ಜನತಾ ದಳ ಪಕ್ಷಕ್ಕೆ ಹಾಗೂ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬಕ್ಕೆ ವಿಶ್ವನಾಥ್ ಎಂಬ ಕಾರ್ಕೋಟಕ ವಿಷ ಹಾಕಿದ್ದು ನಾನೆ ಎಂದು ಹೇಳುವ ಮೂಲಕ ಹುಣಸೂರು ವಿಧಾನಸಭಾ ಕ್ಷೇತ್ರದ ಅನರ್ಹ ಶಾಸಕ ಎಚ್. ವಿಶ್ವನಾಥ್ ವಿರುದ್ಧ ಮಾಜಿ ಸಚಿವರಾದ ಸಾ.ರಾ ಮಹೇಶ್ ರವರು ಕೆಂಡಾಮಂಡಲವಾಗಿದ್ದಾರೆ.
ಇಂದು ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಸಾ ರಾ ಮಹೇಶ್ ರವರು ಹೆಚ್ ವಿಶ್ವನಾಥ್ ಅವರನ್ನು ಜೆಡಿಎಸ್ ಪಕ್ಷಕ್ಕೆ ನಾನು ಕರೆ ತಂದು ನಮ್ಮ ಪಕ್ಷಕ್ಕೆ ಹಾಗೂ ದೇವೇಗೌಡರ ಕುಟುಂಬಕ್ಕೆ ವಿಷ ಹಾಕಿದೆ ಎಂದು ತಿಳಿಸಿದರು. ಸದನದಲ್ಲಿ ಅವರ ವಿರುದ್ಧ ಹೇಳಿರುವ ಪ್ರತಿಯೊಂದು ಮಾತಿಗೂ ನಾನು ಈಗಲೂ ಬದ್ಧನಾಗಿದ್ದೇನೆ. ಅವರ ಜೊತೆ ಚರ್ಚೆಗೆ ಬರಲು, ದೇವಸ್ಥಾನಕ್ಕೆ ಹೋಗಲು ನಾನು ಸದಾ ಸಿದ್ಧನಾಗಿದ್ದೇನೆ . ಅವರು ಚರ್ಚೆಗೆ ಬಂದರೆ ಅವರ ಜೊತೆಯೇ ಕುಳಿತು ಅವರ ಇನ್ನಷ್ಟು ಚರಿತ್ರೆಯನ್ನು ನಾನು ಬಿಚ್ಚಿಡುತ್ತೇನೆ. ಹುಣಸೂರು ಕ್ಷೇತ್ರದ ಜನರ ಸಮಸ್ಯೆ ಬಗೆಹರಿಸಿ ಕೊಡಿ ಎಂದು ವಿಶ್ವನಾಥ್ ರವರು ಸಿಎಂ ಆಗಿದ್ದ ಕುಮಾರಸ್ವಾಮಿ ಅವರ ಬಳಿ ಕೇಳಿದರೋ ಅಥವಾ ಅವರ ವೈಯಕ್ತಿಕ ಸಮಸ್ಯೆ ಬಗೆಹರಿಸಿ ಕೊಡಲು ಕೇಳಿದರೋ ಎಂಬುವ ವಿಷಯದ ಕುರಿತು ಸಹ ಹೇಳುತ್ತೇನೆ ಎಂದು ಹೆಚ್.ವಿಶ್ವನಾಥ್ ನವರ ವಿರುದ್ಧ ಹರಿಹಾಯ್ದಿದ್ದಾರೆ.

ಒಂದೊಂದು ಋತುವಿನಲ್ಲಿ ಒಂದೊಂದು ಕಡೆಗೆ ವಲಸೆ ಹೋಗುವ ಈ ಹಕ್ಕಿ, ಲಾಭ ಹೆಚ್ಚು ಎಲ್ಲಿರುತ್ತೋ ಅಲ್ಲಿ ಗೂಡು ಮಾಡುತ್ತದೆ ಎಂದು ಹೆಚ್ ವಿಶ್ವನಾಥ್ ಅವರನ್ನು ಮಾತಿನಲ್ಲೇ ಕುಟುಕಿದರು.
2018ರ ವಿಧಾನಸಭಾ ಚುನಾವಣೆಯ ವೇಳೆ ಹೆಚ್.ವಿಶ್ವನಾಥ್ ರವರು ನನ್ನನ್ನು ಶಾಸಕನನ್ನಾಗಿ ಮಾಡಿ ಸಾಕು ಎಂದು ನಮ್ಮ ಬಳಿ ಕೇಳಿದ್ದರು ಈಗ ಶಾಸಕರಾದ ಬಳಿಕ ನಮ್ಮ ವಿರುದ್ಧವೇ ತಿರುಗಿ ಬಿದ್ದಿದ್ದಾರೆ ಎಂದು ಆರೋಪಿಸಿದರು.
ವಿಶ್ವನಾಥ್ ಗೆ ಸವಾಲು ಹಾಕಿದ ಸಾ ರಾ ಮಹೇಶ್ :
ನಾನು ರಿಯಲ್ ಎಸ್ಟೇಟ್ ಉದ್ಯೋಮ ಮಾಡುತ್ತೇನೆ ಆದರೆ ವರ್ಗಾವಣೆಯಲ್ಲಿ ಹಣ ಮಾಡಿಲ್ಲ. ವಿಶ್ವನಾಥ್ ರವರನ್ನು ರಾಹುಲ್ ಗಾಂಧಿ ಅವರ ಸಭೆಗೆ ಆಗಮಿಸುವಂತೆ ನಾನೇ ಕರೆದಿದ್ದೆ ಆಗ ಸಿದ್ದರಾಮಯ್ಯನವರು ಇರುವ ಸಭೆಗೆ ನಾನು ಬರುವುದಿಲ್ಲ ಎಂದು ಹೇಳಿದ್ದವರು ಯಾರು ಎಂದು ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳಲಿ ಎಂದು ತಿಳಿಸಿದರು . ಇನ್ನು ನೀವು ಯಾವುದೇ ಆಸೆ ಆಮೀಷಕ್ಕೊಳಗಾಗಿ ರಾಜೀನಾಮೆ ನೀಡಿಲ್ಲ ಎಂದಾದರೆ ಚಾಮುಂಡಿ ತಾಯಿ ಮುಂದೆ ಪ್ರಮಾಣ ಮಾಡಿ ಎಂದು ಹೆಚ್ ವಿಶ್ವನಾಥ್ ರವರಿಗೆ ಸಾ ರಾ ಮಹೇಶ್ ರವರು ಸವಾಲು ಹಾಕಿದ್ದಾರೆ . ನನ್ನ ಈ ಸವಾಲನ್ನು ಅವರು ಸ್ವೀಕರಿಸಿ ಚಾಮುಂಡಿ ತಾಯಿ ಮುಂದೆ ಪ್ರಮಾಣ ಮಾಡಿದರೆ ಇವತ್ತೇ ನಾನು ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸಾರ್ವಜನಿಕ ಬದುಕಿನಿಂದ ದೂರ ಸರಿಯುತ್ತೇನೆ ಎಂದು ಸಾ.ರಾ.ಮಹೇಶ್ ಅವರು ವಿಶ್ವನಾಥ್ ಅವರಿಗೆ ತಿಳಿಸಿದ್ದಾರೆ.
