ಆರ್ ಆರ್ ನಗರದಲ್ಲಿ ಕಣ್ಣೀರ ಕಥೆ: ಮುನಿರತ್ನ ಕಣ್ಣೀರಿಗೆ ಡಿಕೆಶಿ ಠಕ್ಕರ್

0
64

ಬೆಂಗಳೂರು: ಆರ್ ಆರ್ ನಗರ ಕ್ಷೇತ್ರದ ಪ್ರಚಾರದಲ್ಲಿ ಕಣ್ಣೀರ ಚರ್ಚೆ ಜೋರಾಗಿ ಸದ್ದು ಮಾಡ್ತಿದೆ. ಮುನಿರತ್ನ ರಕ್ತ ಬದಲಾಗಿದೆ. ಕಾಂಗ್ರೆಸ್ ತಾಯಿಯನ್ನು ಬದಲಿಸಿದ್ದಾರೆ ಎಂಬ ಹೇಳಿಕೆಗೆ ಮುನಿರತ್ನ ಗಳಗಳನೆ ಕಣ್ಣೀರು ಹಾಕಿಬಿಟ್ಟಿದ್ದರು. ಇದಕ್ಕೆ ಉತ್ತರಿಸಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ‘ಕುಸುಮಾ ಕಣ್ಣೀರಿಗೂ, ಮುನಿರತ್ನ ಕಣ್ಣೀರಿಗೂ ವ್ಯತ್ಯಾಸ ಇದೆ’ ಎಂದರು. ರಾಜರಾಜೇಶ್ವರಿ ನಗರದಲ್ಲಿ ವಿವಿಧ ಪಕ್ಷಗಳ ಅನೇಕರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಗೆ ಸೇರ್ಪಡೆಯಾದರು. ಈ ವೇಳೆ ಮಾತನಾಡಿದ ಅವರು, ಕುಸುಮಾ ಅವರು ತಮ್ಮ ಜೀವನ ನೆನೆಸಿಕೊಂಡು, ತಮಗಾದ ನಷ್ಟ, ನೋವುಗಳನ್ನು ನೆನೆದು ಕಣ್ಣೀರು ಹಾಕಿದ್ದಾರೆ. ಆದರೆ, ಮುನಿರತ್ನ ಅವರು ತಮಗೆ ಇಂತಾ ಸ್ಥಿತಿ ತಂದುಕೊಂಡೆನಲ್ಲಾ ಅಂತಾ ಕಣ್ಣೀರು ಹಾಕುತ್ತಿದ್ದಾರೆ ಎಂದರು.

ಕಾಂಗ್ರೆಸ್ ನನ್ನ ಉಸಿರು, ನನ್ನ ರಕ್ತ ಅಂತಾ ಹೇಳಿದ್ದ ಮುನಿರತ್ನ ಈಗ ಬಿಜೆಪಿಯಲ್ಲಿ ಮತ ಕೇಳುತ್ತಿದ್ದೇನಲ್ಲಾ ಅಂತಾ ನೆನೆಸಿಕೊಂಡು ಅತ್ತಿದ್ದಾರೆ. ಮುನಿರತ್ನ ಉತ್ತಮ ಆ್ಯಕ್ಟರ್, ಪ್ರೋಡ್ಯುಸರ್ ಅಲ್ವಾ? ಜನರು ಕೇಳುವ ಪ್ರಶ್ನೆಗೆ ಉತ್ತರ ಕೊಡಲಾಗದೆ ಕಣ್ಣೀರು ಹಾಕಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ತನ್ನ ವಿರುದ್ಧ ಭಾಷಣ ಮಾಡಿದ್ದರು, ಈಗ ಅವರ ಪಕ್ಷ ಸೇರಿಕೊಂಡು ಚುನಾವಣೆ ಎದುರಿಸಬೇಕಾಗಿದೆಯಲ್ಲ ಅಂತಾ ಕಣ್ಣೀರಾಕಿರಬಹುದು ಎಂದು ವ್ಯಂಗ್ಯ ಮಾಡಿದರು.

ಹಿಂದೆ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು ಅಂತಿದ್ದರು, ಈಗ ಡಿ.ಕೆ ಶಿವಕುಮಾರ್ ಅವರ ಹಿಂದೆ ಯಾರೂ ಇಲ್ಲ ಅಂತಾ ಹೇಳಿದ್ದಾರೆ. ಒಟ್ಟಾರೆ ಅವರು ಪರಿಸ್ಥಿತಿಗೆ ತಕ್ಕಂತೆ ಅಭಿನಯಿಸುವ ಉತ್ತಮ ನಟ. ಇದನ್ನೆಲ್ಲಾ ನೋಡುತ್ತಿರುವ ಜನ ದಡ್ಡರಲ್ಲ. ನಾನು ಕಣ್ಣೀರು ಹಾಕಿದರೂ ಬೇರೆಯವರು ಹಾಕಿದರೂ ಏನು ಆಗುವುದಿಲ್ಲ. ಈಗ ಕಣ್ಣೀರು ಹಾಕಿ ಪ್ರಯೋಜನ ಇಲ್ಲ ಎಂದರು.

ಇಂದು ದೇವಾಲಯಕ್ಕೆ ಹೋಗಿ ದೇವರ ಆಶೀರ್ವಾದ ಪಡೆದೆ ಹಾಗೂ ಚರ್ಚ್ ಗೆ ಭೇಟಿ ಕೊಟ್ಟು ಪಾದ್ರಿಗಳನ್ನು ಭೇಟಿ ಮಾಡಿದೆ. ನೀವು ಆಶೀರ್ವಾದ ಮಾಡಿದರೂ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ರು.

3ರ ನಂತರ ಧರ್ಮದ ವಿಚಾರ

ಕಪಾಲಿ ಬೆಟ್ಟದ ವಿಚಾರವಾಗಿ ಬಿಜೆಪಿ ನಾಯಕರ ಪ್ರಶ್ನೆಗೆ ಉತ್ತರಿಸಿದ ಡಿ.ಕೆ ಶಿವಕುಮಾರ್, ‘3ರಂದು ನಡೆಯುವ ಚುನಾವಣೆ ಆಗಲಿ ಆಮೇಲೆ ಧರ್ಮದ ವಿಚಾರವಾಗಿ ಮಾತನಾಡೋಣ’ ಎಂದರು.

ಈ ಹಿಂದೆ ಆಡಿದ ಮಾತಿಗೆ ಬದ್ಧರಾ?

‘ಮುನಿರತ್ನ ಅವರ ವಿರುದ್ಧ ಮೋದಿ ಅವರು, ಸದಾನಂದಗೌಡ, ಯಡಿಯೂರಪ್ಪನವರು ಆಡಿದ ಮಾತಿಗೆ ಈಗಲೂ ಬದ್ಧರಾಗಿದ್ದಾರಾ ಇಲ್ಲವಾ? ಎಂಬುದನ್ನು ಕೇಳಿ ಎಂದರು.

ಇನ್ನು ಮುಂದಿನ ಮುಖ್ಯಮಂತ್ರಿ ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ಎಂಬ ಶಾಸಕ ಜಮೀರ್ ಅಹ್ಮದ್ ಅವ್ರ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಡಿಕೆ ಶಿವಕುಮಾರ್, ಮುಂದಿನ ಮುಖ್ಯಮಂತ್ರಿ ವಿಚಾರವಾಗಿ ಜಮೀರ್ ಅವರ ಹೇಳಿಕೆ ಬಗ್ಗೆ ಅವರನ್ನೇ ಕೇಳಬೇಕು ಎಂದರು.

LEAVE A REPLY

Please enter your comment!
Please enter your name here