“ವಿನಯ್‌ ಕುಲಕರ್ಣಿ ಬಂಧನಕ್ಕೆ ರಾಜಕೀಯ ಬಣ್ಣ ಬೇಡ”

0
56

ಬೆಂಗಳೂರು: 2016 ರಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು ಗುರುವಾರ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಪಾತ್ರ ಇದೆ ಎಂಬ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಸಿಬಿಐ ತನಿಖೆ ನಡೆಸುತ್ತಿದೆ. ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕರು, ಇದರಲ್ಲಿ ಬಿಜೆಪಿಯ ಕೈವಾಡ ಇದೆ. ವಿನಯ್ ಬಿಜೆಪಿಗೆ ಸೇರಿಲ್ಲ‌ ಎಂದು ತನಿಖೆ ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದರು. ಇದಕ್ಕೆ ಉತ್ತರಿಸಿರುವ ಆಡಳಿತ ಪಕ್ಷ ಬಿಜೆಪಿ ನಾಯಕರು ಕೊಲೆ ಪ್ರಕರಣಕ್ಕೆ ರಾಜಕೀಯ ಬಣ್ಣ ಹಚ್ಚೋದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.

ಮಂಗಳೂರಿನಲ್ಲಿ ಗುರುವಾರ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು, ಯೋಗೇಶ್ ಗೌಡ ಕುಟುಂಬಸ್ಥರು ಸಾಕಷ್ಟು ನೋವನ್ನು ಅನುಭವಿಸಿದ್ದಾರೆ. ಇದೀಗ ಸಿಬಿಐ ತನಿಖೆಯಿಂದ ಕೊಲೆ ಹಿಂದಿನ ರಹಸ್ಯ ಹೊರಬರಲಿದೆ. ಈ ಘಟನೆಯನ್ನು ಯಾರೂ ಸಹಿಸಲು ಸಾಧ್ಯವಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯ ಸಿಗಬೇಕು ಎಂಬುವುದು ಎಲ್ಲರ ಅಪೇಕ್ಷೆ. ಸಿಬಿಐ ತನಿಖೆಯಲ್ಲಿ ತಮ್ಮ ಹಸ್ತಕ್ಷೇಪದ ಆರೋಪದಲ್ಲಿ ಹುರುಳಿಲ್ಲ. ರಾಜ್ಯ ಸರ್ಕಾರ ಯಾವುದೇ ರೀತಿಯ ಹಸ್ತಕ್ಷೇಪ ಮಾಡುವುದಿಲ್ಲ. ವಿನಯ್ ಕುಲಕರ್ಣಿ ಬಿಜೆಪಿ ಸೇರುವ ವಿಚಾರ ಸತ್ಯಕ್ಕೆ ದೂರವಾಗಿದೆ ಎಂದು ಸ್ಪಷ್ಟನೆ ನೀಡಿದ ಅವರು ತನಿಖೆಯಲ್ಲಿ ಸತ್ಯ ಹೊರಗೆ ಬರಲಿ ಎಂದರು.

ಕಾಂಗ್ರೆಸ್‌ ಮುಖಂಡ ಮತ್ತು ಮಾಜಿ ಸಚಿವ ವಿನಯ್‌ ಕುಲಕರ್ಣಿ ಅವರನ್ನು ಸಿಬಿಐ ವಶಕ್ಕೆ ಪಡೆದಿರುವುದಕ್ಕೆ ರಾಜಕೀಯ ಬಣ್ಣ ಬಳಿಯುವುದು ಸರಿಯಲ್ಲ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅಭಿಪ್ರಾಯಪಟ್ಟರು.

ವಿಕಾಸಸೌಧದಲ್ಲಿ ಗುರುವಾರ ಮಾತನಾಡಿದ ಅವರು, ವಿನಯ್‌ ಕುಲಕರ್ಣಿ ಅವರ ಮೇಲೆ ಆರೋಪವಿತ್ತು. ಆ ಕೊಲೆ ಹಿನ್ನೆಲೆಯಲ್ಲಿ ಹುಬ್ಬಳ್ಳಿ- ಧಾರವಾಡದಲ್ಲಿ ಸಾಕಷ್ಟು ಹೋರಾಟಗಳು ನಡೆದಿದ್ದವು. ಆ ಹೋರಾಟಗಳಿಗೆ ಮಣಿದು ಕಾಂಗ್ರೆಸ್‌ ಸರಕಾರವೇ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿತ್ತು. ಇದರಲ್ಲಿ ಬಿಜೆಪಿ ಸರಕಾರದ ಪಾತ್ರವೇನಿದೆ ಎಂದು ಪ್ರಶ್ನಿಸಿದರು.

ಪ್ರತಿಸಲವೂ ಯಾರ ಮೇಲೆಯಾದರೂ ಆದಾಯ ತೆರಿಗೆ, ಇ.ಡಿ ಅಥವಾ ಸಿಬಿಐ ದಾಳಿ ನಡೆದರೆ ಇಲ್ಲವೇ ಯಾರನ್ನಾದರೂ ಬಂಧಿಸಿದರೆ ಅದೆಲ್ಲಕ್ಕೂ ರಾಜಕೀಯ ದ್ವೇಷ ಎಂದು ಬಣ್ಣಕಟ್ಟಿ ಬಿಜೆಪಿ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ. ಕಾನೂನು ತನ್ನ ಕೆಲಸವನ್ನು ತಾನೇ ಮಾಡುತ್ತಿದೆ ಎಂದು ಡಿಸಿಎಂ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

ಎರಡೂ ಕಡೆ ಬಿಜೆಪಿ ಗೆಲ್ಲುತ್ತದೆ

ಉಪ ಚುನಾವಣೆಯಲ್ಲಿ ಬಿಜೆಪಿಯೇ ಗೆಲ್ಲುತ್ತದೆ. ರಾಜರಾಜೇಶ್ವರಿ ನಗರ ಮತ್ತೂ ಶಿರಾದಲ್ಲಿ ಈ ಬಾರಿ ಕಮಲವೇ ಅರಳಲಿದೆ ಎಂದ ಉಪ ಮುಖ್ಯಮಂತ್ರಿ, ಮತದಾರರು ಸರಕಾರದ ಜನಪರ ಕಾರ್ಯಕ್ರಮಗಳನ್ನು ಮೆಚ್ಚಿ ತಮ್ಮ ತೀರ್ಪು ನೀಡಿದ್ದಾರೆ. ಆ ತೀರ್ಪು ಏನೆಂಬುದು ನವೆಂಬರ್‌ ಹತ್ತರಂದು ಗೊತ್ತಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿಗೆ ಹೋಗಿಲ್ಲ ಎಂದು ವಿನಯ್ ಕುಲಕರ್ಣಿ ಬಂಧನ: ಡಿಕೆ ಶಿವಕುಮಾರ್

ಬೆಂಗಳೂರು:ಬಿಜೆಪಿ ರಾಜಕೀಯ ಕುತಂತ್ರ ಮಾಡುತ್ತಿದೆ. ಸಿಬಿಐ ಅಧಿಕಾರಿಗಳು ಒತ್ತಡಕ್ಕೆ ಮಣಿಯದೇ, ಕಾನೂನು ಚೌಕಟ್ಟಿನಲ್ಲಿ ವಿಚಾರಣೆ ನಡೆಸಲಿ. ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರು ಯಾವುದೇ ತಪ್ಪು ಮಾಡಿಲ್ಲ, ಅವರ ಬೆನ್ನಿಗೆ ನಾವು ನಿಲ್ಲುತ್ತೇವೆ’ ಬಿಜೆಪಿಗೆ ಹೋಗಿಲ್ಲ ಎಂದು ವಿನಯ್ ಕುಲಕರ್ಣಿ ಬಂಧನ ಮಾಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

ತಮ್ಮ ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಡಿ.ಕೆ ಶಿವಕುಮಾರ್, ನಾನು ಈಗಾಗಲೇ ನಮ್ಮ ಮುಖಂಡರಾದ ವಿನಯ್ ಕುಲಕರ್ಣಿ ಅವರ ಜತೆ ಈ ವಿಚಾರವಾಗಿ ಮಾತನಾಡಿದ್ದೇನೆ. ಅವರ ಪ್ರಕರಣವನ್ನು ನಮ್ಮ ರಾಜ್ಯ ಪೊಲೀಸರು ತನಿಖೆ ಮಾಡಿ ವರದಿ ಸಲ್ಲಿಸಿದ್ದಾರೆ. ಆದರೆ ಆ ಭಾಗದ ಬಿಜೆಪಿ ನಾಯಕರು ಅವರನ್ನು ರಾಜಕೀಯವಾಗಿ ಮುಗಿಸಲು ಈ ಪ್ರಯತ್ನ ಮಾಡಿ, ಯಶಸ್ಸಾಗಿದ್ದಾರೆ. ಸಿಬಿಐ ಅಧಿಕಾರಿಗಳು ವಿನಯ್ ಕುಲಕರ್ಣಿ ಅವರ ಕಡೆಯವರನ್ನು ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದ್ದಾರೆ. ನಾನು ಆ ಭಾಗಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ತಮಗಾದ ತೊಂದರೆ ಹೇಳಿಕೊಂಡಿದ್ದಾರೆ. ಸಿಬಿಐ ಅಧಿಕಾರಿಗಳು ತಮ್ಮ ಮೇಲೆ ಎಷ್ಟೇ ಒತ್ತಡ ಬಿದ್ದರೂ ಕಾನೂನಿನ ವ್ಯಾಪ್ತಿಯಲ್ಲೇ ಕೆಲಸ ಮಾಡಬೇಕಿದೆ. ವಿಚಾರಣೆ ಮಾಡಿ. ಒಂದು ಸಾರಿ ಸಾಲದಿದ್ದರೆ ಹತ್ತು ಬಾರಿ ಕರೆದು ವಿಚಾರಣೆ ಮಾಡಲಿ. ಆದರೆ ರಾಜಕೀಯ ಒತ್ತಡಕ್ಕೆ ತಲೆ ಬಾಗಬೇಡಿ ಎಂದರು.

ಇದು ಯಾವುದು ಶಾಶ್ವತವಲ್ಲ. ನಮ್ಮ ನಾಯಕ ಜಾರ್ಜ್ ಅವರಿಗೆ ಎಷ್ಟು ಕಿರುಕುಳ ನೀಡಿದರು. ಕೊನೆಗೆ ಅವರು ರಾಜೀನಾಮೆ ಕೊಟ್ಟರು. ಆದರೆ ಇವತ್ತು ಅವರಿಗೆ ನ್ಯಾಯಾಲಯದಲ್ಲಿ ಕ್ಲೀನ್ ಚಿಟ್ ಸಿಕ್ಕಿದೆ. ಇಂತಹ ಅನೇಕ ಘಟನೆಗಳಿವೆ. ರಾಜಕೀಯದಲ್ಲಿ ಕಾಲಚಕ್ರ ತಿರುಗುತ್ತಿರುತ್ತದೆ. ಹೀಗಾಗಿ ಕಾನೂನು ವ್ಯಾಪ್ತಿಯಲ್ಲಿ ಕೆಲಸ ಮಾಡಿ, ಒತ್ತಡಕ್ಕೆ ಮಣಿಯಬೇಡಿ ಎಂದು ಸಿಬಿಐ ಅಧಿಕಾರಿಗಳಿಗೆ ಮನವಿ ಮಾಡುತ್ತೇನೆ. ನಿಮ್ಮ ಕಚೇರಿ ರಾಜಕೀಯ ಅಸ್ತ್ರವಾಗಬಾರದು.
ಕೆಲವು ಬಿಜೆಪಿ ನಾಯಕರು ಈ ಬೆಳವಣಿಗೆಯನ್ನು ಆನಂದಿಸುತ್ತಿದ್ದಾರೆ. ಇದು ಹೆಚ್ಚು ದಿನ ಉಳಿಯಲ್ಲ. ಈ ದೇಶದ ಕಾನೂನು, ಸಂವಿಧಾನ ವ್ಯವಸ್ಥೆ ಬಗ್ಗೆ ನಮಗೆ ಗೌರವವಿದೆ. ನಮ್ಮ ನಾಯಕರು ಹಾಗೂ ಕಾರ್ಯಕರ್ತರು ಯಾವುದೇ ರೀತಿಯ ತಪ್ಪು ಮಾಡಿಲ್ಲ. ಅವರಿಗೆ ಕಾನೂನಿನ ರಕ್ಷಣೆ ಸಿಗುತ್ತದೆ. ಚುನಾವಣೆ ಮುನ್ನ ಹಾಗೂ ನಂತರ ಈ ರೀತಿ ಬೆದರಿಸುವ ಪ್ರಯತ್ನ ಮಾಡುತ್ತಿದ್ದಾರೆ.

ನಮ್ಮ ನಾಯಕರನ್ನು ಸೆಳೆಯುತ್ತಿದ್ದಾರೆ

ಸರ್ಕಾರದ ಸಚಿವರೇ ಆಮಿಷ ತೋರಿಸಿ ನಮ್ಮ ನಾಯಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಅವರ ಪ್ರಕರಣದಲ್ಲೇ ಪ್ರಧಾನಮಂತ್ರಿಗಳು ಭಾಷಣ ಮಾಡಿದರೂ ಕ್ರಮ ಯಾಕೆ ತೆಗೆದುಕೊಳ್ಳಲಿಲ್ಲ? ಬೇರೆ ಪಕ್ಷದಲ್ಲಿ ಕೆಟ್ಟವರಾಗಿದ್ದವರು ಅವರ ಪಕ್ಷಕ್ಕೆ ಸೇರಿದ ನಂತರ ಗಂಗಾ ಜಲದಂತೆ ಪವಿತ್ರರಾಗುತ್ತಾರಾ? ನಿಮ್ಮ ಪ್ರಧಾನಮಂತ್ರಿಗಳು ಭಾಷಣ ಮಾಡಿದ್ದು, ನಿಜವೋ, ಸುಳ್ಳೋ ಎಂಬುದನ್ನು ಬಿಜೆಪಿ ನಾಯಕರು ಉತ್ತರಿಸಲಿ ಎಂದು‌ ತಿಳಿಸಿದರು.

ಈ ಪ್ರಕರಣದ ತನಿಖೆ ಮುಗಿಯಲಿ, ನಂತರ ನಾವು ಮಾತನಾಡುತ್ತೇವೆ. ಪ್ರತಿಯೊಬ್ಬ ಬಿಜೆಪಿ ನಾಯಕರ ಹೇಳಿಕೆಯೂ ರಾಜಕೀಯ ಉದ್ದೇಶಿತವೇ. ಅವರು ಈ ವ್ಯವಸ್ಥೆ ತಮ್ಮ ಮನೆ ಸ್ವತ್ತು ಎಂದು ತಿಳಿದುಕೊಂಡಿದ್ದಾರೆ. ಇಂತಹ ಒತ್ತಡಗಳಿಗೆ ನಾವು ಮಣಿಯುವುದಿಲ್ಲ. ತಪ್ಪು ಮಾಡದ ನಮ್ಮ ನಾಯಕರನ್ನು ನಾವು ರಕ್ಷಿಸುತ್ತೇವೆ.ಈ ದೇಶದಲ್ಲಿ ಎಲ್ಲೆಲ್ಲಿ ಯಾವ ರೀತಿ ಕಾನೂನು ಇದೆ. ಪೊಲೀಸರು ಯಾವರೀತಿ ನಡೆದುಕೊಳ್ಳುತ್ತಿದ್ದಾರೆ ಎಂಬುದನ್ನು ಗಮನಿಸುತ್ತಿದ್ದೇವೆ ಎಂದು ಹೇಳಿದರು.

 

LEAVE A REPLY

Please enter your comment!
Please enter your name here