ಮೈತ್ರಿ ಸರ್ಕಾರವನ್ನು ಉರುಳಿಸಿದ ಅನರ್ಹ ಶಾಸಕರಿಗೆ ಸುಪ್ರೀಂಕೋರ್ಟ್ ಬಿಗ್ ಶಾಕ್ ನೀಡಿದೆ. ಮಹತ್ವದ ಬೆಳವಣಿಗೆಯಲ್ಲಿ ಅನರ್ಹತೆ ಪ್ರಶ್ನಿಸಿ ಸುಪ್ರೀಂಗೆ ಸಲ್ಲಿಸಿದ್ದ ಅರ್ಜಿಯನ್ನು ತುರ್ತು ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಅನರ್ಹ ಶಾಸಕರಿಗೆ ತಿಳಿಸುವ ಮೂಲಕ ಬಿಗ್ ಶಾಕ್ ನೀಡಿದೆ.

ಇನ್ನು ಅನರ್ಹ ಶಾಸಕರ ಪರ ವಕೀಲ ಮುಕುಲ್ ರೊಹ್ಟಗಿ, ನ್ಯಾ. ಎನ್.ವಿ. ರಮಣ ನೇತೃತ್ವದ ದ್ವಿಸದಸ್ಯ ಪೀಠದ ಮುಂದೆ ಮನವಿ ಮಾಡಿದ್ದರು. ಆದರೆ, ಸುಪ್ರೀಂಕೋರ್ಟ್ ತುರ್ತು ವಿಚಾರಣೆ ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಸುಪ್ರೀಂ ತೀರ್ಪಿನಿಂದ ಸಚಿವ ಸ್ಥಾನದ ಕನಸು ಕಂಡಿದ್ದ ಅನರ್ಹ ಶಾಸಕರಿಗೆ ಭಾರೀ ನಿರಾಸೆ ಉಂಟಾಗಿದ್ದು, ಅವರ ರಾಜಕೀಯ ಭವಿಷ್ಯ ಇದೀಗ ತ್ರಿಶಂಕು ಸ್ಥಿತಿಗೆ ತಲುಪಿದೆ.

ಅನರ್ಹ ಶಾಸಕರು ಸುಪ್ರೀಕೋರ್ಟ್ಗೆ ಅರ್ಜಿ ಸಲ್ಲಿಸಿ ಒಂದು ತಿಂಗಳಾದರೂ ವಿಚಾರಣೆಗೆ ಬಂದಿಲ್ಲ. ಹೀಗಾಗಿ ಶೀಘ್ರ ಅರ್ಜಿ ವಿಚಾರಣೆ ಕೈಗೆತ್ತಿಕೊಳ್ಳುವಂತೆ ರೊಹ್ಟಗಿ ಮನವಿ ಮಾಡಿದ್ದರು. ಈಗಾಗಲೇ ಒಮ್ಮೆ ತುರ್ತುವಿಚಾರಣೆ ಮನವಿಮಾಡಿ ಹಿನ್ನೆಡೆ ಅನುಭವಿಸಿದ್ದ ಅನರ್ಹ ಶಾಸಕರಿಗೆ ಇದೀಗ ಮತ್ತೊಮ್ಮೆ ಹಿನ್ನಡೆಯಾಗಿದೆ. ಈ ಎಲ್ಲ ಬೆಳವಣಿಗೆಗಳು ಅನರ್ಹ ಶಾಸಕರನ್ನು ಚಿಂತೆಗೀಡು ಮಾಡಿದ್ದು, ಮುಂದೆ ವಿಚಾರಣೆ ನಡೆದು ತೀರ್ಪು ಏನಾಗಬಹುದು ಎಂಬ ದುಗುಡ ಶುರುವಾಗಿದೆ.