ಸ್ಪೂಕಿ ಕಾಲೇಜು ಸೇರಿದ ಕಿರುತೆರೆಯ ವಸಂತ

0
196

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮತ್ತೆ ವಸಂತ ಧಾರಾವಾಹಿಯಲ್ಲಿ ನಾಯಕ ವಸಂತ ಆಗಿ ನಟಿಸುತ್ತಿದ್ದ ವಿವೇಕ್ ಸಿಂಹ ಅವರು ಇದೀಗ ಬೆಳ್ಳಿತೆರೆಯ ಸಲುವಾಗಿ ಕಿರುತೆರೆಗೆ ಬಾಯ್ ಹೇಳಿದ್ದರು. ಸಿನಿಮಾ ಕಾರಣದಿಂದಲೇ ಕಿರುತೆರೆಯಿಂದ ಹೊರಬರುತ್ತಿದ್ದೇನೆ ಎಂದು ಇತ್ತೀಚೆಗಷ್ಟೇ ಹೇಳಿರುವ ವಿವೇಕ್ ಸಿಂಹ ಮತ್ತೆ ವಸಂತ ಧಾರಾವಾಹಿಯಿಂದ ಹೊರಬಂದಿರುವುದು ತಿಳಿದೇ ಇದೆ. ಇದೀಗ ಅವರು ಹಾರರ್ ಸಿನಿಮಾದ ಮೂಲಕ ಬೆಳ್ಳಿತೆರೆಯಲ್ಲಿ ಕಮಾಲ್ ಮಾಡಲು ಬರುತ್ತಿದ್ದಾರೆ. ಹೆಚ್ ಕೆ ಪ್ರಕಾಶ್ ನಿರ್ಮಾಣದ ಹಾರರ್ ಸಿನಿಮಾ ಸ್ಪೂಕಿ ಕಾಲೇಜು ವಿನಲ್ಲಿ ವಿವೇಕ್ ಸಿಂಹ ಕಾಣಿಸಿಕೊಳ್ಳಲಿದ್ದು ದಿಯಾ ಖ್ಯಾತಿಯ ಖುಷಿ ಜೊತೆಗೆ ತೆರೆ ಹಂಚಿಕೊಳ್ಳಲಿದ್ದಾರೆ.

ಅಂದ ಹಾಗೇ ವಿವೇಕ್ ಸಿಂಹ ಅವರ ಬಣ್ಣದ ಬದುಕಿಗೆ ಮುನ್ನುಡಿ ಬರೆದದ್ದು ಕಿರುತೆರೆಯೇ! ಸೌಭಾಗ್ಯವತಿ ಧಾರಾವಾಹಿಯ ಮೂಲಕ ಕಿರುತೆರೆ ಜಗತ್ತಿಗೆ ಬಂದ ವಿವೇಕ್ ಸಿಂಹ ಮೊದಲ ಬಾರಿಗೆ ಜನುಮದ ಜೋಡಿ ಧಾರಾವಾಹಿಯಲ್ಲಿ ನಾಯಕರಾಗಿ ಕಾಣಿಸಿಕೊಂಡಿದ್ದರು. ಮನೋಜ್ಞ ಅಭಿನಯದ ಮೂಲಕ ಮನೆ ಮಾತಾಗಿರುವ ವಿವೇಕ್ ಸಿಂಹ ಮುಂದೆ ಮಹಾದೇವಿ ಧಾರಾವಾಹಿಯಲ್ಲಿಯೂ ಸೂರ್ಯ ಎಂದ ರಗಡ್ ಅವತಾರದಲ್ಲಿ ನಟಿಸಿದ್ದರು.

ಕಾಲೇಜು ದಿನಗಳಿಂದಲೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮುಂದಿದ್ದ ವಿವೇಕ್ ಸಿಂಹ ನಾಟಕ, ವೀರಗಾಸೆ ಮತ್ತು ಡೊಳ್ಳು ಕುಣಿತ ಗಳನ್ನು ಮಾಡುತ್ತಿದ್ದರು. ಅದ್ಯಾವಾಗ ನಟನೆಯ ಬಗ್ಗೆ ಪ್ರೀತಿ ಮತ್ತಷ್ಟು ಜಾಸ್ತಿಯಾಯಿತೋ, ರಾಜುಗುರು ಹೊಸಕೋಟೆ ಅವರ ಬಳಿ ರೀತಿ ನೀತಿಗಳನ್ನು ತಿಳಿದುಕೊಂಡರು. ತದ ನಂತರ ರಂಗಾಯಣ ಸೇರಿರುವ ವಿವೇಕ್ ಅಲ್ಲೂ ನಟನೆಯ ಬಗ್ಗೆ ಮಗದಷ್ಟು ತಿಳಿದುಕೊಂಡರು.

ಮಹಾದೇವಿಯ ನಂತರ ಬೆಳ್ಳಿತೆರೆಗೆ ಕಾಲಿಟ್ಟ ವಿವೇಕ್ ಸಿಂಹ ಶ್ರುತಿ ನಾಯ್ಡು ನಿರ್ದೇಶನದ ಪ್ರೀಮಿಯರ್ ಪದ್ಮಿನಿ ಧಾರಾವಾಹಿಯಲ್ಲಿ ನವರಸ ನಾಯಕ ಜಗ್ಗೇಶ್ ಮಗನಾಗಿ ಅಭಿನಯಿಸಿದ್ದರು. ನಟನೆಯ ಹೊರತಾಗಿ ಡ್ಯಾನ್ಸರ್ ಆಗಿದ್ದ ವಿವೇಕ್ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಫ್ಯಾಮಿಲಿ ವಾರ್ ನಲ್ಲಿ ಹೆಜ್ಜೆ ಹಾಕಿದ್ದರು. ಪ್ರತಿ ವಾರವೂ ವಿಭಿನ್ನ ಶೈಲಿಯ ಡ್ಯಾನ್ಸ್ ಗಳ ಮೂಲಕ ನೃತ್ಯ ಪ್ರೇಮಿಗಳ ಮನ ಸೆಳೆದಿರುವ ವಿವೇಕ್ ಸಿಂಹ ಅಭಿನಯಿಸಿದ್ದು ಕೇವಲ ನಾಲ್ಕು ಧಾರಾವಾಹಿಗಳಲ್ಲಿ ಆದರೂ ಕಿರುತೆರೆ ಪ್ರಿಯರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

“ಬಣ್ಣದ ಲೋಕದಲ್ಲಿ ಉತ್ತಮ ನಟ ಎಂದು ಗುರುತಿಸಿಕೊಳ್ಳಬೇಕು ಎಂಬುದೇ ನನ್ನ ಜೀವನದ ಬಹುದೊಡ್ಡ ಕನಸು. ನಟನೆ ಎಂಬುದು ಒಂದೆರಡು ದಿನಗಳಲ್ಲಿ ಕಲಿತು ಮುಗಿಯುವಂತಹುದಲ್ಲ. ಬದಲಿಗೆ ಇಲ್ಲಿ ಪ್ರತಿದಿನವೂ ಕೂಡಾ ಕಲಿಯಲು ಸಾಕಷ್ಟು ಹೊಸ ಹೊಸ ವಿಚಾರಗಳು ಇರುತ್ತದೆ” ಎಂದು ನಟನಾ ಪಯಣದ ಬಗ್ಗೆ ಹೇಳುವ ವಿವೇಕ್ ಸಿಂಹ ನಟನಾ ಕ್ಷೇತ್ರದಲ್ಲಿ ಮಿಂಚಲಿ ಎಂಬುದೇ ನಮ್ಮ ಹಾರೈಕೆ.
– ಅಹಲ್ಯಾ

LEAVE A REPLY

Please enter your comment!
Please enter your name here