‘ಉತ್ತರ ಕರ್ನಾಟಕ’ ಎಂಬ ಸಾಂಸ್ಕøತಿ ವೈವಿಧ್ಯತೆಯ ಬೀಡು..! ತಪ್ಪದೇ ಓದಿ

0
214

ಉತ್ತರ ಕರ್ನಾಟಕ..! ದಕ್ಷಿಣ ಭಾರತದಲ್ಲಿ ಕರ್ನಾಟಕ ಪ್ರಾಂತದಲ್ಲಿರುವ ಪ್ರಸ್ಥಭೂಮಿಯ ಒಂದು ಶುಷ್ಕವಾದ ವಿಸ್ತಾರವಾದ ಭೂಮಿ. ಈ ನೆಲಕ್ಕೆ ತನ್ನದೇ ಆದ ಸಾಂಸ್ಕøತಿ ಹಿನ್ನಲೆ ಮತ್ತು ಅಗಾಧವಾದ ಪರಂಪರೆಯಿದೆ. ಕರ್ನಾಟಕದ ಉತ್ತರ ಭಾಗದ ಬೆಳಗಾವಿ, ಬಿಜಾಪುರ, ಬಾಗಲಕೋಟೆ, ಬೀದರ್, ಬಳ್ಳಾರಿ, ಗುಲ್ಬರ್ಗಾ, ಯಾದಗಿರಿ, ರಾಯಚೂರು, ಗದಗ್, ಧಾರವಾಡ, ಹಾವೇರಿ, ಕೊಪ್ಪಳ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನು ಒಳಗೊಂಡಿದೆ. ಈ ಎಲ್ಲ ಜಿಲ್ಲೆಗಳ ಭಾಷೆ ಮತ್ತು ಸಾಂಸ್ಕøತಿಕ ಸಾಮ್ಯತೆ ಈ ಜಿಲ್ಲೆಗಳನ್ನು ಒಂದುಗೂಡಿಸಿದೆ. ದಖ್ಖನ್ ಪ್ರಸ್ಥಭೂಮಿ ಈ ಜಿಲ್ಲೆಗಳಲ್ಲಿ ವಿಶಾಲವಾಗಿ ಹರಡಿಕೊಂಡಿರುವುದರಿಂದ ಇಲ್ಲಿಯ ವಾಯುಗುಣ ಸದಾ ಬಿಸಿಲಿನಿಂದ ಆವರಿಸಿರುತ್ತದೆ.

ಇನ್ನು ಉತ್ತರಕರ್ನಾಕದ ಜೀವ ನದಿಗಳೆಂದರೆ ಕೃಷ್ಣಾ ನದಿ ಮತ್ತು ಅದರ ಉಪನದಿಗಳಾದ ಭೀಮಾ, ಘಟಪ್ರಭಾ, ಮಲಪ್ರಭಾ ಮತ್ತು ತುಂಗಭದ್ರಾ ನದಿಗಳು. ಈ ನದಿಗಳ ಈ ಪ್ರದೇಶದಲ್ಲಿ ವಿಸ್ತಾರವಾಗಿ ಹರಿಯುತ್ತವೆ. ಉತ್ತರ ಕರ್ನಾಟಕದ ಜನರ ನೀರಿನ ದಾಹವನ್ನು ತಣಿಸುವ ಶಕ್ತಿ ಈ ನದಿಗಳಿಗಿದೆ. ಮಹಾರಾಷ್ಟ್ರದ ಮಹಾಬಲೇಶ್ವರ ಸೇರಿದಂತೆ ಪಶ್ಚಿಮ ಘಟ್ಟದಲ್ಲಿ ಸುರಿಯುವ ಮಳೆ ಉತ್ತರ ಕರ್ನಾಟಕದ ಸಮೃದ್ದತೆಯನ್ನು ಹೆಚ್ಚಿಸಿದೆ. ಹೀಗಾಗಿಯೇ ಉತ್ತರ ಕರ್ನಾಟಕದ ಜನರ ಮುಖ್ಯ ಆಹಾರ ಬೆಳೆಯಾದ ಬಿಳಿಜೊಳ, ಸಜ್ಜಿ, ನವಣಿ, ಗೋಧಿ, ತೊಗರೆ ಸೇರಿದಂತೆ ಅನೇಕ ವಿವಿಧ ಬೆಳೆಗಳಿಗೆ ಈ ನದಿಗಳೆ ಆಧಾರವಾಗಿವೆ. ‘ಜವಾರಿ’ ಎಂದು ಕರೆಯಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು, ಸೇಂಗಾ ಚಟ್ನಿ, ಎಣ್ಣೆ ಬದನೆಕಾಯಿ ಪಲ್ಯ, ಕೆನೆಮೊಸರುಗಳು ಕರ್ನಾಟಕದ ಮೂಲೆ ಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ. ವಾಣಿಜ್ಯ ಬೆಳೆಯಾಗಿ ನಿಂಬೆ, ದ್ರಾಕ್ಷಿ, ಸೂರ್ಯಕಾಂತಿ ಹೆಚ್ಚಿನ ಪ್ರಾಮುಖ್ಯತೆ ಪಡೆದಿವೆ.

ಇನ್ನು ಉತ್ತರ ಕರ್ನಾಟಕದ ವಾಯುಗುಣ ಬೇಸಿಗೆ-ಚಳಿಗಾಲದಲ್ಲಿ ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಆದರೆ ಬೇಸಿಗೆಯಲ್ಲಿ ವಿಜಯಪುರದಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಉಷ್ಣತೆ ಅಂದರೆ 42.7 ಡಿಗ್ರಿವರೆಗೆ ತಾಪಮಾನ ಏರುತ್ತದೆ. ಹೀಗಾಗಿ ಕರ್ನಾಟಕದಲ್ಲಿಯೇ ಅತಿ ಹೆಚ್ಚು ತಾಪಮಾನ ಹೊಂದಿರುವ ಜಿಲ್ಲೆಗಳೆಲ್ಲಾ ಉತ್ತರ ಕರ್ನಾಟಕದಲ್ಲಿವೆ. ಇನ್ನು ಈ ಪ್ರದೇಶದ ಮುಖ್ಯ ಭಾಷೆ ಕನ್ನಡ. ಆದರೆ ಉತ್ತರ ಕರ್ನಾಟಕದ ಕನ್ನಡ ವಿಭಿನ್ನ ಸ್ವರೂಪವನ್ನು ಹೊಂದಿದೆ. ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ ಉರ್ದು, ಮರಾಠಿ ಮಿಶ್ರಿತ ವಿಶಿಷ್ಠವಾದ ಕನ್ನಡ ಉತ್ತರಕರ್ನಾಟಕದ ಕನ್ನಡವೆಂದೇ ಗುರುತಿಸಲ್ಪಡುತ್ತದೆ.

ಇನ್ನು ಉತ್ತರ ಕರ್ನಾಟಕ ‘ಶರಣ ಪರಂಪರೆಯ ಬೀಡು’ ಎಂದೇ ಹೆಸರುವಾಸಿಯಾಗಿದೆ. ‘ಕಲ್ಯಾಣ ಕ್ರಾಂತಿ’ಯ ಹರಿಕಾರ ಅಣ್ಣ ಬಸವಣ್ಣ ಇದೇ ಉತ್ತರ ಕರ್ನಾಟಕದ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯ ಇಂಗಳೇಶ್ವರ ಗ್ರಾಮದಲ್ಲಿ ಜನಿಸಿರುವುದು ವಿಶೇಷ. ಕುಮಾರ ವಾಲ್ಮೀಕಿ, ಡಾ. ಮುರಿಗೆಪ್ಪ ಚನ್ನವೀರಪ್ಪ ಮೋದಿ, ರಾಜಾ ವೆಂಕಟಪ್ಪ ನಾಯಕ, ವೀರ ಸಿಂಧೂರ ಲಕ್ಷ್ಮಣ, ಚೆನ್ನಬಸಪ್ಪ ಅಂಬಲಿ, ಫ.ಗು.ಹಳಕಟ್ಟಿ, ಶಿಂಪಿ ಲಿಂಗಣ್ಣ, ಶ್ರೀ ಗುರು ಚಕ್ರವರ್ತಿ ಸದಾಶಿವ ಮೂರ್ತಿ, ಶ್ರೀ ಬಂಥನಾಳ ಶಿವಯೋಗಿಗಳು, ಶ್ರೀ ಖಾಸ್ಗತೇಶ್ವರ ಮಹಾಸ್ವಾಮಿಜಿಗಳು, ರಮಾನಂದ ತೀರ್ಥ ಮಹಾರಾಜರು, ಗಣಪತರಾವ್ ಮಹಾರಾಜ, ಆಲೂರು ವೆಂಕಟ ರಾವ್ ಸೇರಿದಂತೆ ಅನೇಕ ಮಹಾನ್ ವ್ಯಕ್ತಿಗಳು ಇದೇ ಉತ್ತರ ಕರ್ನಾಟಕದವರು.

ಇನ್ನು ಉತ್ತರ ಕರ್ನಾಟಕ ಪುರುಷರು ದೋತ್ರ, ನೆಹರು ಅಂಗಿ ಮತ್ತು ರೇಷ್ಮೆ ರುಮಾಲು ಧರಿಸುತ್ತಾರೆ. ಮಹಿಳೆಯರು ಇಲಕಲ್ಲ ಸೀರೆ ಮತ್ತು ಖಾದಿ ಬಟ್ಟೆಗಳನ್ನು ಧರಿಸುತ್ತಾರೆ. ಈ ಭಾಗದಲ್ಲಿ ಲಂಬಾಣಿ ಮತ್ತು ಬೇಡ ಜನಾಂಗವು ವಿಶೇಷವಾಗಿದೆ. ಲಾವಣಿ ಪದಗಳು, ಡೊಳ್ಳು ಕುಣಿತ, ಗೀಗೀ ಪದಗಳು, ಹಂತಿ ಪದಗಳು ಮತ್ತು ಮೊಹರಮ್ ಹೆಜ್ಜೆ ಕುಣಿತ ಮುಂತಾದವುಗಳು ಈ ನಾಡಿನ ಕಲೆಯಾಗಿದೆ. ಹೀಗೆ ಉತ್ತರ ಕರ್ನಾಟಕ ತನ್ನದೇ ಆದ ಸಾಂಸ್ಕøತಿ ಸಿರಿವಂತಿಕೆಯಿಂದ ಸಮೃದ್ದವಾಗಿದೆ. ಆದರೆ ಸದಾ ಕಾಲ ಕಾಡುವ ಬರಗಾಲ ಈ ಜನರ ಬದುಕಿನ ಬವಣೆಯನ್ನು ಹೆಚ್ಚಿಸಿದೆ.

LEAVE A REPLY

Please enter your comment!
Please enter your name here