ಪಕ್ಕೆಲುಬು,ಶಿಕ್ಷಕ ಮತ್ತು ಶಿಕ್ಷೆ

0
491

ಒಂದೆರಡು ದಿನಗಳಿಂದ ವೈರಲ್ ಆಗಿದ್ದ ಮುಗ್ಧ ಬಾಲಕನ ಪಕ್ಕೆಲುಬು ಉಚ್ಛಾರದ ವಿಡಿಯೋ ಪ್ರಕರಣಕ್ಕೆ ಶಿಕ್ಷಣ ಮಂತ್ರಿಗಳು ಅಂತಿಮ ಹಾಡಿದ್ದಾರೆ. ಹುಡುಗನ ವಿಡಿಯೋ ಅಮಾನವೀಯವಾಗಿ ಚಿತ್ರಿಸಿ ಹಬ್ಬಿಸಿದ್ದ ಶಿಕ್ಷಕನಿಗೆ ಶಿಕ್ಷೆಯಾಗಿದೆ.

 

 

ಗ್ರಾಮೀಣ ಕನ್ನಡ ಮಾಧ್ಯಮ ಶಾಲಾ ಶಿಕ್ಷಕರ ಮೇಲೆ ಗುರುತರ ಜವಾಬ್ದಾರಿ ಇರುವುದನ್ನು ನಮ್ಮ ಶಿಕ್ಷಕ ಸ್ನೇಹಿತರು ಅರ್ಥ ಮಾಡಿಕೊಳ್ಳಬೇಕು. ಭಾಷೆ ಮತ್ತು ಶುದ್ಧ ಉಚ್ಚಾರಣೆ ಹೈದರಾಬಾದ್ ಕರ್ನಾಟಕ ವಿದ್ಯಾರ್ಥಿಗಳಿಗೆ ಸದಾ ಸವಾಲು. ದೇಸಿಯ ಪ್ರಭಾವದಿಂದಾಗಿ ಹ ಕಾರ ತೊಂದರೆ ಕಾಡುತ್ತಿರುತ್ತದೆ.
ಅದನ್ನು ಶಿಕ್ಷಕರಾದವರು ಪ್ರೀತಿ, ವಿಶ್ವಾಸಗಳ ಮೂಲಕ ಸರಿಪಡಿಸಬೇಕು. ಈ ರೀತಿ ಮೋಜು ಮಾಡಿ ಸಂಭ್ರಮ ಪಟ್ಟು ಅಲ್ಲ.

 

 

ನಮ್ಮೂರು ಕಾರಟಗಿ, ರಾಯಚೂರು ಜಿಲ್ಲೆಯ ಗಂಗಾವತಿ ತಾಲೂಕಿನ ಪುಟ್ಟ ಗ್ರಾಮ. ನಾವು ವಿದ್ಯಾರ್ಥಿಗಳಾಗಿದ್ದಾಗ ಈ ಹ ಕಾರದ್ದು ದೊಡ್ಡ ಸವಾಲು. ಧಾರವಾಡ ಜಿಲ್ಲೆಯ ನಮ್ಮ ಬಂಧುಗಳು ನಮ್ಮ ಆಲು,ಅಣ್ಣು,ಊವಾ ಉಚ್ಚಾರಗಳನ್ನು ಯಥೇಚ್ಛವಾಗಿ ಟೀಕಿಸುತ್ತಿದ್ದರು. ಅವರ ನಗುವಿನ ಕಾರಣ ನಮಗೆ ಅರ್ಥವಾಗದ ದಿನಗಳವು.

‘ಹಾಲು,ಹಣ್ಣು,ಹೂವು ಅನ್ರೋ’ ಎಂದು ತಮಾಷೆಯಿಂದ ನಗುತ್ತಿದ್ದರೂ ‘ನಾವು ಆಲು,ಅಣ್ಣು,ಊವಾ’ ಎಂದೇ ಮಾರುತ್ತರ ನೀಡುತ್ತಿದ್ದೆವು.

 

 

ಈ ಉಚ್ಚಾರಣೆ ಕೂಡ ದೇಸಿಯ ಸೊಗಡು ಎಂಬುದನ್ನು ಸರಿಯಾಗಿ ಉಚ್ಚಾರಣೆ ಮಾಡುವುದನ್ನು ಕಲಿತ ಮೇಲೆ ಅರ್ಥ ಮಾಡಿಕೊಂಡಿದ್ದೇನೆ. ಇಂತಹ ಪ್ರಸಂಗದಲ್ಲಿ ಪಾಪ ಈ ಬಾಲಕ ಪಕ್ಕೆಲುಬು ಎಂದು ಉಚ್ಚಾರಣೆ ಮಾಡುವಾಗ ಒದ್ದಾಡುವುದನ್ನು ಚಿತ್ರಿಸುವ ಶಿಕ್ಷಕ ಒಮ್ಮೆ ತಮ್ಮ ಬಾಲ್ಯ ನೆನಪಿಸಿಕೊಳ್ಳಬೇಕಾಗಿತ್ತು.
ಬಳ್ಳಾರಿ ಜಿಲ್ಲೆಯ ಗ್ರಾಮೀಣ ಪರಿಸರದ ವಿದ್ಯಾರ್ಥಿಯ ಉಚ್ಚಾರಣೆಗಿಂತ ಅವನ ಗ್ರಹಿಕೆ ಮತ್ತು ಕಲಿಕಾ ಸಾಮರ್ಥ್ಯವನ್ನು ಶಿಕ್ಷಕ ಅರ್ಥಮಾಡಿಕೊಂಡಿದ್ದರೆ ಚನ್ನಾಗಿತ್ತು.

 

 

ನಾನು ಧಾರವಾಡದಲ್ಲಿ ಓದುವಾಗ ನಮ್ಮ ಗುರು ಪತ್ನಿಯೊಬ್ಬರು ನನ್ನ ದಡ್ಢತನವನ್ನು ಅಪಹಾಸ್ಯ ಮಾಡಿ ಗಹಗಹಿಸಿ ನಗುತ್ತಿದ್ದ ದೃಶ್ಯಗಳು ನನ್ನ ಆತ್ಮವಿಶ್ವಾಸವನ್ನು ಕೊಂದು ಹಾಕಿದ್ದ ಪ್ರಸಂಗಗಳು ನೆನಪಾಗಿ ವಿಶಾದವೆನಿಸಿತು. ಹಾಗೆ ತಮಾಷೆ ಮಾಡಿ ಅವಮಾನ ಮಾಡುವ ಬದಲು ಪ್ರೀತಿಯಿಂದ ತಿದ್ದಿದ್ದರೆ ಚನ್ನಾಗಿತ್ತೇನೋ ಅನಿಸುತ್ತದೆ. ಆದರೆ ನಾನು ಆ ಅವಮಾನವನ್ನು ಸಕಾರಾತ್ಮಕ ಸವಾಲಾಗಿ ಸ್ವೀಕರಿಸಿ ನನ್ನ ನಾ ತಿದ್ದಿಕೊಂಡು ಬೆಳೆದರೂ ಆ ಕಹಿ ನೆನಪು ಬಹು ದಿನ ಕಾಡುತ್ತಲೇ ಇತ್ತು.

ಕಲಿತವರು, ತುಂಬಾ ತಿಳಿದುಕೊಂಡವರು, ಭಾಷಾ ದೋಷಗಳನ್ನು ಕಂಡು ಪ್ರೀತಿಯಿಂದ ತಿದ್ದಿ ತೀಡಿದರೆ ಮನಸಿಗೆ ಮುದವೆನಿಸಿ ಹೊಸ ಕಲಿಕೆ ಸಾಧ್ಯವಾಗುತ್ತದೆ.

 

 

ದೋಷಪೂರಿತ ವರ್ತನೆ ಮತ್ತು ಉಚ್ಚಾರಗಳನ್ನು ಅನಾಗರಿಕತೆ ಎಂದು ಭಾವಿಸಿ ಗಹಗಹಿಸಿ ನಗುವುದು ಯಾವ ಸೀಮೆಯ ನಾಗರಿಕತೆ ಮತ್ತು ಸಂಸ್ಕಾರ ಎಂಬುದು ನನಗೆ ಈಗ ಅರ್ಥವಾಗಿದೆ. ಈ ರೀತಿಯ ಅವಮಾನದಲ್ಲಿ ಕುದ್ದು ಹೋದ ನಾನು ಅಪ್ಪಟ ಇಂಗ್ಲಿಷ್ ಭಾಷಾ ಶಿಕ್ಷಕನಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಮೂರು ದಶಕಗಳಿಂದ ಭಾಷೆಗಳನ್ನು ಕಲಿಸುತ್ತಲಿದ್ದೇನೆ. ಅದಕ್ಕೆ ಬಲವಾದ ಕಾರಣ ಗಹಗಹಿಸಿ ನಕ್ಕು ಅವಮಾನಿಸಿದ ಗುರುಮಾತೆಯ ವ್ಯಂಗ್ಯದ ನಗು.

ಸಮಾಜದ ಏಳು ಬೀಳುಗಳ ವಿಮರ್ಶೆ ಮಾಡುವ ಸೋ ಕಾಲ್ಡ್ ವಿದ್ಯಾವಂತರು ಬರೀ ಶಿಕ್ಷಣ ಪಡೆದಿದ್ದರೆ ಸಾಲದು, ತಿದ್ದುವ ಮತ್ತು ದಡ್ಡರನ್ನು ಸಹಿಸಿಕೊಳ್ಳುವ ಸಂಸ್ಕಾರ ಮತ್ತು ಸೌಜನ್ಯ ಇಂದಿನ ಅಗತ್ಯವಾಗಿದೆ.

 

ಇವೆರಡೂ ವಿಡಿಯೋ ಕ್ಲಿಪ್ಪಿಂಗ್ ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮೊದಲನೆಯದು ಖುಷಿ ತಂದರೆ ಎರಡನೆಯದು ವೇದನೆ ತರುತ್ತದೆ….

Suresh Kumar S ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಬುಧವಾರ, ಜನವರಿ 8, 2020

 

ಈ ಕುರಿತು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿ ಕ್ರಮ ಕೈಗೊಂಡ ಶಿಕ್ಷಣ ಸಚಿವರ ಸೂಕ್ಷ್ಮ ಮನಸ್ಥಿತಿಯನ್ನು ಅಭಿನಂದಿಸುತ್ತೇನೆ. ಬಾಲ್ಯದ ಅವಮಾನ ಮತ್ತು ಭಯ ಮಕ್ಕಳನ್ನು ಕೊನೆತನಕ ಹಿಂಸಿಸುತ್ತವೆ ಎಂಬುದನ್ನು ಸಮಾಜ ಮತ್ತು ಶಿಕ್ಷಕರು‌ ಅರ್ಥ ಮಾಡಿಕೊಳ್ಳಬೇಕೆಂದು ನಮ್ರವಾಗಿ ನಿವೇದಿಸಿಕೊಳ್ಳುತ್ತೇನೆ.
ಸದರಿ ಶಿಕ್ಷಕರಿಗೆ ಒಂದು ಸಣ್ಣ ಎಚ್ಚರಿಕೆ ನೀಡಿ ಕ್ಷಮಿಸುವ ಅಗತ್ಯವೂ ಇದೆ.

#ಸಿದ್ದು_ಯಾಪಲಪರವಿ.
ಇಂಗ್ಲಿಷ್ ಉಪನ್ಯಾಸಕ ಮತ್ತು ಬರಹಗಾರ
ಗದಗ.

LEAVE A REPLY

Please enter your comment!
Please enter your name here