ಸಿನಿಮಾದಲ್ಲಿ ರೇಪ್ ಸೀನ್ ನಲ್ಲಿ ಅಭಿನಯಿಸುವ ಮುನ್ನ ವಜ್ರಮುನಿ ಏನು ಮಾಡುತ್ತಿದ್ದರು.!

0
973

ವಜ್ರಮುನಿ, ಕನ್ನಡ ಚಿತ್ರರಂಗ ಕಂಡ ಹೆಮ್ಮೆಯ ಖಳನಾಯಕ. ಅವರ ಕಂಠ, ಭಿಭತ್ಸ ನಗು, ಕೆಕ್ಕರಿಸಿ ನೋಡುವ ಕಣ್ಣುಗಳು, ಅವರ ಸಂಭಾಷಣೆಗೆ ವೀಕ್ಷಕರು ಕೂಡ ಬೆಚ್ಚಿ ಬೀಳುತ್ತಿದ್ದರು ಅಂತಹ ಹೇಳತೀರದ ಪ್ರತಿಭೆ ವಜ್ರಮುನಿಯವರು. ಕ್ರೂರಪಾತ್ರಗಳ ಗಾಡ್ ಫಾದರ್ ಎಂದೇ ಖ್ಯಾತರಾಗಿದ್ದ ಅವರು, ತಮ್ಮ ನಿಜ ಜೀವನದಲ್ಲಿ ಸ್ನೇಹ ಜೀವಿ, ಯಾವ ಕಲಾವಿದರ ಜೊತೆಯಲ್ಲಿಯೂ ದ್ವೇಷ ಬೆಳಸಿ ಕೊಳ್ಳುತ್ತಿರಲಿಲ್ಲ. ತೆರೆಯ ಮೇಲೆ ಕ್ರೌರ್ಯದ ಮುಖವನ್ನು ಅನಾವರಣಗೊಳಿಸಿ, ಅತ್ಯಾಚಾರ ಪಾತ್ರದಲ್ಲಿ ಹೆಚ್ಚಾಗಿ ಕಾಣಿಸುತ್ತಿದ್ದ ಅವರು, ಚಿತ್ರೀಕರಣದಲ್ಲಿ ಹೆಣ್ಣನ್ನು ಪೂಜಿಸುತ್ತಿದ್ದ ಸದ್ಗುಣ ಸಂಪನ್ನ ವಜ್ರಮುನಿಯವರು.

 

 

11 ಮೇ 1944 ರಂದು ಜನಿಸಿದವರು ಸದಾನಂದಸಾಗರ್ ಎಂದು ಮನೆಯವರು ನಾಮಕರಣ ಮಾಡುತ್ತಾರೆ. ಮೂರು ದಶಕಗಳ ಕಾಲ ವಜ್ರಮುನಿಯಾಗಿ ಕನ್ನಡ ಚಿತ್ರರಂಗದ ಬಹು ಬೇಡಿಕೆಯ ನಟನಾಗಿ ಆಳಿದ ಅವರು ನಟ ಬೈರವ, ನಟ ಭಯಂಕರ, ಎಂಬ ಬಿರುದನ್ನು ಪಡೆದಿದ್ದಾರೆ. ತಮ್ಮ ವೃತ್ತಿ ಜೀವನದ ಬಹುಪಾಲು ಕಾಲದಲ್ಲಿ ನಕಾರಾತ್ಮಕ ಪಾತ್ರದಲ್ಲಿ ಅಭಿನಯಿಸಿದ ಅವರು 300 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ ಕನ್ನಡ ಚಿತ್ರರಂಗಕ್ಕೆ ಅಪಾರ ಸೇವೆಯನ್ನು ಸಲ್ಲಿಸಿದ್ದಾರೆ.

 

 

ವಜ್ರಮುನಿ ಅವರು ರಂಗಭೂಮಿ ಕಲಾವಿದನಾಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು ಮತ್ತು ಕಣಗಲ್ ಪ್ರಭಾಕರ್ ಶಾಸ್ತ್ರಿ ಅವರ ಪ್ರಚಂಡ ರಾವಣನ ನಾಟಕದಲ್ಲಿ ರಾವಣನ ಪಾತ್ರವನ್ನು ಅಭಿನಯಿಸಿ ಜನಪ್ರಿಯತೆ ಗಳಿಸುತ್ತಾರೆ. 1969 ರಲ್ಲಿ ಪುಟ್ಟಣ್ಣ ಕಣಗಾಲ್ ಅವರ ಮಲ್ಲಮ್ಮನ ಪವಾಡ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅವರು, 70 ರ ದಶಕದಲ್ಲಿ ಕನ್ನಡಿಗರ ಕಣ್ಮಣಿ ಡಾ.ರಾಜ್ ಕುಮಾರ್ ಅವರೊಂದಿಗಿನ ಜೋಡಿಯು ವ್ಯಾಪಕವಾಗಿ ಮೆಚ್ಚುಗೆ ಪಡೆಯಿತು. ಕನ್ನಡ ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆಯನ್ನು ಗುರುತಿಸಿ 2006 ರಲ್ಲಿ ಅವರಿಗೆ ಕನ್ನಡ ಸಿನಿಮಾ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

 

 

ವಜ್ರಮುನಿಯವರು ತಮ್ಮ ವೃತ್ತಿ ಜೀವನದಲ್ಲಿ ಮನೆಮುರುಕ ಪಾತ್ರಗಳಲ್ಲೇ ಅಭಿನಯಿಸಿ ಹಲವು ರೇಪ್ ಸೀನ್ ಗಳಲ್ಲಿ ನಟಿಸಿದ್ದಾರೆ. ಇಂತಹ ದೃಶ್ಯಗಳಲ್ಲಿ ಅಭಿನಯಿಸುವ ಮುನ್ನ, ತಮ್ಮ ಸಹ ನಟಿಯ ಮುಂದೇ ಕೈಮುಗಿದು `ನೋಡಮ್ಮ ಇದು ನನ್ನ ವೃತ್ತಿ ಧರ್ಮ ಮತ್ತು ವೃತ್ತಿ ಕರ್ಮ. ನನ್ನ ಪಾತ್ರಕ್ಕೆ ನಾನು ನ್ಯಾಯ ಒದಗಿಸುವ ಸಲುವಾಗಿ ಈ ದೃಶ್ಯದಲ್ಲಿ ಭಾಗಿಯಾಗಬೇಕಿದೆ. ದಯವಿಟ್ಟು ಬೇಸರ ಮಾಡಿಕೊಳ್ಳಬೇಡ ಏನಾದರೂ ಅಚಾತುರ್ಯವಾದರೆ ಕ್ಷಮಿಸು ಎಂದು ಬೇಡಿಕೊಳ್ಳುತ್ತಿದ್ದರು. ಇದನ್ನು ನೋಡಿದರೆ ಗೊತ್ತಾಗುತ್ತದೆ ವಜ್ರಮುನಿಯವರು ಎಂತಹ ಜಂಟಲ್ ಮೆನ್ ಎಂದು.! ಮತ್ತು ಅವರ ವಜ್ರದಂತ ಮನಸ್ಸಿಗೆ ಇದಕ್ಕಿಂತ ಉತ್ತಮ ನಿದರ್ಶನ ಬೇಕಾ?

 

 

ವಜ್ರಮುನಿ ಅವರು ಬರೀ ಸಿನಿಮಾಗಳಲ್ಲಿ ಅಭಿನಯಿಸದೇ, ಸಮಾಜಮುಖಿ ಸೇವೆಯಲ್ಲೂ ತಮ್ಮನ್ನು ತಾವು ತೊಡಗಿಸಿ ಕೊಂಡಿದ್ದರು. ಜಯನಗರ ಹೌಸಿಂಗ್ ಬೋರ್ಡ್ ಸೊಸೈಟಿಗೆ ಅಧ್ಯಕ್ಷ ಆಗಿದ್ದ ಅವರು,ಅನೇಕ ಸಂಘ ಸಂಸ್ಥೆ, ಸಹಕಾರಿ ಸಂಘಗಳಲ್ಲಿ ಸಕ್ರಿಯವಾಗಿ ಸಮಾಜ ಸೇವೆ ಮಾಡಿದ್ದಾರೆ. ಸರಿ ಸುಮಾರು 2000 ಸೈಟ್ ಗಳನ್ನು ಹಂಚಿದಲ್ಲದೇ ಬಡ ಮಕ್ಕಳಿಗೆ ಶಾಲೆಯನ್ನು ಕಟ್ಟಿಸಿ ಶಿಕ್ಷಣವನ್ನು ಒದಗಿಸಿದ್ದಾರೆ.

 

 

ಪ್ರತೀ ಭಾರಿಯೂ ನೆಗೆಟೀವ್ ರೋಲ್ ನಲ್ಲಿ ಅಭಿನಯಿಸುತ್ತಿದ್ದರಿಂದ ಅಂದಿನ ಮಹಿಳೆಯರು ಇವರನ್ನು ನೋಡಿದರೆ ಉರಿದು ಬೀಳುತ್ತಿದ್ದರು. ಮಕ್ಕಳುಗಳು ಹೆದರುತ್ತಿದ್ದರು. ಕಡೆಗೆ ಅವರಸಲಿಯ ಮುಖ ದರ್ಶನ ಆಗಲೇ ಇಲ್ಲ. 1994ರ ಚುನಾವಣೆಯಲ್ಲಿ ಕಾಂಗ್ರೇಸ್ನಿಂದ ಬಸವನಗುಡಿ ಕ್ಷೇತ್ರದಲ್ಲಿ ಸ್ಪರ್ದಿಸಿದ ಅವರು ಹೀನಾಯ ಸೋಲನ್ನು ಅನುಭವಿಸುತ್ತಾರೆ. ವಜ್ರಮುನಿ ಅವರು ವಿಲನ್ ಅನ್ನುವ ಕಾರಣಕ್ಕೆ ಎಷ್ಟೋ ಮಂದಿ ಅವರಿಗೆ ಮತ ಚಲಾಯಿಸುವುದಿಲ್ಲ. ಚುನಾವಣೆ ಪ್ರಚಾರಕ್ಕೆ ಹೋದರೆ ಕೇಡಿ ಬಂದ ಎಂದು ಮನೆ ಬಾಗಿಲು ಹಾಕಿಕೊಂಡು ಬಿಡುತ್ತಿದ್ದರಂತೆ.

 

 

ರಾಜಕೀಯ ರಂಗದಲ್ಲಿ ಹತಾಶೆ, ಚಿತ್ರ ನಿರ್ಮಾಣದಲ್ಲಿ ಸೋಲು, ಗಾಂಧಿನಗರದಲ್ಲಿ ಮೋಸ ಹೀಗೆ ಒಂದಾದ ಮೇಲೊಂದರಂತೆ ಪೆಟ್ಟು ತಿಂದಿದ್ದ ವಜ್ರಮುನಿಗೆ ಗಾಯದ ಮೇಲೆ ಬರೆ ಎಳೆದದ್ದು ಅನಾರೋಗ್ಯ.! ಎರಡೂ ಮೂತ್ರಪಿಂಡಗಳ ವೈಫಲ್ಯದಿಂದ ವಜ್ರಮುನಿ ಅವರು ಯಮ ಯಾತನೆ ಅನುಭವಿಸಿದ್ದರು. ರಕ್ತದೊತ್ತಡ ಮತ್ತು ಡಯಾಬಿಟೀಸ್ ನಿಂದ ಬಳಲುತ್ತಿದ್ದ ವಜ್ರಮುನಿಗೆ ಅತಿಯಾದ ಧೂಮಪಾನ, ಮಧ್ಯಪಾನ ಮಾರಕವಾಯ್ತು. ಎರಡೂ ಕಿಡ್ನಿಗಳು ಕೈಕೊಟ್ಟಿದ್ರಿಂದ ಎಂಟು ವರ್ಷಗಳ ಕಾಲ ತಿಂಗಳಿಗೆ 12 ರಂತೆ 1500ಕ್ಕೂ ಹೆಚ್ಚು ಬಾರಿ ಡಯಾಲಿಸಿಸ್ ಗೆ ಒಳಪಟ್ಟಿದ್ದರು.

 

 

ಮನೆಯಲ್ಲಿ ಜಾರಿ ಬಿದ್ದು, ಕಾಲು ಮುರಿದುಕೊಂಡಿದ್ದ ವಜ್ರಮುನಿ ಜನವರಿ 5, 2006 ರಂದು ಹೃದಯಾಘಾತದಿಂದ ಕೊನೆಯುಸಿರೆಳೆದರು.

LEAVE A REPLY

Please enter your comment!
Please enter your name here