ನಮ್ಮಿಂದಲೇ ಬೆಳೆದ ಮುಸ್ಲಿಂ ನಾಯಕರು ನಮ್ಮನ್ನೇ ವಿಲನ್ ಮಾಡಿದ್ರು – ದೇವೇಗೌಡರು

0
119

ನಮ್ಮಿಂದಲೇ ರಾಜಕೀಯವಾಗಿ ಬೆಳೆದು, ಅಧಿಕಾರವನ್ನೂ ಅನುಭವಿಸಿ ಈಗ ನಮ್ಮನ್ನೇ ವಿಲನ್ ಮಾಡುತ್ತಿದ್ದಾರೆ ಕೆಲವು ಮುಸ್ಲಿಂ ನಾಯಕರು. ಅಂತವರ ಪಟ್ಟಿ ಬಹಳ ದೊಡ್ಡದಿದೆ. ಆದರೆ ರಾಜ್ಯದ ಮುಸ್ಲಿಂ ಮತದಾರರು ಜೆಡಿಎಸ್‌ನೊಂದಿಗಿದ್ದಾರೆ ಎಂದು ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠರಾದ ಎಚ್.ಡಿ. ದೇವೇಗೌಡರು ಹೇಳಿದರು.

ತುಮಕೂರಿನ ಶಿರಾದಲ್ಲಿನ ಬರಗೂರು ರಾಮಚಂದ್ರಪ್ಪ ಬಯಲು ರಂಗಮಂದಿರದ ಆವರಣದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ದೇವೇಗೌಡರು, ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವನ್ನು ಉಳಿಸುವ ಜವಾಬ್ದಾರಿ ಪ್ರಜ್ಞಾವಂತ ಮತದಾರರ ಮೇಲಿದೆ. ಪ್ರಾದೇಶಿಕ ಪಕ್ಷದ ಅಗತ್ಯತೆ ಬಗ್ಗೆ ಇತ್ತೀಚಿನ ದಿನಗಳಲ್ಲಿ ಮತದಾರರಿಗೆ ಅರಿವು ಮೂಡಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ರಾಷ್ಟ್ರೀಯ ನೀತಿಗಳಿಗಾಗಿ ನಮ್ಮ ಪ್ರಾದೇಶಿಕ ಮೂಲಭೂತ ಅಗತ್ಯತೆಗಳನ್ನು ಬಲಿ ಕೊಡುತ್ತಿವೆ. ಹೀಗಾಗಿ ನಮ್ಮತನವನ್ನು ರಕ್ಷಿಸಿಕೊಳ್ಳಲು, ರಾಜಕೀಯವಾಗಿ ನಾವು ಸದೃಡರಾಗಿರಬೇಕು. ಹೀಗಾಗಿ ರಾಜ್ಯದ ಜನತೆ ಪ್ರಾದೇಶಿಕ ಶಕ್ತಿಯಾದ ಜೆಡಿಎಸ್ ಪಕ್ಷವನ್ನು ಬಲ ಪಡಿಸಬೇಕೆಂದು ಕರೆ ನೀಡಿದರು.


ಇನ್ನು ರಾಜ್ಯದಲ್ಲಿ ನಮ್ಮ ಪಕ್ಷದ ಬಗ್ಗೆ ಅಪಪ್ರಚಾರ ಮಾಡುವಲ್ಲಿ ನಮ್ಮ ಎದುರಾಳಿಗಳು ಸಾಕಷ್ಟು ಮುಂದಿದ್ದಾರೆ. ಅದನ್ನು ಮೆಟ್ಟಿ ನಿಲ್ಲುವ ಶಕ್ತಿ ನಮ್ಮ ಕಾರ್ಯಕರ್ತರಲ್ಲಿದೆ. ಜೆಡಿಎಸ್ ಕಾರ್ಯಕರ್ತರ ಪಕ್ಷ, ಇಲ್ಲಿಂದಲೇ ಅನೇಕರು ರಾಜಕೀಯವಾಗಿ ಬೆಳೆದಿದ್ದಾರೆ. ಆದರೆ ಎದುರಾಳಿಗಳು ನಮ್ಮದು ಕುಟುಂಬದ ಪಕ್ಷ ಎಂದು ಬಿಂಬಿಸುತ್ತಿದ್ದಾರೆ. ಎಲ್ಲ ರಾಜಕೀಯ ಪಕ್ಷದಲ್ಲಿಯೂ ಕುಟುಂಬ ರಾಜಕೀಯವಿದೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಹೇಳಿದರು. ಇನ್ನು ಮುಸ್ಲಿಂ ಮುಖಂಡರು ಈ ಬಾರಿ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದು, ಮುಸ್ಲಿಂ ಬಾಂಧವರು ಯಾವುದೇ ಅಪಪ್ರಚಾರಕ್ಕೆ, ಆಮಿಷಕ್ಕೆ ಒಳಗಾಗಬಾರದು.

ನಮ್ಮಿಂದಲೇ ಬೆಳೆದ ಕೆಲವು ಮುಸ್ಲಿಂ ನಾಯಕರು ನಮ್ಮನ್ನೇ ವಿಲನ್ ಮಾಡಿದರು. ಈ ಕುರಿತು ಯೋಚಿಸಿ ಮುಸ್ಲಿಂ ಬಾಂಧವರು ಮತಚಲಾಯಿಸಬೇಕೆಂದು ದೇವೇಗೌಡರು ಮನವಿ ಮಾಡಿದರು. ಇದೇ ವೇಳೆ ಶಿರಾ ಕ್ಷೇತ್ರವನ್ನು ವೈಯಕ್ತಿಕವಾಗಿ ನಾನು ದತ್ತು ತೆಗೆದುಕೊಳ್ಳುತ್ತೇನೆ. ಖುದ್ದು ನಾನೇ ನಿಂತು ಅಮ್ಮಾಜಮ್ಮನಿಗೆ ಮಾರ್ಗದರ್ಶನ ಮಾಡುವ ಮೂಲಕ ಶಿರಾ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಮಾಡುತ್ತೇನೆ ಎಂದು ಭರವಸೆ ನೀಡಿದರು. ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಅವರು ಮಾತನಾಡಿ, ನಾನು ರೈತ ಕುಟುಂಬದಿಂದ ಬಂದವಳು ನನಗೆ ರೈತರ, ಬಡವರ ಕಷ್ಟಗಳ ಅರಿವಿದೆ. ನಿಮ್ಮೆಲ್ಲ ಕಷ್ಟಗಳಿಗೆ ಸ್ಪಂದಿಸುತ್ತೇನೆ. ನೀವು ನನಗೆ ಮತ ನೀಡಿ ಎಂದರು.

 

LEAVE A REPLY

Please enter your comment!
Please enter your name here