ಮೋದಿ ನೇತೃತ್ವದ 2.0 ಸರ್ಕಾರದಲ್ಲಿ ದೇಶವನ್ನು 70 ವರ್ಷಗಳಿಂದ ಕಾಡುತ್ತಿರುವ ಕಣಿವೆ ರಾಜ್ಯದ ಭಯೋತ್ಪಾದನಾ ಸಮಸ್ಯೆಗೆ ಪರಿಹಾರ ಹುಡುಕುವ ಗಂಭೀರ ಪ್ರಯತ್ನವೊಂದು ಪ್ರಾರಂಭವಾಗಿದೆ. ‘ಮುಳ್ಳನ್ನು ಮುಳ್ಳಿನಿಂದಲೇ’ ತೆಗೆಯಬೇಕು ಎಂದು ಪಣ ತೊಟ್ಟಿರುವ ಮೋದಿ-ಶಾ ಜೋಡಿ, ಸೈನಿಕ ಕಾರ್ಯತಂತ್ರದ ಮೂಲಕವೇ ಕಾಶ್ಮೀರ ಸಮಸ್ಯೆಗೆ ಪರಿಹಾರ ಹುಡುಕಲು ಹೊರಟಿದ್ದಾರೆ.
ಹೌದು, ಈ ಕಾರ್ಯತಂತ್ರದ ಭಾಗವಾಗಿ ಕಣಿವೆ ರಾಜ್ಯ ಕಾಶ್ಮೀರದಲ್ಲಿ ಕೇಂದ್ರ ಸರ್ಕಾರ ಮತ್ತೆ 25,000 ಯೋಧರನ್ನು ಕಾನೂನು ಮತ್ತು ಸುವ್ಯವಸ್ಥೇ ಕಾಪಾಡಲು ನಿಯೋಜಿಸಿದೆ. ಮೇಲ್ನೋಟಕ್ಕೆ ಇದು ಭದ್ರತಾ ಕ್ರಮಗಳಂತೆ ಕಂಡು ಬಂದರೂ ಕಣಿವೆಯಲ್ಲಿ ಹೆಚ್ಚುತ್ತಿರುವ ಉಗ್ರರ ಉಪಟಳವನ್ನು ಮಟ್ಟಹಾಕುವುದು ಇದರ ಮೂಲ ಉದ್ದೇಶ. ಈ ಸೇನಾ ನಿಯೋಜನೆಗೂ ಮುನ್ನ ಕಾಶ್ಮೀರಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದ ನಂತರ ಗೃಹ ಸಚಿವ ಅಮಿತ್ ಶಾ ಈ ಕ್ರಮ ಕೈಗೊಂಡಿದ್ದಾರೆ. ಮೋದಿ-ಶಾ ಜೋಡಿ ಕಾಶ್ಮೀರದಲ್ಲಿ ರೂಪಿಸುತ್ತಿರುವ ರಣತಂತ್ರದ ಹಿಂದೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಮಿತ್ ದೋವಲ್ ಪಾತ್ರವನ್ನು ಮಹತ್ವದ್ದಾಗಿದೆ. ಕಳೆದ ತಿಂಗಳು ಅಮಿತ್ ಶಾ ಭೇಟಿಯ ಬೆನ್ನಲ್ಲೇ ಅಜಿತ್ ದೋವಲ್ ಕೂಡಾ ಕಾಶ್ಮೀರಕ್ಕೆ ಭೇಟಿ ನೀಡಿದ್ದರು. ದೋವಲ್ ಹಿಂದಿರುಗಿದ ಬಳಿಕ ಈ ಬೆಳವಣಿಗೆಗಳು ನಡೆದಿದ್ದು, ಕುತೂಹಲ ಕೆರಳಿಸಿದೆ.
ಕೇಂದ್ರ ಸರ್ಕಾರ ಕಣಿವೆ ರಾಜ್ಯಕ್ಕೆ ಭಾರೀ ಸೇನಾ ಜಮಾವಣೆ ಮಾಡುತ್ತಿರುವ ಸುದ್ದಿ ಇದೀಗ ಎಲ್ಲೆಡೆ ಚರ್ಚೆಗೆ ಕಾರಣವಾಗಿದೆ. ಮೋದಿ ಸರ್ಕಾರ ಕಾಶ್ಮೀರಕ್ಕೆ ಸಂಬಂಧಿಸಿದ ಕಲಂ 370 ಮತ್ತು 35ಎ ಕುರಿತಂತೆ ಭಾರಿ ವಿರೋಧ ವ್ಯಕ್ತವಾಗುತ್ತಿರುವ ಹೊತ್ತಿನಲ್ಲೇ ಕೇಂದ್ರ ಸರ್ಕಾರ ಈ ನಡೆ ಅಚ್ಚರಿ ಮೂಡಿಸಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಲಂ 370 ರದ್ದು ಮಾಡುವ ಭರವಸೆ ನೀಡಿದ್ದ ಮೋದಿ, ಭರವಸೆ ಈಡೇರಿಕೆಗಾಗಿ ಸಿದ್ದತೆ ನಡೆಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಕೇಂದ್ರ ಸರ್ಕಾರ ಮಾತ್ರ ಈ ಕುರಿತು ಯಾವುದೇ ಅಧಿಕೃತ ಹೇಳಿಕೆ ದಾಖಲಿಸಿಲ್ಲ. ಇನ್ನು ಅಮರನಾಥ ಯಾತ್ರಾರ್ಥಿಗಳ ರಕ್ಷಣೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ. ಆದರೂ ಇಷ್ಟೊಂದು ಸೈನಿಕರನ್ನು ಅಮರನಾಥ ಯಾತ್ರೆಗೆ ನಿಯೋಜಿಸಿದ ಉದಾಹರಣೆಗಳೇ ಇಲ್ಲ. ಕಾನೂನು ಮತ್ತು ಸುವ್ಯವಸ್ಥೆ ರಕ್ಷಣೆಗಾಗಿ ಈವರೆಗೆ ಒಟ್ಟು 35,000 ಯೋಧರನ್ನು ನಿಯೋಜಿಸಿರುವ ಪ್ರಮಾಣವನ್ನು ಗಮನಿಸಿದರೆ ಭಯೋತ್ಪಾದಕರನ್ನು ಸದೆಬಡೆಯುವುದು ಇದರ ಮೂಲ ಉದ್ದೇಶ ಎನ್ನಲಾಗಿದೆ.
ಇನ್ನೊಂದೆಡೆ ಮೋದಿ ಸರ್ಕಾರದ ಈ ನಿಗೂಢ ನಡೆಗಳನ್ನ ಗಮನಿಸಿದಾಗ, ಜಮ್ಮು-ಕಾಶ್ಮೀರ ನಾಟಕೀಯ ಬೆಳವಣಿಗೆಯೊಂದನ್ನ ಕಾಣೋ ಸಾಧ್ಯತೆಯನ್ನ ಊಹಿಸಬಹುದಾಗಿದೆ. ಜಮ್ಮು-ಕಾಶ್ಮೀರವನ್ನೇ ವಿಭಜಿಸಲು ಹೊರಟಿದ್ದಾರಾ ಮೋದಿ? ಎನ್ನುವ ಬಗ್ಗೆಯೂ ಎಲ್ಲೆಡೆ ಚರ್ಚೆಯಾಗುತ್ತಿದೆ. ಕಾಶ್ಮೀರವನ್ನ ಮೂರು ಭಾಗಗಳಾಗಿ ವಿಭಜಿಸುವ ಆಲೋಚನೆಯೊಂದು ಮೋದಿ-ಶಾ ಜೋಡಿಯ ಮುಂದಿದೆ ಎನ್ನಲಾಗಿದೆ. ಮುಖ್ಯವಾಗಿ ಜಮ್ಮುವನ್ನ ಕಾಶ್ಮೀರದಿಂದ ಪ್ರತ್ಯೇಕಿಸುವುದು ಈ ಆಲೋಚನೆಯ ಉದ್ದೇಶ. ಹಾಗೇನೇ ಲಡಾಕ್ ಅನ್ನು ಸಹ ಕಾಶ್ಮೀರದಿಂದ ಪ್ರತ್ಯೇಕಿಸಬಹುದು. ಉಳಿದಂತೆ ಉಗ್ರರ ಹಾವಳಿ ಪೀಡಿತ ಕಾಶ್ಮೀರ ಕಣಿವೆಯನ್ನಷ್ಟೇ ಪ್ರತ್ಯೇಕವಾಗಿ ನಿಭಾಯಿಸುವುದು ಮೋದಿ-ಶಾ ಜೋಡಿಯ ಮುಂದಿರೋ ಪ್ಲಾನ್. ಇದಕ್ಕಾಗಿಯೇ ಕೇಂದ್ರ ನಿಗೂಢ ನಡೆ ಅನುಸರಿಸಿದೆ ಅನ್ನೋ ಮಾತೊಂದು ಹರಿದಾಡಲಾರಂಭಿಸಿದೆ. ಉಗ್ರರ ಉಪಟಳ ಹೆಚ್ಚಾಗಿರುವ ಕಾಶ್ಮೀರ ಭಾಗವನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸುವ ಸಾಧ್ಯತೆಯೂ ಹೆಚ್ಚಿದೆ.
ಒಟ್ಟಾರೆಯಾಗಿ ಜಮ್ಮು-ಕಾಶ್ಮೀರ ಸಮಸ್ಯೆಗೆ, ಮೋದಿ-ಶಾ ಜೋಡಿ ನಿಗೂಢ ಪರಿಹಾರವೊಂದನ್ನ ಹುಡುಕಲು ಹೊರಟಿರೋದು ಸ್ಪಷ್ಟವಾಗಿದೆ. ಅದರಿಂದ ಜಮ್ಮು-ಕಾಶ್ಮೀರದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಾ, ಕಾದು ನೋಡಬೇಕಿದೆ.