ರಾಜ-ಕಾರಣ: ಹೊಸ ಸರಕಾರ-ನಿಜವಾಗಿ ನಿಟ್ಟುಸಿರು ಬಿಟ್ಟವರು ಯಾರು?

0
137

ಸಮ್ಮಿಶ್ರ ಸರಕಾರ ಬೀಳಿಸಿದರೋ?,ಯಾರಿಂದ ಬಿತ್ತು?,ಹೇಗೆ ಬಿತ್ತು? ಎಂಬುದು ಹೊರನೋಟಕ್ಕೆ ಅಸ್ಪಷ್ಟ. ‌ಆದರೆ ರಾಜಕಾರಣದ ಒಳಸುಳಿ ಬಲ್ಲವರಿಗೆ ಇದ್ಯಾವುದು ಅಸ್ಪಷ್ಟ ಅಲ್ಲ.
ಸರಕಾರ ಉಳಿಸಲು ತುಂಬ ತಿಣುಕಾಡಿದವರ ನಿಜ ಉದ್ದೇಶವಾದರೂ ಏನಿತ್ತು?

ಒಂದೇ ಕುಟುಂಬದ ಕೈಯಲ್ಲಿ ರಾಜ್ಯದ ಅಧಿಕಾರ ಕೇಂದ್ರಿಕೃತ ಆಗಿರುವುದು ಕಾಂಗ್ರೆಸ್ ಮುಖಂಡರಿಗೆ ಬೇಡವಾಗಿತ್ತು.
ಆದರೆ ಹೈಕಮಾಂಡ್ ಬಿಜೆಪಿ ಕೈಗೆ ಅಧಿಕಾರ ಕೊಡಬಾರದೆಂಬ ಏಕೈಕ ಉದ್ದೇಶದಿಂದ, ಅಕಸ್ಮಾತ್ ಕೇಂದ್ರದಲ್ಲಿ ಅಧಿಕಾರ ಹಿಡಿಯುವ ಪ್ರಸಂಗ ಬಂದರೆ ದೊಡ್ಡ ಗೌಡರು ನೆರವಾಗಬಹುದು ಎಂಬ ಭರವಸೆಯಿಂದ ಕೈ ನಾಯಕರ ಕಟ್ಟಿ ಹಾಕಿದರು.

ಅಂದಿನ ಪ್ರಭಾವಿ ಮುಖಂಡ,ಮಾಜಿ ಮುಖ್ಯ ಮಂತ್ರಿ ಸಿದ್ಧರಾಮಯ್ಯನವರ ಅಭಿಪ್ರಾಯ ಲೆಕ್ಕಿಸದೆ, ಒತ್ತಾಯದಿಂದ ಒಪ್ಪಿಸಲಾಗಿತ್ತು.
ಅಸಹಾಯಕತೆಯಿಂದ ಕೈಕಟ್ಟಿಕೊಂಡು ಕೃತಕ ನಗೆ ಬೀರಿದ ಸಿದ್ದಣ್ಣ ಅವಮಾನದಿಂದ ಒಳಗೊಳಗೆ ಕುದ್ದು ಹೋಗಿದ್ದರು.

ಪರಮೇಶ್ವರ ಹಾಗೂ ಡಿಕೆಶಿ ಅವರು ಸಿದ್ಧರಾಮಯ್ಯನವರ ಪ್ರಾಭಲ್ಯವನ್ನು ಕುಗ್ಗಿಸುವ ಸದಾವಕಾಶ ಅಂದುಕೊಂಡು ಸಮ್ಮಿಶ್ರ ಪಾಲುದಾರಿಕೆಗೆ ಒಪ್ಪಿಕೊಂಡರು.

ದೊಡ್ಡ ಗೌಡರ ಗರಡಿಯಲ್ಲಿ ತಮ್ಮ ಪಟ್ಟುಗಳನ್ನು ಕರಗತ ಮಾಡಿಕೊಂಡ ಸಿದ್ದಣ್ಣ ಅತ್ಯಂತ ಜಾಗರೂಕತೆಯಿಂದ ಆಟ ಆಡಲಾರಂಭಿಸಿದರು.

ಇತ್ತ ಗೌಡರ ಪರಿವಾರದ ಎಲ್ಲ ಸದಸ್ಯರು ಈ ಸಮ್ಮಿಶ್ರ ಸರ್ಕಾರದ ಹೆಚ್ಚುವರಿ ಪ್ರತಿಫಲ ಪಡೆಯುವ ಇರಾದೆ ಇಟ್ಟುಕೊಂಡು ಲೋಕಸಭಾ ಚುನಾವಣೆಯಲ್ಲಿ ದುರಾಸೆಗೆ ಬಿದ್ದರು.

ಅನಿರೀಕ್ಷಿತವಾಗಿ ಸಿಕ್ಕ ಅವಕಾಶವನ್ನು ದುರುಪಯೋಗ ಪಡಿಸಿಕೊಂಡು ಲೋಕಸಭೆಗೆ ತಮ್ಮ ಪರಿವಾರದ ಮೊಮ್ಮಕ್ಕಳನ್ನು ಪ್ರತಿಷ್ಟಾಪಿಸಲು ಮುಂದಾದರು.
ಅವರ ತಪ್ಪು ಲೆಕ್ಕಾಚಾರ ಮತ್ತು ದುರಾಸೆ ಸಮ್ಮಿಶ್ರ ಸರಕಾರದ ಅವನತಿಗೆ ನಾಂದಿಯಾಯಿತು.

ಅಹಂಕಾರ, ಅಧಿಕಾರದ ದರ್ಪ,ಪಕ್ಷದ ಕಾರ್ಯಕರ್ತರು,ಶಾಸಕರು ಮತ್ತು ಮಂತ್ರಿಗಳ ಬಲದಿಂದ ಮಂಡ್ಯ ವಶಪಡಿಸಿಕೊಳ್ಳುವ ಹುಮ್ಮಸ್ಸು ಹೆಚ್ಚಾಯಿತು.
ಆಂತರಿಕ ಕುಟುಂಬ ಕಲಹದ ಪ್ರಭಾವದಲ್ಲಿ ವಾಸ್ತವ ಪರಸ್ಥಿತಿ ಅರ್ಥವಾಗಲಿಲ್ಲ.

ದೊಡ್ಡ ಗೌಡರು, ಇಬ್ಬರು ಮೊಮ್ಮಕ್ಕಳು ಏಕಕಾಲಕ್ಕೆ ಅಖಾಡಕ್ಕೆ ಇಳಿಯುವ ಹುಂಬತನ ಕಾಂಗ್ರೆಸ್ ಪಕ್ಷದ ಒಂದು ಗುಂಪನ್ನು ಕೆರಳಿಸಿತು.
ಸಾಲದ್ದಕ್ಕೆ ಗೆಲ್ಲಲಾಗದ ಸೀಟುಗಳ ಕೇಳಿದ್ದು ಕೂಡ ಅಷ್ಟೇ ದುಡುಕಿನ ನಿರ್ಧಾರವಾಯಿತು.

ಮೂವತ್ತೆಂಟು ಅಂಕ ಪಡೆದವರು, ಎಂಬತ್ತು ಅಂಕ ಪಡೆದವರನ್ನು ಸಂಪೂರ್ಣ ಉದಾಸೀನ ಮಾಡಿದರು.
ಹೈಕಮಾಂಡ್ ಕಡೆ ಕಡೆ ಬೆರಳು ತೋರಿಸಿ ಮಿತ್ರ ಪಕ್ಷವನ್ನು ಹೆದರಿಸಲಾರಂಭಿಸಿದರು.

ಅನುಭವಿ,ಮುತ್ಸದ್ದಿ ರಾಜಕೀಯ ಚದುರಂಗದಾಟದ ಪೈಪೋಟಿ ತೀವ್ರಗೊಂಡದ್ದು ಲೋಕಸಭಾ ಚುನಾವಣೆ ಸಂದರ್ಭದಲ್ಲಿ.
ರಾಜಕೀಯ ತಜ್ಞರ ಊಹೆಗೂ ಮೀರಿದ ಒಳ ಒಪ್ಪಂದ ಆರಂಭವಾಯಿತು.

ಇಡೀ ಪ್ರಕರಣದ ತೀವ್ರತೆ ಉಲ್ಬಣವಾದದ್ದು ಮಂಡ್ಯ ಕ್ಷೇತ್ರದಲ್ಲಿ.
ಸುಮಲತಾ ಅಂಬರೀಶ್ ಅವರ ಸ್ಪರ್ಧೆ ಕಾಂಗ್ರೆಸ್ ಬಣಕ್ಕೆ ವರವಾಯಿತು.
ಅತ್ತ ದೊಡ್ಡ ಗೌಡರು, ಇತ್ತ ಮುಖ್ಯ ಮಂತ್ರಿಗಳ ಮಗ ಇಬ್ಬರನ್ನು ಮುಗಿಸುವ ವ್ಯೂಹ ಹೆಣೆಯಲಾಯಿತು. ಆದರೆ ಅಧಿಕಾರದ ಮದ ವಾಸ್ತವವನ್ನು ಅರ್ಥ ಮಾಡಿಕೊಳ್ಳಲಾಗದ ವಾತಾವರಣ ಸೃಷ್ಟಿ ಮಾಡಿತು.‌

ಮುಂದಿನದು ಈಗ ಇತಿಹಾಸ

ಲೋಕಸಭಾ ಚುನಾವಣಾ ಸೋಲಿನ ನಂತರವೂ ಮುಖ್ಯ ಮಂತ್ರಿಗಳ ಪರಿವಾರದವರ ವರ್ತನೆಯಲ್ಲಿ ಯಾವುದೇ ಬದಲಾವಣೆಗಳು ಕಾಣಲಿಲ್ಲ. ನಿರಂತರ ನಿರಂಕುಶ ಪ್ರಭುತ್ವ ಇಮ್ಮಡಿಯಾಯಿತು.

ಅತೃಪ್ತರ ಪಡೆಯನ್ನು ಹುಟ್ಟು ಹಾಕುವ ಅನಿವಾರ್ಯ ವಾತಾವರಣ ಸೃಷ್ಟಿಯಾಯಿತು.
ತುಂಬ ಜಾಗರೂಕತೆಯಿಂದ ಆಟ ಶುರುವಾಯಿತು.
ಮುಂಬೈಗೆ ಅತೃಪ್ತರು ಹಾರಿ ಹೋಗಲು ಎಲ್ಲರೂ ಕೈ ಜೋಡಿಸಿದರು. ಒಂದು ಸಣ್ಣ ಸುಳಿವು ಬಿಟ್ಟು ಕೊಡದ, ನಂಬಿಕೆ ಇಟ್ಟುಕೊಂಡು ಎಲ್ಲವನ್ನು ಎದುರಿಸುವ ಸಾಮರ್ಥ್ಯ ಹೊಂದಿದವರು ಮಾತ್ರ ಈ ಆಪರೇಶನ್ ಸದಸ್ಯರಾದರು.
ಯಾರೂ ಊಹಿಸಲಾಗದ ರೀತಿಯಲ್ಲಿ ಉನ್ನತ ಮಟ್ಟದ ವ್ಯವಹಾರ ನಡೆಯಿತು.

ಚಿತ್ರಕಥೆ, ನಿರ್ದೇಶನ, ನಟನೆ ಎಲ್ಲ perfect

ಅಧಿಕಾರ ಹಿಡಿಯುವ ತವಕ ಹೊಂದಿದ್ದ ಬಿಜೆಪಿ ನಾಯಕರು ಆಪರೇಶನ್ ಉಸಾಬರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದರು. ಅತೃಪ್ತ ಬಣದ ಲಾಭ ಪಡೆಯಲು ಉನ್ನತ ಕಾರ್ಯಾಚರಣೆ ಮೂಲಕ ಸರಕಾರ ಬೀಳಿಸುವ one point agenda ಇಟ್ಟುಕೊಂಡು ಎಲ್ಲರೂ ಕಾರ್ಯಪ್ರವೃತ್ತರಾದರು.

ಮೇಲ್ನೋಟಕ್ಕೆ ಸರಕಾರ ಉಳಿಸುವ ಹರಸಾಹಸದ‌ ನಾಟಕ ಅಷ್ಟೇ ಸಾಂಗವಾಗಿ ನಡೆಯಿತಾದರೂ ಒಳಗಿನ ಉದ್ದೇಶ ಭಿನ್ನವಾಗಿತ್ತು.

ಸುದೀರ್ಘ ಮಾತುಕತೆಯ ನಂತರದ ಕಾರ್ಯಾಚರಣೆ ಇದಾಗಿದ್ದರಿಂದ ಎಲ್ಲವೂ ಸಾಂಗವಾಗಿ ನಡೆಯಿತು.
ಆಟ ಇನ್ನೂ ನೈಜವಾಗಿ ಮೂಡಿ ಬರಲು ಜೆಡಿಎಸ್ ಭಿನ್ನಮತೀಯರು ಕೈ ಜೋಡಿಸಿದ್ದು ಹೆಚ್ಚು ಪರಿಣಾಮ ಬೀರಿತು.

ಇಡೀ ಸದನ ನಾಲ್ಕು ದಿನ ವೈಯಕ್ತಿಕ ನಿಂದನೆಯ ಅಖಾಡವಾಯಿತಾದರೂ ಅತೃಪ್ತರು ಅಲುಗಾಡಲಿಲ್ಲ.
ಬಿಜೆಪಿ ಅವರ ದಿವ್ಯ ಮೌನ ಮತ್ತು ಸಹನೆ ಈ ಆಟದ ಇನ್ನೊಂದು ವಿಶೇಷ.
ಕೇವಲ ಬೆರಳೆಣಿಕೆಯ ಕಾಂಗ್ರೆಸ್ ನಾಯಕರಿಗೆ ಮಾತ್ರ ಈ ಸರಕಾರ ಉಳಿಯಬೇಕಿತ್ತು.
ಮಿಕ್ಕದ್ದು ಬರೀ ತೋರಿಕೆಯ ಹಾರಾಟ,ಅರಚಾಟ,ಕೂಗಾಟ ಅಷ್ಟೇ.

ಒಂದು ಕಡೆ ಸರಕಾರ ಬೀಳಬೇಕು, ಮತ್ತೊಂದು ಕಡೆ ಜನರು ರೋಸಿ ಹೋಗಬೇಕು ಎನ್ನುವ ಅಜೆಂಡಾ ಸರಿಯಾಗಿ ಕೆಲಸ ಮಾಡಿತು.

ಯಾರು, ಯಾರ ಕಾಲು ಎಳೆದರು ಎಂದು ಗೊತ್ತಿದ್ದರೂ ಈಗ ಬಾಯಿ ಬಿಡುವಂತಿಲ್ಲ.
ಕೇವಲ ಕೆಲವು ನಾಯಕರ ದುಗುಡ ಬಿಟ್ಟರೆ ಈಗ ಎಲ್ಲರೂ ಸೋತು ಗೆದ್ದಿದ್ದಾರೆ.
ಮುಂದಿನ ಆಟಕ್ಕಾಗಿ ಸುಪ್ರೀಂ ಕೋರ್ಟ್ ಕಡೆ ತಮ್ಮ ನೋಟ ನೆಟ್ಟಿದ್ದಾರೆ.

ಮುಂದೆ ಕಾಲ ಎಲ್ಲವನ್ನೂ ಬಯಲು ಮಾಡುತ್ತದೆ, ಸ್ವಲ್ಪ ಸಹನೆಯಿಂದ ಕಾಯೋಣ…

ಸಿದ್ದು ಯಾಪಲಪರವಿ

LEAVE A REPLY

Please enter your comment!
Please enter your name here