ವಚನ -12 ಚೆನ್ನಮಲ್ಲಿಕಾರ್ಜುನನ ಸಾಂಗತ್ಯದಲಿ…

0
183

ಸಜ್ಜನೆಯಾಗಿ ಮಜ್ಜನಕ್ಕೆರೆವೆ
ಶಾಂತಳಾಗಿ ಪೂಜೆ ಮಾಡುವೆ
ಸಮರತಿಯಿಂದ ನಿಮ್ಮ ಹಾಡುವೆ
ಚೆನ್ನಮಲ್ಲಿಕಾರ್ಜುನಯ್ಯ
ನಿಮ್ಮನಗಲದ ಪೂಜೆ ಅನುವಾಯಿತ್ತೆನಗೆ.

ಆಧ್ಯಾತ್ಮವನ್ನು ಗುರಿಯಾಗಿಸಿಕೊಂಡು ಜೀವಿಸಿದ, ಇಂದಿಗೂ ಜೀವಂತವಾಗಿರುವ ಅಕ್ಕಮಹಾದೇವಿಯ ಪ್ರತಿಯೊಂದು ವಚನದಲ್ಲೂ ಆ ತನ್ಮಯತೆಯ ಘಮಲು. ಈ ವಚನವೂ ಅದೇ ಭಾವವನ್ನು ಬಿಂಬಿಸುವುದು.

ಅಕ್ಕ ತನಗಿದ್ದ ಹುಡುಕಾಟದ ಹಿಂದೆ ಸದಾ ನಿರತಳಾದವಳು. ಅದಕ್ಕೆ ಸಂಬಂಧಿಸಿದಂತೆ ಅಧ್ಯಯನ, ಅನುಭವ, ಅನುಭಾವದ ಹಂತಕ್ಕೆ ಕ್ರಮೇಣವಾಗಿ ತಲುಪಿ, ಒಂದೊಂದೇ ಮೆಟ್ಟಿಲು ಮೇಲೇರುತ್ತ ತನ್ನ ಗಮ್ಯದ ಕಡೆ ಮುಖ ಮಾಡಿ ಸಾಧನೆ ಗೈದ ತಪಸ್ವಿ.

ಸಜ್ಜನೆಯಾಗಿ ಮಜ್ಜನಕ್ಕೆರೆವೆ

ಇಲ್ಲಿ ಸಜ್ಜನ ಮತ್ತು ಮಜ್ಜನ ಎರಡು ಶಬ್ದಗಳ, ಶಬ್ದಾರ್ಥ ಮತ್ತು ಒಳಾರ್ಥ ತಿಳಿಯುವುದು ಬಹಳ ಮುಖ್ಯವಾದ ಅಂಶ. ಮೇಲ್ನೋಟದ ಗ್ರಹಿಕೆಗೆ ಕಾಣುವ ಮತ್ತು ಅಂತರ್ಗತವಾಗಿರುವ ಭಾವನೆಗಳ ಶೋಧ ಅತ್ಯವಶ್ಯಕ.

ಒಬ್ಬ ವ್ಯಕ್ತಿ ಸಜ್ಜನ ಆಗಲು ಹೇಗೆ ಸಾಧ್ಯ? ಅದಕ್ಕಾಗಿ ಏನೇನು ಮಾಡಬೇಕು? ಅದರ ಗುಣ ವಿಶೇಷತೆಗಳೇನು? ಹೇಗೆ ಬದುಕಿದರೆ ಸಜ್ಜನ ಎನಿಸಿಕೊಳ್ಳಬಹುದು? ಇದೆಲ್ಲದಕ್ಕಿಂತ ಮೊದಲು ಸಜ್ಜನ ಎಂದರೆ ಒಳ್ಳೆಯ ವ್ಯಕ್ತಿ; ಸಜ್ಜನಿಕೆ ಎಂದರೆ ಒಳ್ಳೆಯತನವೆನ್ನುವುದು ತಿಳಿದು ಬರುವುದು. ಹಾಗಾದರೆ ವ್ಯಕ್ತಿ ಒಳ್ಳೆಯವನಾಗಬೇಕಾದರೆ ಒಳ್ಳೆಯತನವನ್ನು ರೂಢಿಸಿಕೊಳ್ಳ ಬೇಕು. ಅದಕ್ಕಾಗಿ ದಿನ ನಿತ್ಯದ ಕೆಲಸ ಕಾರ್ಯಗಳಲ್ಲಿ ಅಳವಡಿಸಿಕೊಳ್ಳುವುದೇ ಸುಲಭ ಮಾರ್ಗ.

ರಾಮಕೃಷ್ಣ ಪರಮಹಂಸರು ಹೇಳುತ್ತಾರೆ, ‘ಏನನ್ನು ತಿನ್ನುತ್ತೇವೆಯೊ ಅದನ್ನೇ ತೇಗುತ್ತೇವೆ. ‘ಇಂಗ್ಲಿಷ್ ನಲ್ಲಿ ಒಂದು ಮಾತಿದೆ. ‘Tell me your company I will tell you what you are.’ ಹಿಂದಿಯಲ್ಲೂ ಇದೇ ಮಾತಿದೆ. ಜೈಸಾ ಸಂಗ್ ವೈಸಾ ರಂಗ್. ಅಂದರೆ ನಾವು ಎಂಥ ಜನರ ಜೊತೆಯಲ್ಲಿ ಇರುತ್ತೇವೊ ಅಂಥವರ ಗುಣವನ್ನು ಅಳವಡಿಸಿಕೊಳ್ಳುತ್ತೇವೆ.

ಇದೇ ನಿಟ್ಟಿನಲ್ಲಿ ಬಸವಣ್ಣನವರ ಒಂದು ವಚನವಿದೆ.

‘ಸಾರ ಸಜ್ಜನರ ಸಂಗ ಲೇಸು ಕಂಡಯ್ಯಾ
ದೂರ ದುರ್ಜನರ ಸಂಗವದು ಭಂಗವಯ್ಯಾ
ಸಂಗವೆರಡುಂಟು ಒಂದ ಹಿಡಿ ಒಂದ ಬಿಡು
ಮಂಗಳಮೂರ್ತಿ ನಮ್ಮ ಕೂಡಲಸಂಗನ ಶರಣರು.’

ಇಲ್ಲಿ ಬಸವಣ್ಣನವರು ಹೇಳುವಂತೆ ಜನ ಸಾಮಾನ್ಯರಲ್ಲಿ ಎರಡು ತರಹದ ಜನ. ಒಂದು ಸಜ್ಜನರ ಸಂಗ, ಇನ್ನೊಂದು ದುರ್ಜನರ ಸಂಗ. ಯಾವುದಾದರೂ ಒಂದನ್ನು ಮಾತ್ರ ಹಿಡಿದುಕೊಳ್ಳಬೇಕು. ದುರ್ವರ್ತನೆ ಒಳಗೆ ಇಟ್ಟುಕೊಂಡು, ಮೇಲೆ ಸಜ್ಜನಿಕೆ ತೋರುವುದು ಮುಖವಾಡ ಹಾಕಿಕೊಂಡಂತೆ. ಸದ್ಗುಣ ಸಂಪನ್ನರಾದ ಶರಣರಂತೆ ನಡೆನುಡಿ ಒಂದಾಗಿ ಎಲ್ಲರೂ ಬಾಳಬೇಕು.

ದಾಸ ಶ್ರೇಷ್ಠರಾದ ಕನಕದಾಸರು ತಮ್ಮ ಕೀರ್ತನೆಯಲ್ಲಿ ಹೇಳುತ್ತಾರೆ,

‘ಸಜ್ಜನರ ಸಂಗದೊಳು ಇರಿಸೆನ್ನ ರಂಗ
ದುರ್ಜನರ ಸಂಗ ನಾನೊಲ್ಲೆ ಮಂಗಳಾಂಗ’.

ಹಿಂದಿ ಕವಿಯೋರ್ವ ಹೇಳುತ್ತಾನೆ,

‘ಸೌ ಯೋಜನ ಸಜ್ಜನ್ ಬಸೈ
ಜಾನೆ ಹೃದಯಮಂದೀರ್
ಕಪಟ್ ಸನೇಹಿ ಆಂಗನೇ
ಜಾನೇ ಸಮುಂದರ್ ಪಾರ್’

ಸಜ್ಜನ ವ್ಯಕ್ತಿಯೊಬ್ಬನು ನೂರು ಯೋಜನ ದೂರದಲ್ಲಿ ವಾಸವಾಗಿದ್ದರೂ, ಅವನು ನಮ್ಮ ಹೃದಯ ಮಂದಿರದಲ್ಲೇ ವಾಸವಾಗಿದ್ದಾನೆಂದು ತಿಳಿಯಬೇಕು. ಕಪಟ ಗುಣ ಹೊಂದಿದ ವ್ಯಕ್ತಿಯು ಮನೆಯ ಅಂಗಳದಲ್ಲೇ ಇದ್ದರೂ, ಅವನು ಸಮುದ್ರದಾಚೆ ಇರುವನೆಂದು ತಿಳಿಯಬೇಕು. ಹೀಗೆ ಕೆಟ್ಟವರಿಂದ ದೂರವಿರಬೇಕು ಎನ್ನುವುದೇ ಇದರ ಆಶಯ.

ಮಹಾರಾಷ್ಟ್ರದಲ್ಲಿ ಆಗಿ ಹೋದ ಸಂತ ಏಕನಾಥರ ದೃಷ್ಟಾಂತವೊಂದಿದೆ.

ಹಿಂದೆ ಹೆಚ್ಚಿನ ವಿದ್ಯಾಭ್ಯಾಸ ಮಾಡಲು ಬಯಸುವವರು ಕಾಶಿಗೆ ಹೋಗುತ್ತಿದ್ದರು. ಅಲ್ಲೇ ನೆಲೆಸಿ ಪಂಡಿತರೊ, ಸಂತರೊ ಆಗುತ್ತಿದ್ದರು. ಹಾಗೆ ಏಕನಾಥರೊಮ್ಮೆ ಕಾಶೀಕ್ಷೇತ್ರದಲ್ಲಿ ಜ್ಞಾನಾರ್ಜನೆಗಾಗಿ ಉಳಿದುಕೊಂಡಿದ್ದರು. ಅಲ್ಲಿದ್ದಾಗ, ಅವರಲ್ಲಿರುವ ಶಾಂತಿ, ಸಹನೆ, ಸಂಯಮ ಗುಣಗಳನ್ನು ಎಲ್ಲರೂ ಪ್ರಶಂಸೆ ಮಾಡುವವರೆ ಆಗಿದ್ದರು.

ಅವರಲ್ಲಿರುವ ಈ ಸ್ಥಾಯಿ ಗುಣ ಸ್ವಭಾವದಿಂದಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿ ಪ್ರಸಿದ್ಧಿ ಪಡೆದಿದ್ದರು. ಅವರ ಕೀರ್ತಿಯನ್ನು ಸಹಿಸದ ದುರುಳನೊಬ್ಬನು, ಅವರ ಸಹನೆಗೆ ಸವಾಲೊಡ್ಡಿದನು. ಹೇಗಾದರೂ ಮಾಡಿ ಅವರಲ್ಲಿರುವ ಸಹನಶೀಲತೆ ಕೆಡಿಸುವ ಕುತಂತ್ರ ಹೂಡಿದನು.

ಒಂದು ದಿನ ಏಕನಾಥರು ಗಂಗಾಸ್ನಾನ ಮಾಡಿ ಬರುತ್ತಿರುವಾಗ, ಎಲೆ ಅಡಿಕೆಯನ್ನು ತಿಂದು, ಚೆನ್ನಾಗಿ ಮೆದ್ದು, ಬಾಯ್ತುಂಬಾ ಮಾಡಿಕೊಂಡು, ಅವರು ಬರುವುದನ್ನೇ ಕಾಯುತ್ತ ಕುಳಿತನು. ಅವರು ಕಂಡೊಡನೆ ಅವರ ಮೈ ಮೇಲೆ ಉಗುಳಿದನು. ಇದರಿಂದ ಏಕನಾಥರ ವರ್ತನೆಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬರಲಿಲ್ಲ. ಅವರು ಮರು ಉತ್ತರ ಕೊಡುವುದಾಗಲಿ, ಅಸಹನೆ ತೋರುವುದಾಗಲಿ ವ್ಯಕ್ತ ಪಡಿಸಲೇ‌ ಇಲ್ಲ. ಒಂದು ಮಾತೂ ಆಡದ ಆ ಮಹಾನುಭಾವರು ಮತ್ತೆ ಹಿಂದಿರುಗಿ ಗಂಗಾಸ್ನಾನ ಮಾಡಿ ಬಂದರು.

ಆ ದರುಳನ ಕೋಪ ದ್ವಿಗುಣವಾಯಿತು. ಅವನು ಮತ್ತೆ ಅವರ ಮೇಲೆ ಉಗುಳಿದ. ಅವರು ಪುನಃ ಗಂಗಾಸ್ನಾನ ಮಾಡಿ ಬಂದರು. ಅವನು ಮತ್ತೆ ಮತ್ತೆ ಉಗುಳಿದ, ಅವರು ಹಾಗೇ ಗಂಗಾಸ್ನಾನ ಮಾಡಿ ಬಂದರು.ಇದು ಹೀಗೆಯೆ ತೊಬತ್ತೆಂಟು ಬಾರಿ ನಡೆಯಿತು. ಏಕನಾಥರು ತೊಂಬತ್ತೊಂಬತ್ತನೇ ಬಾರಿಯೂ ಗಂಗಾಸ್ನಾನ ಮಾಡಿ ಬಂದರು.

ಇಷ್ಟಾದ ಮೇಲೆ ಆ ದುರುಳನ ಕಲ್ಲು ಮನಸು ಕರಗಿತು. ಅವನಿಗೆ ಪಶ್ಚಾತ್ತಾಪವಾಗಿ ಕಣ್ಣೀರು ಹಾಕಿದನು. ಪಾಪ ಪ್ರಜ್ಞೆಯಿಂದ ಒದ್ದಾಡುತ್ತ ಏಕನಾಥರ ಕಾಲುಹಿಡಿದನು. ಅವರ ಪಾದಗಳ ಮೇಲೆ ಕಣ್ಣೀರು ಹನಿಸಿದನು. ಅಪರಾಧವಾಯಿತೆಂದು ಮರುಗುತ್ತ ಕ್ಷಮೆ ಯಾಚಿಸಿದನು.

ಆಗ ಏಕನಾಥರು ಸ್ಪಂದಿಸಿದ್ದು ಹೀಗೆ,

‘ಅಯ್ಯಾ ಮಹಾತ್ಮ ನೀನೇಕೆ ಅಳುವೆ? ನೀನು ಯಾವ ತಪ್ಪನ್ನೂ ಮಾಡಿಲ್ಲ. ನೀನು ಪುಣ್ಯಾತ್ಮ. ನಿನ್ನಿಂದಾಗಿ ಈ ದಿನ ತೊಂಬತ್ತೊಂಬತ್ತು ಬಾರಿ ಗಂಗಾ ಸ್ನಾನ ಮಾಡಿದ ಪುಣ್ಯ ಬಂತು. ಇನ್ನೊಂದು ಬಾರಿ ಉಗುಳಿದ್ದರೆ ನೂರು ಬಾರಿ ಗಂಗಾ ಸ್ನಾನ ಮಾಡಿಸಿದ ಪುಣ್ಯ ನಿನಗೆ ಬರುತ್ತಿತ್ತು’ ಎಂದರು.

ಆ ದರುಳನ ಮನಸು ಕರಗಿ, ನಾಚಿಕೆಯಿಂದ ತಲೆ ತಗ್ಗಿಸುವಂತಾಯಿತು. ಅವನು ಮುಂದೆ ಸಂತ ಏಕನಾಥರ ಶಿಷ್ಯನಾಗಿ ಸಜ್ಜನಿಕೆಯ ಉತ್ತಮ ಜೀವನ ನಡೆಸಿದನು.

ಒಬ್ಬ ವ್ಯಕ್ತಿ ಸಜ್ಜನನಾಗಬೇಕಾದರೆ, ಅವನಲ್ಲಿ ಶಾಂತಿ, ಸಹನೆ, ಸಂಯಮ, ಈ ಮೂರೂ ಗುಣಗಳಿರಬೇಕೆಂಬುದು ಖಚಿತ. ಈ ಎಲ್ಲಾ ಗುಣಗಳನ್ನು ಅಳವಡಿಸಿಕೊಂಡರೆ ಮಾತ್ರ ಸಜ್ಜನ ಎನಿಸಿಕೊಳ್ಳಬಹುದು. ಅಕ್ಕಮಹಾದೇವಿ ಇಲ್ಲಿ ವ್ಯಷ್ಟಿ ನೆಲೆಯಲ್ಲಿ ಸಜ್ಜನೆಯಾಗಿ ಮಜ್ಜನಕ್ಕೆರೆವಳು.

ಹನ್ನೆರಡನೇ ಶತಮಾನದಲ್ಲಿ ಅಣ್ಣ ಬಸವಣ್ಣನವರು ಮಾನವೀಯ ಮೌಲ್ಯಗಳುಳ್ಳ ಲಿಂಗಾಯತ ಧರ್ಮವನ್ನು ಸ್ಥಾಪಿಸಿ, ಜನ ಸಾಮಾನ್ಯರಲ್ಲಿ ದೇವರ ಪರಿಕಲ್ಪನೆಯನ್ನು ಬದಲಿಸಿ, ಏಕದೇವೋಪಾಸನೆಯ ಜಾಗೃತಿ ಮೂಡಿಸಿ, ಇಷ್ಟಲಿಂಗ ಪೂಜೆಯನ್ನು ಕರುಣಿಸಿದ ಕಾಲವದು.

ಬಸವಾದಿ ಶರಣರಿಂದ ಪ್ರಭಾವಿತಳಾದ ಅಕ್ಕ, ಪ್ರತಿದಿನ ಲಿಂಗ ಪೂಜೆ ಮಾಡುವಳು. ಅಂಗೈಯೊಳಗಿನ ಲಿಂಗಕ್ಕೆ ನೀರೆರೆಯುವುದೇ ಮಜ್ಜನ. ಅಂದರೆ ಲಿಂಗ ಪೂಜೆ ಮಾಡುವ ಪ್ರತಿಯೊಬ್ಬನೂ ಸಜ್ಜನನಾಗಿದ್ದುಕೊಂಡು ಮಜ್ಜನ ಮಾಡಬೇಕು.

ಶಾಂತಳಾಗಿ ಪೂಜೆ ಮಾಡುವೆ

ಲಿಂಗ ಪೂಜೆಯನ್ನು ಶಾಂತವಾಗಿ ಮಾಡುವುದೆಂದರೆ ಏನು? ಇತ್ತೀಚೆಗೆ ಇಷ್ಟಲಿಂಗ ಪೂಜಾ ವಿಧಾನವು ವೈಜ್ಞಾನಿಕವಾದ ಮಾನ್ಯತೆಯನ್ನು ಪಡೆದಿದೆ. ಅಣ್ಣ ಬಸವಣ್ಣನವರು ದೇವರೇ ಇಲ್ಲ ಎಂದು ಹೇಳುವುದಕ್ಕಿಂತ, ಕುರುಹು ಆಗಿ ಇಷ್ಟಲಿಂಗವನ್ನು ನೀಡಿದರು. ಅದೊಂದು ಧ್ಯಾನದ ಮಾಧ್ಯಮವೂ ಹೌದು. ಧ್ಯಾನಸ್ಥ ಸ್ಥಿತಿಯನ್ನು ಶಾಂತಿಯುತ ಸ್ಥಿತಿ ಎಂದೇ ಹೇಳಬೇಕು. ಲಿಂಗ ಪೂಜೆಯಲ್ಲಿ ನಿರತಳಾದ ಅಕ್ಕಮಹಾದೇವಿಯು ಶಾಂತಳಾಗಿದ್ದಾಳೆ.

ಸಮರತಿಯಿಂದ ನಿಮ್ಮ ಹಾಡುವೆ

ಇಷ್ಟಲಿಂಗ ಪೂಜೆಯಲ್ಲಿ ಮುಳುಗಿದಾಗ, ಅಂಗ ಮತ್ತು ಲಿಂಗ ಎರಡೂ ಒಂದಾದ ಭಾವ. ಇದಕ್ಕೆ ಶರಣರು ‘ಲಿಂಗಾಂಗ ಸಾಮರಸ್ಯ’ ಎಂದು ಕರೆದರು. ಬೇರೆ ಬೇರೆಯಾಗಿದ್ದ ಎರಡು ಒಂದಾದ ಸ್ಥಿತಿ. ಆ ಧ್ಯಾನಸ್ಥ ಸ್ಥಿತಿಯನ್ನು ಸಮರತಿ ಎಂದು ಕರೆದರು. ಅಂಗ ಮತ್ತು ಲಿಂಗದ ಮಿಲನವನ್ನು ಸಂಭ್ರಮಿಸುವ ಅಕ್ಕ ಆನಂದದಿಂದ ಹಾಡುತ್ತ, ಹಾಡಿನ ರೂಪದಲ್ಲಿ ಹೊರಹಾಕುವಳು.

ಚೆನ್ನಮಲ್ಲಿಕಾರ್ಜುನಯ್ಯ ನಿಮ್ಮನಗಲದ ಪೂಜೆ ಅನುವಾಯಿತ್ತೆನಗೆ

ಅಕ್ಕನ ಬದುಕಿನಲ್ಲಿದ್ದುದು ಒಂದೇ ಒಂದು ಹುಡುಕಾಟ. ಅದು ಅವಳ ಆತ್ಮ ಸಂಗಾತಿ ಚೆನ್ನಮಲ್ಲಿಕಾರ್ಜುನನ ಹುಡುಕಾಟ. ಅವಳ ಆ ಅನ್ವೇಷಣೆಗೆ ಶರಣರ ಸಮೂಹ ಮತ್ತು ಇಷ್ಟಲಿಂಗ ಪೂಜೆಯು ಮಾಧ್ಯಮವಾಯಿತೆಂದು ತೃಪ್ತಳಾಗುವಳು. ತನ್ನ ಮತ್ತು ಚೆನ್ನಮಲ್ಲಿಕಾರ್ಜುನನ ನಡುವೆ ಅಗಲಿಕೆಯನ್ನು ಊಹಿಸಲು ಸಾಧ್ಯವೇ ಇರಲಿಲ್ಲ.

ಈ ವಚನವನ್ನು ವ್ಯಷ್ಟಿ ನೆಲೆಯಲ್ಲಿ ಅಕ್ಕ ಹೇಳಿರಬಹುದು. ಆದರೆ ಇದನ್ನು ಸಮಷ್ಟಿಯಾಗಿಯೂ ಚಿಂತಿಸ‌ಬಹುದು. ವ್ಯಕ್ತಿತ್ವ ವಿಕಸನದ ಭಾಗವಾಗಿಯೂ ಪರಿಗಣಿಸಬಹುದು. ಒಬ್ಬ ವ್ಯಕ್ತಿ ಯಾವುದೇ ಒಂದು ಗುರಿಗೆ ಬದ್ಧನಾಗಿದ್ದರೆ, ಅದನ್ನು ತನ್ನದಾಗಿಸಿಕೊಳ್ಳುವ ಛಲವಿರಬೇಕು. ಆ ಬದ್ಧತೆ ಬಯಸುವುದು ಒಂದಿಷ್ಟು ಶ್ರದ್ಧೆ, ಧ್ಯಾನಸ್ಥ ಸ್ಥಿತಿ ಮತ್ತು ಎರಡು ಭಿನ್ನವಾಗಿ ಉಳಿಯದ ಅಖಂಡತೆ. ಎರಡು ಇದ್ದದ್ದು ಒಂದೇ ಆದ ಭಾವನಾ ಸ್ಥಿತಿ.

ಅಕ್ಕಮಹಾದೇವಿಯು ವೈಯಕ್ತಿಕ ನೆಲೆಯಲ್ಲಿ, ಆಧ್ಯಾತ್ಮಿಕ ಶೋಧನೆಯ ಮಾರ್ಗದಲ್ಲಿ, ಲಿಂಗಪೂಜೆಯಲ್ಲಿ ನಿರತಳಾದ ಸಂದರ್ಭದಲ್ಲಿ ವ್ಯಕ್ತ ಪಡಿಸಿದ ಭಾವನೆಗಳು ಈ ವಚದಲ್ಲಿದೆ. ನಾವು ಸಾಮಾನ್ಯರು ನಮ್ಮಲ್ಲಿ ಅಳವಡಿಕೊಳ್ಳ ಬೇಕಾಗಿರುವುದು, ‘ನಾನು ಮತ್ತು ನನ್ನ ಗುರಿ ಎರಡರ ಮಧ್ಯೆ ಮೂರನೆಯದೇನೂ ಇರಕೂಡದು.’ ಆಗ ಸಫಲತೆ ಕಟ್ಟಿಟ್ಟ ಬುತ್ತಿ.

–ಸಿಕಾ
ಕಾವ್ಯಶ್ರೀ ಮಹಾಗಾಂವಕರ

LEAVE A REPLY

Please enter your comment!
Please enter your name here