ಬಿಬಿಎಂಪಿ ಕಾಯ್ದೆ-೨೦೨೦ ಕ್ಕೆ ಉಭಯ ಸದನಗಳ ಅಂಗೀಕಾರ- ಹೊಸ ಕಾಯ್ದೆಯಲ್ಲಿ ಏನೇನಿದೆ?

0
31

ಬೆಂಗಳೂರು: ಇಂದು ಬಿಬಿಎಂಪಿಯ ನೂತನ ಕಾಯ್ದೆ-೨೦೨೦ ಕ್ಕೆ ಅಂಗೀಕಾರ ದೊರೆತಿದೆ. ಬೆಂಗಳೂರು ಈಗಿರುವ ವ್ಯಾಪ್ತಿಯ ಗಡಿಯಿಂದ ಹೊರಗೆ ಒಂದು ಕಿ.ಮೀ ವರೆಗೆ ವಿಸ್ತಾರವಾಗಲಿದೆ. ಹೊಸ ಗ್ರಾಮಪಂಚಾಯಿತಿ, ಪುರಸಭೆಗಳು ಸೇರ್ಪಡೆಗೊಳ್ಳಲಿವೆ. ವಾರ್ಡ್ ಪುನರ್ ವಿಂಗಡನೆ ಮಾಡಿ 243 ಕ್ಕೆ ವಾರ್ಡ್ ಗಳ ಸಂಖ್ಯೆ ಏರಿಕೆಯಾಗಲಿದ್ದು, ಹೊಸ ಪ್ರದೇಶಗಳೂ ಸೇರ್ಪಡೆಯಾಗಲಿವೆ.
ರಾಜ್ಯದ ಇತರ ನಗರಗಳಿಗೆ ಅನ್ವಯವಾಗುವ ಕೆಎಂಸಿ (ಕರ್ನಾಟಕ ಮುನ್ಸಿಪಲ್ ಕಾಯ್ದೆ) ಕಾಯ್ದೆ ಮಹಾನಗರ ಬೆಂಗಳೂರಿಗೆ ಸೂಕ್ತವಿಲ್ಲ. ಅಂತರಾಷ್ಟ್ರೀಯ ಖ್ಯಾತಿಯ ನಗರಕ್ಕೆ ಹೊಸ ಕಾಯ್ದೆಯೇ ಬೇಕು ಎಂದು ನಿರ್ಧರಿಸಿ ಹೊಸ ಕಾಯ್ದೆಯನ್ನು ಜಾರಿಗೆ ತರಲಾಗಿದೆ.

ಪ್ರಮುಖವಾಗಿ ಈಗಿರುವ ಬಿಬಿಎಂಪಿ ಮೇಯರ್ -ಉಪಮೇಯರ್ ಅವಧಿ ಒಂದು ವರ್ಷದಿಂದ ಎರಡುವರೇ ವರ್ಷಕ್ಕೆ ಏರಿಕೆಯಾಗಲಿದೆ.
– ತೆರಿಗೆ, ಆಡಳಿತ ಅಭಿವೃದ್ಧಿ, ಶಿಕ್ಷಣ, ಆರೋಗ್ಯ, ಘನತ್ಯಾಜ್ಯ, ಲೆಕ್ಕಪತ್ರ, ವಾರ್ಡ್ ಅಭಿವೃದ್ಧಿ ಸೇರಿದಂತೆ ಹನ್ನೆರಡು ಇದ್ದ ವಿವಿಧ ಸ್ಥಾಯಿ ಸಮಿತಿಗಳನ್ನು ಎಂಟಕ್ಕೆ ಮಿತಿಗೊಳಿಸಲಾಗಿದೆ.
– ವಲಯ ಸಮಿತಿ ಹಾಗೂ ವಿಧಾನಸಭಾ ಸಮಾಲೋಚನಾ ಸಮಿತಿ ರಚಿಸಲು ಕಾಯ್ದೆಯಲ್ಲಿ ತಿಳಿಸಲಾಗಿದೆ. ವಿಧಾನಸಭಾ ಸಮಾಲೋಚನ ಸಮಿತಿಗೆ ಆಯಾ ಕ್ಷೇತ್ರದ ಶಾಸಕರೇ ಅಧ್ಯಕ್ಷರಾಗಲಿದ್ದು, ವಲಯ ಸಮಿತಿಗಳಿಗೆ ಸಲಹೆ ಸೂಚನೆ ಮಾರ್ಗದರ್ಶನಗಳನ್ನು ನೀಡಬಹುದಾಗಿದೆ. ಇದರಿಂದ ಶಾಸಕರ ಅಧಿಕಾರ ಹೆಚ್ಚಲಿದ್ದು ಕಾರ್ಪೊರೇಟರ್ ಗಳ ಪ್ರಾಬಲ್ಯ ಕಡಿಮೆಯಾಗಲಿದೆ ಎಂಬ ಮಾತೂ ಕೇಳಿ ಬರುತ್ತಿದೆ.

ಮುಖ್ಯ ಆಯುಕ್ತರ ನೇಮಕ
ಈಗಿರುವ ಆಯುಕ್ತರ ಹುದ್ದೆಯ ಜಾಗದಲ್ಲಿ, ಮುಖ್ಯ ಆಯುಕ್ತರನ್ನು ನೇಮಕ ಮಾಡಬೇಕು. ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯ ಹುದ್ದೆಗಿಂತ ಕಡಿಮೆ ಇಲ್ಲದವರನ್ನು ಸರ್ಕಾರ ನೇಮಕ ಮಾಡಬೇಕು.ಜೊತೆಗೆ ಅಧಿಕಾರ ಎರಡು ವರ್ಷಕ್ಕಿಂತ ಕಡಿಮೆ ಇಲ್ಲದಂತೆ ನಿಯೋಜನೆ ಮಾಡಬೇಕು‌. ಮುಖ್ಯ ಆಯುಕ್ತರ ಆಡಳಿತ ತೃಪ್ತಿಕರವಾದರೆ ಅಧಿಕಾರ ಅವಧಿ ವಿಸ್ತರಿಸುವ ಅಧಿಕಾರ ಸರ್ಕಾರಕ್ಕೆ ಇರಲಿದೆ. ಇದಕ್ಕೆ ಮೊದಲೇ ವರ್ಗ ಮಾಡಬೇಕಾದರೆ, ಬಿಬಿಎಂಪಿ ,ಮೇಯರ್ ಅವರಿಗೆ ಕಾರಣ ತಿಳಿಸಬೇಕಾಗಿದೆ.

ಇನ್ನು ನಗರದಲ್ಲಿ ಸಾರ್ವಜನಿಕರಿಗೆ ತುರ್ತಾಗಿ ಸ್ಪಂದಿಸುವ ಉದ್ದೇಶದಿಂದ ವಿಪತ್ತು ನಿರ್ವಹಣಾ ಸಮಿತಿ ರಚನೆ ಮಾಡುವ ಪ್ರಸ್ತಾವನೆ ಸಹ ಇದೆ.

ಹೊಸ ತೆರಿಗೆ ಪ್ರಸ್ತಾಪ
ಹಾಲಿ ಇರುವ ತೆರಿಗೆಗಳ ಜೊತೆಗೆ ಬೆಂಗಳೂರಿನಲ್ಲಿ ಮನೋರಂಜನಾ ತೆರಿಗೆ ಜಾರಿ ಮಾಡುವ ಬಗ್ಗೆ ಪ್ರಸ್ತಾಪಿಸಲಾಗಿದೆ. ಹೀಗೆ ಮಾಡುವುದರಿಂದ ಸಿನಿಮಾ, ಕ್ರಿಕೆಟ್ ಪಂದ್ಯಾವಳಿ ಮುಂತಾದ ಮನೋರಂಜನ ಚಟುವಟಿಕೆಗಳಿಗೆ ಹೆಚ್ಚುವರಿ ಹಣ ಭರಿಸಬೇಕಾಗುತ್ತದೆ.

ಹೊಸ ಪ್ರದೇಶಗಳ ಸೇರ್ಪಡೆ ವಿಳಂಬ
ಪಾಲಿಕೆ ವ್ಯಾಪ್ತಿಯನ್ನು ವಿಸ್ತರಿಸುವ ಬಗ್ಗೆ ಮಸೂದೆಯಲ್ಲಿ ಉಲ್ಲೇಖವಾದರೆ ಸಾಲದು, ಇದಕ್ಕೆ ಸೇರ್ಪಡೆಗೊಳ್ಳಲಿರುವ ಪ್ರದೇಶಗಳನ್ನು ಖಚಿತವಾಗಿ ಉಲ್ಲೇಖಿಸಿ ಪ್ರತ್ಯೇಕವಾಗಿ ಅಧಿಸೂಚನೆ ಹೊರಡಿಸಬೇಕಾಗುತ್ತದೆ. ಈ ಬಗ್ಗೆ ರಾಜ್ಯ ಪತ್ರದಲ್ಲಿ ಕರಡು ಪಟ್ಟಿ ಪ್ರಕಟಿಸಿ ಸಾರ್ವಜನಿಕರಿಂದ ಸಲಹೆ ಅಥವಾ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕಾಗುತ್ತದೆ. ಜನರ ಪ್ರತಿಕ್ರಿಯೆ ಆಧರಿಸಿ ಹೊಸ ಗ್ರಾಮಗಳ ಸೇರ್ಪಡೆ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಬೇಕಾಗುತ್ತದೆ. ಹೀಗಾಗಿ ಹೊಸ ಪ್ರದೇಶಗಳ ಸೇರ್ಪಡೆಯಲ್ಲಿ ವಿಳಂಬವಾಗಲಿದೆ.

ಒಟ್ಟಿನಲ್ಲಿ ಬಿಬಿಎಂಪಿ ಕಾಯ್ದೆ-೨೦೨೦ ರಲ್ಲಿ ಹಲವು ಹೊಸ ನಿಯಮಗಳ ಜೊತೆಗೆ, ಬೆಂಗಳೂರಿನ ವ್ಯಾಪ್ತಿ, ಬಿಬಿಎಂಪಿ ಮೇಯರ್ ಅಧಿಕಾರಾವಧಿ, ಶಾಸಕರ ಜವಾಬ್ದಾರಿ , ಅಧಿಕಾರ ವಿಸ್ತರಣೆಗಳ ಅಂಶ ಸೇರಿಕೊಂಡಿವೆ.

LEAVE A REPLY

Please enter your comment!
Please enter your name here