ಸಾಹಸಿಂಹನ ಸ್ಮಾರಕ ನಿರ್ಮಾಣಕ್ಕೆ ಕ್ಷಣಗಣನೆ  : ಇದರ ಕುರಿತು ಭಾರತಿ ಅವರ ಪ್ರತಿಕ್ರಿಯೆ ಏನು ಗೊತ್ತಾ?

0
243

ಕೆಲ ತಿಂಗಳ ಹಿಂದೆಯಷ್ಟೆ  ರೆಬೆಲ್ ಸ್ಟಾರ್ ಡಾ. ಅಂಬರೀಶ್ ಅವರ ಸ್ಮಾರಕ ನಿರ್ಮಾಣ ಕಾರ್ಯಕ್ಕೆ ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರು  ಕಂಠೀರವ ಸ್ಟುಡಿಯೋ ಆವರಣದಲ್ಲಿ ನಿರ್ಮಾಣ ಕಾರ್ಯಕ್ಕೆ ಒಪ್ಪಿಗೆ ನೀಡಿದ್ದರು. ಈ ವಿಷಯವನ್ನು ಅಂಬರೀಷ್ ಅವರ ಪತ್ನಿ, ಸಂಸದೆ ಸುಮಲತ ಅಂಬರೀಶ್ ಅವರು ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದ್ದರು. ಆದರೆ ಈ ಪೋಸ್ಟ್  ನೆಟ್ಟಿಗರನ್ನು ಕೆರಳಿಸಿದ್ದು, ವಿಷ್ಣುವರ್ಧನ್  ಅವರ ಸ್ಮಾರಕ ಕಾರ್ಯಕ್ಕೆ ಏಕೆ ಈ ಹುರುಪು ಹಾಗೂ ಉತ್ಸಾಹ ಇಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸುತ್ತಿದ್ದರು. ಅಲ್ಲದೇ ‘ಮೇಡಮ್ ಕನ್ನಡ ಚಿತ್ರರಂಗದಲ್ಲಿ ಡಾ.ರಾಜ್ ಕುಮಾರ್ ಅವರ ನಂತರದ ಸ್ಥಾನದಲ್ಲಿ ವಿಷ್ಣು ಸರ್. ತದನಂತರ ಶಂಕರನಾಗ್ ಸಾರ್. ಆಮೇಲೆ ಅಂಬಿ ಅಣ್ಣ ಆದ್ರೂ ಕೂಡ ಭಾರತಿ ಅಕ್ಕನ ಜೊತೆ ಒಂದು ಮಾತುಕತೆ ನಡೆಸಲಿಲ್ಲ. ಬಿಜೆಪಿ ಸಪೋರ್ಟ್  ಅಂತಾ ಆಂಧ್ರದ ಸುಮಕ್ಕನ ಜೊತೆಗೆ ವಿಷ್ಣುವರ್ಧನ್ ಸ್ಮಾರಕಕಿಂತ ಮುಂಚಿತವಾಗಿ ಅಂಬರೀಶ್ ಸ್ಮಾರಕನಾ?’ ಎಂದು ಹರಿಹಾಯ್ದಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ್ದ ಸುಮಲತಾ ಅಂಬರೀಶ್ ಅವರು ‘ವಿಷ್ಣು ಅವರ ಮೇಲೆ ನೀವು ಇಟ್ಟಿರುವ ಪ್ರೀತಿ ನೋಡಿ ನನಗೆ ಬಹಳ ಖುಷಿ ಆಗುತ್ತದೆ ಮತ್ತು ನಾನೂ ಕೂಡ ನಿಮ್ಮ ಹಾಗೆಯೇ ಅವರ ಅಭಿಮಾನಿ. ವಿಷ್ಣು ಅವರ ಸ್ಮಾರಕ ಇನ್ನು ಯಾಕೆ ಪ್ರಾರಂಭ ಆಗಿಲ್ಲ ಎಂದು ಕೆಲವರು ಕೇಳುತ್ತಿರುವುದು ನೋಡಿ ಆಶ್ಚರ್ಯವಾಗುತ್ತಿದೆ.  ನಿಜವಾದ ಅಭಿಮಾನಿಗಳಿಗೆ ತಪ್ಪು ಕಲ್ಪನೆ ಬೇಡ. ಈಗಾಗಲೇ  ವಿಷ್ಣುವರ್ಧನ್ ಅವರ ಸ್ಮಾರಕದ ಕೆಲಸ ಒಂದು ವರ್ಷದ ಹಿಂದೆಯೇ ಶುರುವಾಗಿದ್ದು, ಮೈಸೂರಿನ ಸಮೀಪ, ಅವರ ಕುಟುಂಬದವರ ಇಚ್ಛೆಯಂತೆ, ಸ್ಮಾರಕ ರೂಪಗೊಳ್ಳುತ್ತಿದೆ. ಸರಕಾರ ಅದಕ್ಕಾಗಿ 10 ಕೋಟಿ ರೂಪಾಯಿ ಘೋಷಿಸಿದೆ. ಅದರಲ್ಲಿ 5 ಕೋಟಿ ರೂಪಾಯಿಯನ್ನು ಈಗಾಗಲೇ ಬಿಡುಗಡೆ ಮಾಡಿದೆ. ಇದು ಬಹುತೇಕ ವಿಷ್ಣು ಅಭಿಮಾನಿಗಳಿಗೆ ತಿಳಿದಿದೆ. ಕನ್ನಡ ಚಿತ್ರರಂಗ ಹಾಗೂ ಕರ್ನಾಟಕದ ಎಲ್ಲೆಡೆ ಇರುವ ಅಭಿಮಾನಿಗಳು ಅಂಬಿ ಹಾಗೂ ವಿಷ್ಣು ಅವರ ಕಲಾ ಸೇವೆಯನ್ನು ಹಾಗೂ ಸಾಮಾಜಿಕ ಸೇವೆಯ ಹಿನ್ನೆಲೆಯಲ್ಲಿ ಮತ್ತು ಸ್ಮಾರಕದ ವಿಷಯದಲ್ಲಿ ಯಾವಾಗಲೂ ಒಗ್ಗಟ್ಟಾಗಿ ಹೆಜ್ಜೆ ಇಟ್ಟಿದ್ದೇವೆ. ಅಂಬಿ ಹಾಗೂ ವಿಷ್ಣುವರ್ಧನ್ ಅವರ ಆತ್ಮೀಯ ಸ್ನೇಹ ಹಾಗೂ ಒಬ್ಬರಿಗಗೊಬ್ಬರು ತೋರುತ್ತಿದ್ದ ಪ್ರೀತಿ ಚಿಕ್ಕವರಿಗೆ ಸ್ಫೂರ್ತಿ ಆಗಬೇಕು. ಬೇಡದ ಮಾತುಗಳಿಂದ ಅವರಿಬ್ಬರ ವ್ಯಕ್ತಿತ್ವಕ್ಕೆ ಮಾತ್ರವಲ್ಲ ಅವರ ಸ್ನೇಹಕ್ಕೂ ಅಪಮಾನ. ನಾಲ್ಕು ದಶಕಗಳ ಕಾಲ ಅವರ ಸ್ನೇಹ ಯಾವುದೇ ಅಹಂಗೂ ಒಳಗಾಗಲಿಲ್ಲ, ಯಾವ ವಿಷಯವೂ ಅವರ ನಡುವೆ ಕಂದಕ ತರಲಿಲ್ಲ. ಈಗ ಅವರನ್ನು ಬೇರೆ ಮಾಡಿ ಅವರ ನೆನಪುಗಳಿಗೆ ಮಸಿ ಬಳಿಯೋದು ಬೇಡ’ ಎಂದು ಪ್ರತಿಕ್ರಿಯಿಸಿದ್ದರು.

ಇದೀಗ ಅಭಿಮಾನಿಗಳ ಆಸೆಯಂತೆಯೇ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣ ಕಾರ್ಯಕ್ಕೆ ಚಾಲನೆ ದೊರೆಯುವ ಶುಭ ಸಮಯಕ್ಕೆ ಕ್ಷಣಗಣನೇ ಆರಂಭವಾಗಿದ್ದು, ಬರುವ ಸೆಪ್ಟೆಂಬರ್‌ 15 ರಂದು ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣಕ್ಕೆ ಭೂಮಿಯನ್ನು ಪೂಜೆಯನ್ನು ನೆರವೇರಿಸಲು ಶ್ರೀಮತಿ ಭಾರತಿ ವಿಷ್ಣುವರ್ಧನ್ ಹಾಗೂ ಅವರ ಕುಟುಂಬ ನಿರ್ಧಾರ ಮಾಡಿದೆ. ಈ ಸಂಬಂಧವಾಗಿ ಭಾರತಿ ವಿಷ್ಣುವರ್ಧನ್ ಹಾಗೂ ಅವರ ಅಳಿಯ ನಟ ಅನಿರುದ್ದ್ ಅವರು ಮಾನ್ಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಅವರಿಂದಲೇ ಸ್ಮಾರಕ ನಿರ್ಮಾಣ ಕಾರ್ಯಕ್ಕೆ ಭೂಮಿ ಪೂಜೆ ಮಾಡಲು ಆಹ್ವಾನವನ್ನು ನೀಡಿದ್ದಾರೆ.

ಇನ್ನು ಮಾನ್ಯ ಮುಖ್ಯಮಂತ್ರಿಗಳನ್ನ ಭೇಟಿ ಮಾಡಿ ಮಾತನಾಡಿದ  ನಂತರ ಮಾಧ್ಯಮಗಳ ಮುಂದೆ ಮಾತನಾಡಿದ  ಭಾರತಿ ವಿಷ್ಣುವರ್ಧನ್ ಅವರು ಮುಖ್ಯಮಂತ್ರಿ  ಯಡಿಯೂರಪ್ಪ ಅವರಿಗೆ ವೈದ್ಯರು ಹೊರಗೆ ಎಲ್ಲೂ ಹೋಗದಿರಲು ಸೂಚನೆಯನ್ನು ನೀಡಿದ್ದಾರೆ. ಆದ  ಕಾರಣದಿಂದಾಗಿ ಅವರು ಆನ್ ಲೈನ್ ಮೂಲಕವೇ ಭೂಮಿ ಪೂಜೆಯಲ್ಲಿ ಭಾಗವಹಿಸಲಿದ್ದಾರೆ ಎಂಬುದಾಗಿ  ತಿಳಿಸಿದ್ದಾರೆ. ಇದೇ ಸೆಪ್ಟೆಂಬರ್ 15 ರಂದು ಬೆಳಿಗ್ಗೆ 10:30 ಕ್ಕೆ ಮೈಸೂರಿನಲ್ಲಿ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣದ ಭೂಮಿ ಪೂಜೆ ಕಾರ್ಯಕ್ರಮ ನಡೆಯಲಿದೆ ಎಂದು ಸ್ವತಃ ಭಾರತಿ ವಿಷ್ಣುವರ್ಧನ್ ಅವರೇ ತಿಳಿಸಿದ್ದಾರೆ.

ಇನ್ನು ತಮಗೆಲ್ಲರಿಗೂ ತಿಳಿದಿರುವ ಹಾಗೆ  ಸೆಪ್ಟೆಂಬರ್ 18 ರಂದು ಅಭಿನಯ ಭಾರ್ಗವ ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ 70 ನೇ ಜನ್ಮದಿನ. ಆದ ಕಾರಣ ಆ ದಿನದಂದು  ಭೂಮಿ ಪೂಜೆಯನ್ನು ನಡೆಸಿದರೆ ಅಪಾರ ಸಂಖ್ಯೆಯ ಅಭಿಮಾನಿಗಳು ನೆರೆಯುವ ಸಾಧ್ಯತೆಯಿರುತ್ತದೆ ಹಾಗೂ ಅದು ಸದ್ಯ ದೇಶದಲ್ಲಿ ಕೋರೋನಾ ಸೊಂಕು ಜಾಸ್ತಿಯಾಗಿರುವ ಕಾರಣ ಸದ್ಯದ ಪರಿಸ್ಥಿತಿಯಲ್ಲಿ ನಿಯಮಗಳಿಗೆ ತೊಂದರೆಯಾಗುವ ಕಾರಣ ಮೂರು ದಿನ ಮುಂಚಿತವಾಗಿ ಭೂಮಿ ಪೂಜೆ ಮಾಡಲಾಗುತ್ತಿದೆ. ಅಲ್ಲದೇ ನಟಿ ಭಾರತಿ ವಿಷ್ಣುವರ್ಧನ್  ಅವರು ಕೂಡಾ ಆ ದಿನದಂದು ಅಲ್ಲಿ ಯಾರೂ ಗುಂಪು ಸೇರಬೇಡಿ ಯಾರಿಗೂ ಯಾವುದೇ ರೀತಿಯ ತೊಂದರೆ ಆಗುವುದು ಬೇಡ ಎಂದು ಮನವಿಯನ್ನು ಮಾಡಿದ್ದಾರೆ.

LEAVE A REPLY

Please enter your comment!
Please enter your name here