆ ಐವರು ಸಚಿವ ಸ್ಥಾನದ ಆಕಾಂಕ್ಷಿತರಿದ್ದಾರೆ. ಹೀಗಾಗಿ ಪಕ್ಷದ ಎಲ್ಲರಿಗೂ ಸೂಕ್ತ ಸಂದರ್ಭದಲ್ಲಿ ಸ್ಥಾನ ನೀಡಬೇಕು. ಪಕ್ಷದಲ್ಲಿ ಮೊದಲಿನಿಂದಲೂ ದುಡಿದವರು ಸಹ ಇದ್ದಾರೆ. ಈ ನಿಟ್ಟಿನಲ್ಲಿ ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ ಅವರು ಮಾತನಾಡಿರಬಹುದು ಎಂದು ಉತ್ತರಿಸಿದರು.

67ನೇ ಅಖಿಲ ಭಾರತ ಸಹಕಾರ ಸಪ್ತಾಹವನ್ನು ದಾವಣಗೆರೆಯಲ್ಲಿ ನೆರವೇರಿಸಿದ್ದೇವೆ. ಒಟ್ಟು 7 ದಿನ ಕಾರ್ಯಕ್ರಮವನ್ನು ರಾಜ್ಯದ ವಿವಿಧ ಭಾಗಗಳಲ್ಲಿ ಹಮ್ಮಿಕೊಂಡಿದ್ದೇವೆ. ಈಗಾಗಲೇ ಬೆಂಗಳೂರು, ಮಂಗಳೂರು ಹಾಗೂ ದಾವಣಗೆರೆಯಲ್ಲಿ ಕಾರ್ಯಕ್ರಮ ನಡೆದಿದ್ದು, ನಾಳೆ ಚಿಕ್ಕಬಳ್ಳಾಪುರದಲ್ಲಿದೆ ಎಂದ ಸಚಿವರು, ನಾನು ಈ ಮಾರ್ಗವಾಗಿ ಸಂಚರಿಸುವಾಗೆಲ್ಲ ತುಮಕೂರು ಶ್ರೀಮಠಕ್ಕೆ ಭೇಟಿ ನೀಡುವ ಪರಿಪಾಠವನ್ನು ಬೆಳೆಸಿಕೊಂಡಿದ್ದೇನೆ ಎಂದು ತಿಳಿಸಿದರು.ಈ ವೇಳೆ ನಗರಾಭಿವೃದ್ಧಿ ಸಚಿವರಾದ ಬಿ.ಎ.ಬಸವರಾಜು ಇದ್ದರು.

LEAVE A REPLY

Please enter your comment!
Please enter your name here