ಪಾಟಕ್ ಫಿಲಿಪ್ಸ್ ಎಂಬ ಕಂಪನಿಯ ಬಗ್ಗೆ ಬಹುತೇಕರು ಕೇಳಿರಲು ಸಾಧ್ಯವಿಲ್ಲ. ನೀವೇನಾದರೂ ಪಾಟಕ್ ಕಂಪನಿಯ ವಾಚ್ ಕೊಳ್ಳಲು ಹಣ ನೀಡಿದರೆ, ಸುಮಾರು 4-5 ವರ್ಷಗಳ ನಂತರ ವಾಚನ್ನು ತಯಾರು ಮಾಡಿ ನಿಮ್ಮನ್ನು ಸಂಪರ್ಕ ಮಾಡುವುದಾಗಿ ಹೇಳುತ್ತಾರೆ.

ಈ ಪಾಟಕ್ ಕಂಪನಿಯವರು ಸಾಮಾನ್ಯವಾಗಿ ನಮ್ಮಲ್ಲಿ ಲಭ್ಯವಿರುವ ಯಾವುದಾರೂ ಮಾಡೆಲ್ನಲ್ಲಿ ನಿಮಗೆ ಇಷ್ಟವಾಗುವ ಯಾವುದಾದರೂ ಒಂದು ವಾಚನ್ನು ಖರೀದಿ ಮಾಡಿ ಎಂದು ಹೇಳುವುದಿಲ್ಲ. ಬದಲಾಗಿ ನಿಮ್ಮನ್ನೇ ಕೂರಿಸಿಕೊಂಡು ವಾಚ್ ಡಿಸೈನ್ ಹೇಗಿರಬೇಕು, ವಾಚ್ಗೆ ಬೆಲ್ಟ್ ಇರಬೇಕಾ?, ಚೈನ್ ಇರಬೇಕಾ?, ಶೆಲ್ ಇಲ್ಲದೆಯೂ ನಡೆಯುವಂತಿರಬೇಕಾ?, ಶೆಲ್ ಹಾಕಿ ನಡೆಸುವಂತಿರಬೇಕಾ?, ಕೀ ಕೊಡುವಂತಿರಬೇಕಾ?, ಅತ್ಯಂತ ಕ್ಲಿಷ್ಟಕರ ಯಂತ್ರದ ಉಪಯೋಗವಿರಬೇಕಾ?, ವಾಚಿನ ಸಮಸ್ತಕ್ಕೂ ಯಾವ ರೀತಿಯ ಲೋಹ ಬಳಸಬೇಕು? ಹೀಗೆ ಅತ್ಯದ್ಭುತವಾದ ಮಾಡೆಲ್ ಅನ್ನು ತಯಾರಿಸಿ ನಿಮಗೆ ತೋರಿಸುತ್ತಾರೆ.

ಅವರು ತಯಾರಿಸಿದ ಆ ಡಿಸೈನ್ ನಿಮ್ಮೊಬ್ಬರಿಗೆ ಮಾತ್ರ ಮೀಸಲು. ಪ್ರಪಂಚದ ಯಾವುದೇ ಅತ್ಯುನ್ನತ ಹುದ್ದೆಯಲ್ಲಿರುವ ವ್ಯಕ್ತಿ ಬಂದು ಕೂಡ ಆ ಮಾಡೆಲ್ ಕೇಳಿದರೂ ಅವರು ಕೊಡುವುದಿಲ್ಲ. ಏಕೆಂದರೆ ಆ ಮಾಡೆಲ್ ನಿಮಗೆ ಮಾತ್ರವೇ ಮೀಸಲು. ಅದು ಈ ಕಂಪನಿಯ ವಿಶೇಷತೆಗಳಲ್ಲಿ ಒಂದಾಗಿದೆ.
ನಂತರ ಬಹಳ ಮುತುವರ್ಜಿ ವಹಿಸಿ, ಕೈಯಿಂದಲೇ ಪ್ರತಿಯೊಂದು ಅಂಗಗಳನ್ನು ತಯಾರಿಸಿ ಜೋಡಿಸಿ, ವಾಚನ್ನು ತಯಾರು ಮಾಡಿ ವಾಚನ್ನು ನಿಮ್ಮ ಕೈಗೆ ಇಡುವಷ್ಟರಲ್ಲಿ ಸುಮಾರು 4-5 ವರ್ಷ ಕಳೆದಿರುತ್ತದೆ. ರೋಲೆಕ್ಸ್ ಎಂಬ ಕಂಪನಿ ಸುಮಾರು 2,000 ಕೆಲಸಗಾರರನ್ನು ಇಟ್ಟುಕೊಂಡು ವರ್ಷಕ್ಕೆ ಸುಮಾರು 50,000 ವಾಚ್ಗಳನ್ನು ತಯಾರಿಸಿದರೆ, ಪಾಟಕ್ ಫಿಲಿಪ್ ಎಂಬ ಕಂಪನಿ ವರ್ಷಕ್ಕೆ ಒಂದು ಸಾವಿರ ವಾಚ್ಗಳನ್ನು ಮಾತ್ರ ತಯಾರಿಸುತ್ತದೆ. ಪಾಟಕ್ ಕಂಪನಿ ಕೈ ಗಡಿಯಾರ ಹಾಗೂ ಗ್ರಾಹಕರಿಗೆ ನೀಡುವ ಕಾಳಜಿ ಎಂತಹದ್ದು ಎಂಬುದು ನಿಮಗೆ ಅರ್ಥವಾಗಿರಬಹುದು.

ಇವರ ವಾಚ್ಗಳು ಫೆರಾರಿ ಕಾರ್ಗಳಿಗಿಂತಲೂ ದುಬಾರಿಯಾಗಿರುತ್ತದೆ. ಅತ್ಯಂತ ಐಷಾರಾಮಿ ಮತ್ತು ಪ್ರಪಂಚದ ಅತ್ಯುತ್ತಮ ಹ್ಯಾಂಡ್ಮೇಡ್ ವಾಚ್ ತಯಾರಿಕಾ ಕಂಪನಿಗಳಲ್ಲಿ ಮೊದಲ 3 ಸ್ಥಾನವನ್ನು ಇದೇ ಕಂಪನಿ ಹೊಂದಿದೆ. ಪ್ರಪಂಚದಲ್ಲಿರುವ ಅತ್ಯಂತ ದುಬಾರಿ ಮತ್ತು ಕಾಂಪ್ಲಿಕೇಟೆಡ್ ಕಂಪನಿ ವಾಚ್ 1728 ಭಾಗಗಗಳನ್ನು ಹೊಂದಿದೆ. ಮತ್ತೊಂದು ವಿಚಾರ ಏನೆಂದರೆ ಈ ವಾಚನ್ನು ಇಂತಹವರಿಗಾಗಿಯೇ ತಯಾರಿ ಮಾಡಿದ್ದು ಎಂದು ನಿಮ್ಮ ವಾಚ್ ಡಯಲ್ ನಲ್ಲಿ ಬರೆಯುವ ಸಂಪ್ರದಾಯ ಈ ಕಂಪನಿಗಿದೆ.
2018ರಲ್ಲಿ ಗ್ರಾಹಕರ ಒತ್ತಾಯದ ಮೇರೆಗೆ 62,000 ವಾಚ್ಗಳನ್ನು ತಯಾರಿಸಿತ್ತು. ನೀವು ವಾಚ್ ತಯಾರಿ ಮಾಡಲು ತೆರಬೇಕಾದ ಮೊತ್ತ ನಿಮ್ಮ ಆಸ್ತಿಯನ್ನು ಹರಾಜು ಹಾಕಬೇಕಾದ ಪರಿಸ್ಥಿತಿಯೂ ಬರಬಹುದು. 30-40 ದಿಂದ ಹಿಡಿದು ಕೋಟ್ಯಂತರ ರೂಪಾಯಿಯವರೆಗೂ ಈ ವಾಚ್ನ ಬೆಲೆ ಇದೆ. ನಿಮ್ಮ ಬಳಿ ಹಣವಿದೆ ಎಂದಾದರೆ ಕನಿಷ್ಠ 4 ವರ್ಷ ಕಾಯಲೇಬೇಕಾಗುತ್ತದೆ.