ನನ್ನ ಹೋರಾಟಕ್ಕೆ ವಯಸ್ಸಿನ ಮಿತಿ ಇಲ್ಲ – ಎಚ್.ಡಿ. ದೇವೇಗೌಡರು

0
84
HDD

ನಾನು ಹುಟ್ಟು ಹೋರಾಟಗಾರ. ನನ್ನ ಹೋರಾಟಕ್ಕೆ ವಯಸ್ಸಿನ ಮಿತಿ ಇಲ್ಲ. ಹೋರಾಟದ ಹಾದಿಯಲ್ಲೇ ಇಷ್ಟು ವರ್ಷಗಳ ಕಾಲ ನಡೆದುಕೊಂಡು ಬಂದಿದ್ದೇನೆ. ನನ್ನ ಕೊನೆಯ ಉಸಿರು ಇರುವರೆಗೂ ನಾನು ಪ್ರಾದೇಶಿಕ ಶಕ್ತಿಯಾದ ಜಾತ್ಯಾತೀತ ಜನತಾದಳ ಪಕ್ಷದ ಉಳಿವಿಗಾಗಿ ಹೋರಾಡುತ್ತೇನೆ ಎಂದು ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠರಾದ ಎಚ್.ಡಿ. ದೇವೇಗೌಡರು ಹೇಳಿದರು. ಬೆಂಗಳೂರಿನ ಜಾತ್ಯಾತೀತ ಜನತಾದಳ ಕಚೇರಿಯಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಎಚ್.ಡಿ. ದೇವೇಗೌಡರು, ಎರಡೂ ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಪಕ್ಷವನ್ನು ಮುಗಿಸಲು ನಿರಂತರ ಪ್ರಯತ್ನ ನಡೆಸುತ್ತಿವೆ. ಹಣ ಬಲದ ಮೂಲಕ ನಮ್ಮ ಶಾಸಕರನ್ನು ಖರೀದಿಸುವ ಮೂಲಕ ನಮ್ಮ ಶಕ್ತಿಯನ್ನು ಕುಂದಿಸುವ ತಂತ್ರವನ್ನು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಮಾಡುತ್ತಿವೆ. ಆದರೆ ರಾಜ್ಯದ ಜನತೆ ನಮ್ಮೊಂದಿಗಿರುವಾಗ ಎರಡೂ ಪಕ್ಷಗಳ ತಂತ್ರಗಾರಿಕೆ ಫಲ ನೀಡುವುದಿಲ್ಲ ಎಂದರು.

ಇನ್ನು ಜಾತ್ಯಾತೀತ ಜನತಾದಳ ಜನರ ಬಲದಿಂದಲೇ ಒಂದು ಕಾಲದಲ್ಲಿ ಇಡೀ ರಾಷ್ಟ್ರವನ್ನು ಆಳಿದೆ. ರಾಜ್ಯದಲ್ಲಿಯೂ ಜೆಡಿಎಸ್ ಪಕ್ಷವನ್ನು ಮುಗಿಸಲು ರಾಜ್ಯದ ಜನತೆ ಅವಕಾಶ ನೀಡಿಲ್ಲ. ಇಂದಿಗೂ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಜೆಡಿಎಸ್ ಪಕ್ಷಕ್ಕೆ ನೆಲೆ ಇದೆ. ಆದರೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಅಪಪ್ರಚಾರದಿಂದ ಪಕ್ಷಕ್ಕೆ ಸಾಕಷ್ಟು ಹಾನಿಯಾಗಿದೆ. ಎರಡೂ ರಾಷ್ಟ್ರೀಯ ಪಕ್ಷಗಳು ಜೆಡಿಎಸ್ ಪಕ್ಷವನ್ನು ಮುಗಿಸಲು ಏನೇ ಪ್ರಯತ್ನ ನಡೆಸಿದರು ನಾನು ಇರುವರೆಗೂ ಅದು ಸಾಧ್ಯವಾಗುವುದಿಲ್ಲ. ನನ್ನ ಹೋರಾಟಕ್ಕೆ ವಯಸ್ಸಿನ ಮಿತಿ ಇಲ್ಲ. ನಾನು ಈ ಇಳಿ ವಯಸ್ಸಿನಲ್ಲೂ ಪಕ್ಷವನ್ನು ಸಂಘಟಿಸುತ್ತೇನೆ. ರಾಜ್ಯಾದ್ಯಂತ ತೆರಳಿ ಪ್ರಾದೇಶಿಕ ಪಕ್ಷದ ಅಗತ್ಯತೆಯನ್ನು ಜನರಿಗೆ ಮನವರಿಕೆ ಮಾಡಿಕೊಡುತ್ತೇನೆ. ಆ ಮೂಲಕ ಜೆಡಿಎಸ್ ಉಳಿವಿಗಾಗಿ ಶ್ರಮಿಸುತ್ತೇನೆ ಎಂದರು.

 

ಇನ್ನು ಸದ್ಯ ಎದುರಾಗಿರುವ ತುಮಕೂರಿನ ಶಿರಾ ಮತ್ತು ರಾಜರಾಜೇಶ್ವರಿ ನಗರ ಉಪಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಜನ ಬೆಂಬಲ ವ್ಯಕ್ತವಾಗುತ್ತಿದೆ. ಆದರೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಹಣ ಮತ್ತು ಹೆಂಡದ ಮೂಲಕ ಮತದಾರರನ್ನು ಸೆಳೆಯುವ ಪ್ರಯತ್ನ ನಡೆಸಿವೆ. ಮತದಾರರು ಜಾಗೃತರಾಗಿರುವಾಗ ಈ ರೀತಿಯ ಪ್ರಯತ್ನಗಳು ಫಲ ನೀಡುವುದಿಲ್ಲ. ಜನರು ಜೆಡಿಎಸ್ ಪಕ್ಷಕ್ಕೆ ಮತ ನೀಡುವ ಮೂಲಕ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ತಕ್ಕ ಪಾಠ ಕಲಿಸಲಿದ್ದಾರೆ. ಹೀಗಾಗಿ ಎರಡೂ ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲ್ಲುವ ವಿಶ್ವಾಸವಿದೆ.

ಕುಮಾರಸ್ವಾಮಿಯವರು ಮತ್ತು ಪ್ರಜ್ವಲ್ ರೇವಣ್ಣ ಸೇರಿದಂತೆ ಎಲ್ಲ ನಾಯಕರು ಕ್ಷೇತ್ರದಲ್ಲಿ ಬೀಡುಬಿಟ್ಟು ಪ್ರಚಾರ ನಡೆಸುತ್ತಿದ್ದಾರೆ. ಎಲ್ಲ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡುತ್ತಿರುವುದರಿಂದ ಪಕ್ಷಕ್ಕೆ ಹೊಸ ಬಲ ಬಂದಿದೆ. ಇನ್ನು ಶಿರಾ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಕಾರ್ಯಕರ್ತರ ಕೊರತೆ ಎದುರಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಈಗ ದೇಶಾದ್ಯಂತ ಸ್ವಂತ ಬಲದ ಮೇಲೆ ಚುನಾವಣೆ ಗೆಲ್ಲುವ ಶಕ್ತಿ ಇಲ್ಲ. ಹೀಗಾಗಿ ಕಾಂಗ್ರೆಸ್ ಪಕ್ಷದ ಬಗ್ಗೆ ನನಗೆ ಯಾವುದೇ ಭಯವಿಲ್ಲ ಎಂದರು.

LEAVE A REPLY

Please enter your comment!
Please enter your name here