ಹಲ್ಲೆ ನಡೆಸಿದ್ದ ಟ್ರಾಫಿಕ್ ಮುಖ್ಯಪೇದೆ ಏನಾಗಿದ್ದಾರೆ ಗೊತ್ತಾ?

0
268

ಮೋಟಾರು ವಾಹನ ಕಾಯ್ದೆಗೆ ಹೊಸ ದಂಡದ ಮೊತ್ತ ಜಾರಿಯಾಗಿರುವ ಬಗ್ಗೇ ದೇಶದಾದ್ಯಂತ ಪರ-ವಿರೋಧ ಮಾತುಗಳು ಕೇಳಿಬರುತ್ತಿವೆ. ಸಾಕಷ್ಟು ಕಡೆ ಇದನ್ನು ವಿರೋಧಿಸಿ ಪ್ರತಿಭಟನೆಗಳೂ ಸಹ ನಡೆಯುತ್ತಿವೆ. ಇದರ ಮಧ್ಯೆ ಕೆಲವು ಟ್ರಾಫಿಕ್ ಪೊಲೀಸರ ಹಾವಳಿಯೂ ಸಹ ಜಾಸ್ತಿಯಾಗಿದೆ. ಸಂಚಾರಿ ನಿಯಮ ಉಲ್ಲಂಘನೆ ನೆಪದಲ್ಲಿ ಸಾರ್ವಜನಿಕರನ್ನು ಲೂಟಿ ಮಾಡುತ್ತಿದ್ದಾರೆ.

ಬೆಂಗಳೂರು ನಗರದಲ್ಲಿ ಸಂಚಾರಿ ನಿಯಮ ಉಲ್ಲಂಘನೆ ನೆಪದಲ್ಲಿ ಗೂಡ್ಸ್ ಚಾಲಕನೊಬ್ಬನನ್ನು ತಡೆದು ಹಲ್ಲೆ ನಡೆಸಿದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಹಲಸೂರು ಗೇಟ್ ಕಾನ್‍ಸ್ಟೇಬಲ್ ನನ್ನು ಸಂಚಾರ ತರಬೇತಿ ಸಂಸ್ಥೆಗೆ ವರ್ಗಾವಣೆ ಮಾಡಿ, ಇಲಾಖೆ ವಿಚಾರಣೆಗೆ ಆದೇಶಿಸಲಾಗಿದೆ. ಸಾರ್ವಜನಿಕರು, ಹೆಡ್ ಕಾನ್‍ಸ್ಟೇಬಲ್ ಅಮಾನತು ಮಾಡಿಲ್ಲವೆಂದು ಪೊಲೀಸ್ ಇಲಾಖೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಮತ್ತೊಂದೆಡೆ ಇದೇ ಶನಿವಾರ ರಾತ್ರಿ 10 ಗಂಟೆಗೆ ಕೆಲವು ದುಷ್ಕರ್ಮಿಗಳು ಗೂಡ್ಸ್ ಚಾಲಕನ ಮನೆಗೆ ನುಗ್ಗಿ ಆತನ ತಾಯಿಗೆ `ನಿಮ್ಮ ಮಗ ಎಲ್ಲಿದ್ದಾನೆ,ಆತನನ್ನು ಬಿಡುವುದಲ್ಲ’ ಎಂದು ಬೆದರಿಕೆ ಹಾಕಿದ್ದಾರೆ. ಈ ಸಂಬಂಧ ಪುಟ್ಟೇನಹಳ್ಳಿ ಪೊಲೀಸ್ ಠಾಣೆಗೆ ಚಾಲಕನ ತಾಯಿ ದೂರು ನೀಡಿದ್ದಾರೆ. ಪೊಲೀಸರು ಈ ಸಂಬಂಧ ಎನ್‍ಸಿಆರ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಹೆಡ್ ಕಾನ್‍ಸ್ಟೇಬಲ್ ಮಹಾಸ್ವಾಮಿ ಎಂಬುವ ಅಧಿಕಾರಿ ಟೌನ್‍ಹಾಲ್ ಎದುರು ಚಲಿಸುತ್ತಿದ್ದ ಗೂಡ್ಸ್ ವಾಹನದಲ್ಲಿ ಕುಳಿತು ಚಾಲಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದರು. ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು ಹಾಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೊಶ ಕೂಡ ವ್ಯಕ್ತವಾಗಿತ್ತು. ಎಸಿಪಿ ಮಟ್ಟದ ಅಧಿಕಾರಿಯೊಬ್ಬರ ನೇತೃತ್ವದಲ್ಲಿ ಹೆಡ್ ಕಾನ್‍ಸ್ಟೇಬಲ್ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ.

ಥಣಿಸಂದ್ರದಲ್ಲಿರುವ ಟ್ರಾಫಿಕ್ ಟ್ರೈನಿಂಗ್ ಇನ್‍ಸ್ಟಿಟ್ಯೂಟ್‍ಗೆ ಹೆಡ್‍ಕಾನ್‍ಸ್ಟೇಬಲ್‍ನನ್ನು ವರ್ಗಾವಣೆ ಮಾಡಲಾಗಿದೆ. ಒತ್ತಡ ನಿರ್ವಹಣೆ ಹಾಗೂ ಮೃದಕೌಶಲ ಕುರಿತ ಹತ್ತು ದಿನಗಳ ಕಡ್ಡಾಯ ತರಬೇತಿ ಪಡೆದು ಪ್ರಮಾಣಪತ್ರ ಸಲ್ಲಿಸುವಂತೆ ಸೂಚಿಸಲಾಗಿದೆ. ಇದಾದ ಬಳಿಕ ಆತನ ಮಾನಸಿಕ ಸ್ಥಿರತೆ ಬಗ್ಗೆ ಪರೀಕ್ಷೆ ನಡೆಸಲಾಗುವುದು ಎಂದು ಸಂಚಾರ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಚಾಲಕನ ಮೇಲೆ ಹಲಸೂರುಗೇಟ್ ಸಂಚಾರ ಠಾಣೆ ಹೆಡ್‍ಕಾನ್‍ಸ್ಟೇಬಲ್ ಹಲ್ಲೇ ನಡೆಸಿದ್ದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕವೂ ಚಾಲಕನ ಮೇಲೆಯೇ ಎಸ್.ಜೆ.ಪಾರ್ಕ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿರುವುದಕ್ಕೆ ಪೊಲೀಸರ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಹೆಡ್‍ಕಾನ್‍ಸ್ಟೇಬಲ್‍ನನ್ನು ಸೇವೆಯಿಂದ ಅಮಾನತುಗೊಳಿಸಬೇಕು ಎಂದು ನೆಟ್ಟಿಗರು ಮತ್ತು ಸಾರ್ವಜನಿಕರು ಆಗ್ರಹಿಸಿದ್ದಾರೆ

LEAVE A REPLY

Please enter your comment!
Please enter your name here