‘ವಿಶ್ವನಾಥ್ ಒರ್ವ ರಾಜಕೀಯ ವ್ಯಭಿಚಾರಿ, ರಾಜಕೀಯ ಆಶ್ರಯ ನೀಡಿದ ಪಕ್ಷಕ್ಕೆ ದ್ರೋಹ ಮಾಡಿ ಬಾಂಬೆಗೆ ಹೋಗಿ ಕುಳಿತಿದ್ದು ಸುಳ್ಳಾ..? ಎಂದು ಏಕವಚನದಲ್ಲೇ ವಿಶ್ವನಾಥ್ ವಿರುದ್ಧ ಗುಡುಗಿದ್ದಾರೆ ಜೆಡಿಎಸ್ ಶಾಸಕ ಸಾ.ರಾ.ಮಹೇಶ್.
ಇನ್ನು ಅನರ್ಹ ಶಾಸಕ ಎಚ್.ವಿಶ್ವನಾಥ್ರೊಂದಿಗೆ ಬಹಿರಂಗ ಚರ್ಚೆಗೆ ನಾನು ಸಿದ್ಧ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಘೋಷಿಸಿದ್ದಾರೆ. ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, “ನಾನು ಸದನದಲ್ಲಿ ವಿಶ್ವನಾಥ್ ಮೇಲೆ ಮಾಡಿರುವ ಆರೋಪಕ್ಕೆ ಈಗಲೂ ಬದ್ಧ, ಅವರು ಚರ್ಚೆಗೆ ಆಹ್ವಾನ ನೀಡಿದ್ದಾರೆ. ಜಾಗ ಸ್ಥಳ ಅವರೇ ನಿಗದಿ ಮಾಡಲಿ. ಅಲ್ಲಿಗೆ ಹೋಗಿ ಚರ್ಚೆ ಮಾಡಲು ಸಿದ್ದ” ಎಂದಿದ್ದಾರೆ.
ಕಾಂಗ್ರೆಸ್ನಲ್ಲಿ ಮೂಲೆಗುಂಪಾಗಿದ್ದ ಅವರನ್ನು ನಾನೇ ಜೆಡಿಎಸ್ ಪಕ್ಷಕ್ಕೆ ಕರೆತಂದೆ. ಇದರಿಂದ ಹಿರಿಯ ರಾಜಕಾರಣಿಗೆ ಉತ್ತಮ ನೆಲೆ ಕಲ್ಪಿಸುವ ಉದ್ದೇಶ ಇತ್ತು. ಆದರೆ ವಿಶ್ವನಾಥ್ ಈ ರೀತಿಯ ಕಾರ್ಕೋಟಕ ವಿಷ ಎಂದು ಗೊತ್ತಿರಲಿಲ್ಲ. ನಾನು ಯಾವುದೇ ಆಸೆ ಆಮಿಷಕ್ಕೆ ಒಳಗಾಗಿಲ್ಲ ಎಂದು ತಾಯಿ ಚಾಮುಂಡೇಶ್ವರಿ ದೇವಿಯ ಮೇಲೆ ಪ್ರಮಾಣ ಮಾಡುತ್ತೀರ..? ಎಂದು ವಿಶ್ವನಾಥ್ ಅವರಿಗೆ ಸಾ.ರಾ. ಮಹೇಶ್ ಆಹ್ವಾನ ನೀಡಿದರು.

ಇನ್ನು ರಾಜ್ಯದ ಜನರಿಗೆ ನಿನ್ನ ಗೋಮುಖ ವ್ಯಾಘ್ರದ ಮುಖ ಗೊತ್ತಾಗಬೇಕಿದೆ. ತಾಯಿ ಚಾಮುಂಡೇಶ್ವರಿಯ ಮೇಲೆ ಪ್ರಮಾಣ ಮಾಡಿ ಬನ್ನಿ, ಸುಳ್ಳಾದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಸುಳ್ಳು ಆಣೆ ಮಾಡಿದರೆ ದೇವರು ನೋಡಿಕೊಳ್ಳಲಿ. ಪಕ್ಷಕ್ಕೆ ಕರೆ ತಂದಾಗ ದೇವೇಗೌಡರ ಮನೆಯಲ್ಲಿ ನಡೆದ ಮಾತಿಕತೆ ವೇಳೆ, “ಸಿದ್ದರಾಮಯ್ಯ ಅವರಿಂದ ಸಾಕಷ್ಟು ನೊಂದಿದ್ದೇನೆ. ನನಗೆ ಯಾವುದೇ ಅಧಿಕಾರ ಬೇಡ, ಸಚಿವ ಸ್ಥಾನ ಬೇಡ, ನನ್ನ ಕೊನೆಗಾಲದಲ್ಲಿ ಕೇವಲ ನನಗೆ ಶಾಸಕನನ್ನು ಮಾಡಿ ಸಾಕು ಎಂದಿದ್ದು ಮರೆತು ಹೋಯಿತೇ..? ಎಂದು ಆಕ್ರೋಶ ವ್ಯಕ್ತಪಡಿಸಿದರು.