ಗುಟ್ಟು ಗುಟ್ಟಾಗಿ ಅರಣ್ಯ ಪ್ರದೇಶವನ್ನ ಖಾಸಗಿಯವ್ರಿಗೆ ಮಾರಿದೆ ಸರ್ಕಾರ: ಸಿದ್ದರಾಮಯ್ಯ

0
29

ಬೆಂಗಳೂರು: ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಎಂಪಿಎಂ ಕಾರ್ಖಾನೆಗೆ ಕಚ್ಚಾ ವಸ್ತು ಪೂರೈಸಲು ನೀಡಲಾಗಿದ್ದ 20 ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶವನ್ನು ಈಗ ಏಕಾ ಏಕಿ ಖಾಸಗಿಯವರಿಗೆ ಒಪ್ಪಿಸಲು ಸರಕಾರ ಮುಂದಾಗಿದೆ
ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪಗೆ ಪತ್ರ ಬರೆದಿರುವ ಸಿದ್ದರಾಮಯ್ಯ, ಮಲೆನಾಡಿನ 20 ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶವನ್ನು ಖಾಸಗಿಯವರಿಗೆ ನೀಡಲು ಸರಕಾರ ಹುನ್ನಾರ ನಡೆಸುತ್ತಿರುವುದರ ವಿರುದ್ಧ ಈಗಾಗಲೇ ಮಲೆನಾಡಿನ ಜಿಲ್ಲೆಗಳಲ್ಲಿ ಜನ ಪ್ರತಿಭಟನೆ ಪ್ರಾರಂಭಿಸಿದ್ದಾರೆ.

siddaramaiah letter

ಈಗಾಗಲೆ ನೂರಾರು ಸಮಸ್ಯೆಗಳ ಸುಳಿಗೆ ಸಿಲುಕಿರುವ ಮಲೆನಾಡಿನ ಜನಜೀವನ ಮತ್ತು ಭವಿಷ್ಯದ ಜತೆಗೆ ಸರಕಾರ ಹುಡುಗಾಟ ಆಡುತ್ತಿರುವುದನ್ನು ನಿಲ್ಲಿಸಬೇಕು ಎಂದು ಬರೆದಿದ್ದಾರೆ.

ಪತ್ರದಲ್ಲಿ ಏನಿದೆ..?

ಮಾನ್ಯ ಮುಖ್ಯಮಂತ್ರಿಗಳೇ,

ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮೂಲಕ ರೈತರ ಕೃಷಿ ಭೂಮಿಯನ್ನು ಖಾಸಗಿಯವರಿಗೆ ನೀಡಿ ಉಳ್ಳವನೇ ಹೊಲದೊಡೆಯ ಆಗಲು ಸರಕಾರ ಒಪ್ಪಿಗೆ ಕೊಟ್ಟಿದ್ದಾಯಿತು. ಎಪಿಎಂಸಿ ಕಾಯ್ದೆ ತಿದ್ದುಪಡಿ ಮೂಲಕ ರೈತರು ಬೆಳೆದ ಬೆಳೆಯನ್ನೂ ಖಾಸಗಿಯವರ ಪಾದಕ್ಕೆ ಅರ್ಪಿಸಿದ್ದಾಯಿತು. ಈಗ

ಅರಣ್ಯ ಪ್ರದೇಶವನ್ನೂ ಖಾಸಗಿಯವರಿಗೆ ನೀಡಲು ಸರಕಾರ ಮುಂದಾಗುತ್ತಿರುವುದು ಅಕ್ಷಮ್ಯ ಅಪರಾಧವಾಗಿದೆ. ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಎಂಪಿಎಂ ಕಾರ್ಖಾನೆಗೆ ಕಚ್ಚಾ ವಸ್ತು ಪೂರೈಸಲು ನೀಡಲಾಗಿದ್ದ 20 ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶವನ್ನು ಈಗ ಏಕಾ ಏಕಿ ಖಾಸಗಿಯವರಿಗೆ ಒಪ್ಪಿಸಲು ಸರಕಾರ ಮುಂದಾಗಿರುವುದರ ವಿರುದ್ಧ ಮಲೆನಾಡಿನ ಜಿಲ್ಲೆಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಮಲೆನಾಡಿನ 20 ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶವನ್ನು ಖಾಸಗಿಯವರಿಗೆ ನೀಡಲು ಸರಕಾರ ಹುನ್ನಾರ ನಡೆಸುತ್ತಿರುವುದರ ವಿರುದ್ಧ ಈಗಾಗಲೇ ಮಲೆನಾಡಿನ ಜಿಲ್ಲೆಗಳಲ್ಲಿ ಜನ ಪ್ರತಿಭಟನೆ ಪ್ರಾರಂಭಿಸಿದ್ದಾರೆ.. ಹೋರಾಟ ಒಕ್ಕೂಟದ ಪದಾಧಿಕಾರಿಗಳು, ಪ್ರಗತಿಪರರು, ಪರಿಸರ ಹೋರಾಟಗಾರರು, ಜನಸಾಮಾನ್ಯರು ಈ ಬಗ್ಗೆ ಆತಂಕ ವ್ಯಕ್ತಪಡಿಸಿ ಸರಕಾರಕ್ಕೂ ಮನವಿ ಪತ್ರ ಕೊಟ್ಟಿದ್ದಾರೆ. ಶಿವಮೊಗ್ಗ ಜಿಲ್ಲಾ ಪ್ರವಾಸದಲ್ಲಿದ್ದ ಸಂದರ್ಭದಲ್ಲಿ ಹೋರಾಟಗಾರರ ಒಕ್ಕೂಟದ ಜತೆ ಈ ಬಗ್ಗೆ ನಾನೂ ಚರ್ಚಿಸಿದ್ದೇನೆ.ಸರಕಾರ ಪಾರದರ್ಶಕವಾಗಿ ವರ್ತಿಸದೆ ಗುಟ್ಟು ಗುಟ್ಟಾಗಿ 20 ಸಾವಿರ ಹೆಕ್ಟೇರ್ ಪ್ರದೇಶವನ್ನು ಖಾಸಗಿಯವರಿಗೆ ನೀಡಿ, ಈಗಾಗಲೇ ನೂರಾರು ಸಮಸ್ಯೆಗಳ ಸುಳಿಗೆ ಸಿಲುಕಿರುವ ಮಲೆನಾಡಿನ ಜನಜೀವನ ಮತ್ತು ಭವಿಷ್ಯದ ಜತೆಗೆ ಸರಕಾರ ಹುಡುಗಾಟ ಆಡುತ್ತಿದೆ.

1980 ರಲ್ಲಿ ಭದ್ರಾವತಿಯ ಮೈಸೂರು ಪೇಪರ್ ಮಿಲ್ (ಎಂಪಿಎಂ) ಕಾರ್ಖಾನೆಗೆ 40 ವರ್ಷಗಳ ಸೀಮಿತ ಅವಧಿಗೆಂದು ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಗಳಿಗೆ ಸೇರಿದ 20 ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶವನ್ನು ಲೀಸ್ ನೀಡಲಾಗಿತ್ತು. ಈ ಲೀಸ್ ಅವಧಿ ಮುಗಿದ ಕೂಡಲೇ ಈ ಪ್ರದೇಶವನ್ನು ಅರಣ್ಯ ಇಲಾಖೆಗೆ ಹಿಂದಿರುಗಿಸಬೇಕು ಎನ್ನುವ ಷರತ್ತು ವಿಧಿಸಲಾಗಿತ್ತು. ಇದೇ 2020 ರ ಆಗಸ್ಟ್‍ನಲ್ಲಿ ಲೀಸ್ ಅವಧಿ ಮುಗಿದಿದೆ. ಜತೆಗೆ ಎಂಪಿಎಂ ಕಾರ್ಖಾನೆ ಕೆಲಸ ನಿಲ್ಲಿಸಿ ವರ್ಷವೇ ಕಳೆದಿದೆ. ಹೀಗಾಗಿ ನಿಯಮಾನುಸಾರ ಹಾಗೂ ಲೀಸ್ ನೀಡುವ ವೇಳೆಯಲ್ಲಿ ವಿಧಿಸಿದ್ದ ಷರತ್ತಿನ ಪ್ರಕಾರ 20 ಸಾವಿರ ಹೆಕ್ಟೇರ್ ಪ್ರದೇಶ ಈ ಕ್ಷಣವೇ ಅರಣ್ಯ ಇಲಾಖೆಗೆ ಹಿಂದಿರುಗಿಸಬೇಕು. ಹಾಗಾಗುವುದರ ಬದಲು ಖಾಸಗಿಯವರಿಗೆ ಈ ಪ್ರದೇಶವನ್ನು ನೀಡಿ ಮಲೆನಾಡಿನ ಬದುಕನ್ನು ಇನ್ನಷ್ಟು ನರಕ ಮಾಡಲು ಯೋಜಿಸಿರುವಂತೆ ಕಾಣುತ್ತಿದೆ.

ಎಂಪಿಎಂ ಲೀಸ್‍ಗೆ ಪಡೆದಿದ್ದ ಮೂರು ಜಿಲ್ಲೆಗಳಿಗೆ ಸೇರಿದ 20 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ 525 ನೆಡುತೋಪುಗಳನ್ನು ಮಾಡಿದ್ದು ಅವುಗಳಲ್ಲಿ ಬಹುಪಾಲು ಅಕೇಶಿಯಾ ಮತ್ತು ಪೈನೂಸ್ ಜಾತಿಯ ಮರಗಳನ್ನು ಬೆಳೆಯಲಾಗಿದೆ. ಈ ಎರಡೂ ಸಸ್ಯಗಳು ನಿತ್ಯಹರಿದ್ವರ್ಣದ ಸ್ವಾಭಾವಿಕ ಅರಣ್ಯಕ್ಕೆ ವ್ಯತಿರಿಕ್ತವಾದ ಸಸ್ಯಗಳಾಗಿದ್ದು ಹಲವು ಪಕ್ಷಿ ಸಂಕುಲ ಮತ್ತು ಪ್ರಾಣಿ ಸಂಪತ್ತು ನಾಶವಾಗಿದೆ. ಪರಿಣಾಮಗಳನ್ನು ಸರಿಯಾಗಿ ಅಧ್ಯಯನ ಮಾಡದ, ಅಂದಾಜಿಸದೆ ಅಕೇಶಿಯಾದಂತಹ ಏಕ ಜಾತಿಯ ಮರಗಳನ್ನು ನೆಟ್ಟಿದ್ದರಿಂದ ವ್ಯಾಪಕ ಸಮಸ್ಯೆಗಳಾಗಿವೆ. ಪರಸರ ವಷಯಗಳು ಕಳೆದ 20-25 ವರ್ಷಗಳಲ್ಲಿ ಮನುಷ್ಯ ಅಳಿವು-ಉಳಿವನ್ನು ನಿರ್ಧರಿಸುವಂತಾಗಿವೆ. ನೆಡುತೋಪಿಗೆ ಅವಕಾಶ ಕೊಟ್ಟ ಕಾರಣದಿಂದ ಈಗಾಗಲೇ ಸಾಕಷ್ಟು ಅನಾಹುತಗಳಾಗಿವೆ. ಮತ್ತೊಂದು ಪ್ರಮುಖವಾದ ಸಂಗತಿ ಎಂದರೆ ಮಲೆನಾಡು ಮತ್ತು ಪಶ್ಚಿಮಘಟ್ಟದ ಕಾಡುಗಳು ಹಾಗೂ ಇಲ್ಲಿನ ಜನಜೀವನ ಮೊದಲಿನ ರೀತಿಯಲ್ಲಿ ಇಲ್ಲ. ಪಶ್ಚಿಮಘಟದ್ಟ ಪರಿಸರದ ಮೇಲೆ ಆದ ನಾನಾ ರೀತಿಯ ಆಕ್ರಮಣಗಳಿಂದಾಗಿ ಭೂ ಕುಸಿತದ ಸಮಸ್ಯೆ ತೀವ್ರವಾಗಿದೆ. ಮಳೆ ಪ್ರಮಾಣದಲ್ಲಿ ವ್ಯತ್ಯಾಸ ಆಗಿ ಪ್ರಾಣಿ ಮತ್ತು ಪಕ್ಷಿ ಸಂಕುಲಕ್ಕೆ ನೈಸರ್ಗಿಕವಾಗಿ ಸಿಗಬೇಕಾದ ಆಹಾರ ಸಿಗದ ಕಾರಣದಿಂದ ಜನವಸತಿ ಪ್ರದೇಶಗಳಿಗೆ ಆಹಾರ ಹುಡುಕಿಕೊಂಡು ಬರುತ್ತಿರುವ ಪ್ರಮಾಣವೂ ಹೆಚ್ಚಾಗುತ್ತಿದೆ. ಇದರಿಂದ ಅರಣ್ಯ ಜೀವಿ ಮತ್ತು ಮನುಷ್ಯನ ಸಂಘರ್ಷಗಳೂ ಹೆಚ್ಚುತ್ತಿವೆ. ಮಂಗಗಳ ಹಾವಳಿಯಿಂದ ಮಲೆನಾಡಿನ ಮಂದಿ ಬಸವಳಿದು ಹೋಗಿದ್ದಾರೆ.

ರೈತ ಹೋರಾಟಗಾರರು ಮತ್ತು ಮಾನವ ಹಕ್ಕು ಸಂಘಟನೆಗಳು ಸೇರಿದಂತೆ “ನಮ್ಮೂರಿಗೆ ಅಕೇಶಿಯಾ ಮರ ಬೇಡ ಹೋರಾಟ ಒಕ್ಕೂಟ”ದ ಪದಾಧಿಕಾರಿಗಳು ಮನವಿ ನೀಡಲು ಹೋಗಿದ್ದಾಗ ಅರಣ್ಯ ಪಡೆ ಮುಖ್ಯಸ್ಥರೂ ಹಾಗೂ ಮಾನ್ಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು “ಶಿವಮೊಗ್ಗ ಸಂಸದರ ಜತೆ ಒಮ್ಮೆ ಮಾತನಾಡಿ. ಅವರು ಒಪ್ಪಿದರೆ ನಮ್ಮದೇನೂ ತಕರಾರು ಇಲ್ಲ” ಎನ್ನುವ ಅರ್ಥದ ಮಾತುಗಳನ್ನು ಆಡಿದ್ದಾರೆ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಜತೆಗೆ 6-6-2020 ರಂದು ಸ್ವತಃ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲೂ ಕೂಡ 20 ಸಾವಿರ ಹೆಕ್ಟೇರ್ ಪ್ರದೇಶವನ್ನು ಹಿಂದಕ್ಕೆ ತೆಗೆದುಕೊಳ್ಳದಂತೆ ಯಥಾ ಸ್ಥಿತಿ ಮುಂದುವರೆಸಲು ತೀರ್ಮಾನ ತೆಗೆದುಕೊಂಡಿರುವುದು ಅನುಮಾನ ಗಟ್ಟಿಯಾಗಲು ಕಾರಣವಾಗಿದೆ.

ಅರಣ್ಯದಲ್ಲಿ ಒಂದು ಮರ ಕಡಿದರೆ ಅರಣ್ಯ ಕಾಯ್ದೆ ಅಡಿಯಲ್ಲಿ ಕೇಸು ದಾಖಲಿಸಿ ಶಿಕ್ಷಿಸಲಾಗುತ್ತದೆ. ಹೀಗಿರುವಾಗ 20 ಸಾವಿರ ಹೆಕ್ಟೇರ್ ಪ್ರದೇಶವನ್ನು ಖಾಸಗಿಯವರಿಗೆ ಒಪ್ಪಿಸುವುದು ಬಹಳ ದೊಡ್ಡ ಅಪರಾಧವಾಗುತ್ತದೆ. ಜತೆಗೆ ಈ ಕ್ರಮದಿಂದ ಇಡಿ ಮಲೆನಾಡನ್ನು ಕೆಲವೇ ವರ್ಷಗಳಲ್ಲಿ ಬಯಲುಸೀಮೆ ಮಾಡಿದಂತಾಗುತ್ತದೆ. ಹೀಗಾಗಿ ಸರಕಾರ ಪಾರದರ್ಶಕವಾಗಿ ವರ್ತಿಸಬೇಕು. ಎಂಪಿಎಂ ವಿಚಾರದಲ್ಲಿ, ಮಲೆನಾಡಿಗರ ಬದುಕಿನ ವಿಚಾರದಲ್ಲಿ ಹುಡುಗಾಟ ಆಡಬಾರದು. ಈ ಕೂಡಲೇ 1980 ರಲ್ಲಿ ವಿಧಿಸಲಾಗಿದ್ದ ಷರತ್ತಿನ ಪ್ರಕಾರ ಲೀಸ್‍ಗೆ ನೀಡಲಾಗಿದ್ದ 20 ಸಾವಿರ ಹೆಕ್ಟೇರ್ ಪ್ರದೇಶವನ್ನು ವಾಪಾಸ್ ಅರಣ್ಯ ಇಲಾಖೆ ಸುಪರ್ಧಿಗೆ ಪಡೆದುಕೊಳ್ಳಬೇಕು. ಎಂಪಿಎಂ ಕಾರ್ಖಾನೆಯ ನೌಕರರಿಗೆ ಸರ್ಕಾರ ತನ್ನ ಬೊಕ್ಕಸದಿಂದಲೇ ಪರಿಹಾರ, ಸಂಬಳ ನೀಡಬೇಕು. ಅರಣ್ಯ ಮಾರಿ ಸಂಬಳ ಕೊಡುವಂತಹ ಪರಿಸ್ಥಿತಿ ರಾಜ್ಯದಲ್ಲಿ ಉದ್ಭವಿಸಬಾರದು. ಹಾಗೇನಾದರೂ ಆದರೆ ರಾಜ್ಯದ ಮರ್ಯಾದೆ ರಾಷ್ಟ್ರ-ಅಂತರರಾಷ್ಟ್ರೀಯ ಮಟ್ಟದಲ್ಲಿ ಅವಮಾನಕ್ಕೆ ಗುರಿಯಾಗಬೇಕಾಗುತ್ತದೆ. 50 ಸಾವಿರ ಎಕರೆ ಅರಣ್ಯವೆಂದರೆ ಅದಕ್ಕೆ ಬೆಲೆ ಕಟ್ಟಲಾಗದು. ಆದ್ದರಿಂದ ಅರಣ್ಯ ಇಲಾಖೆಗೆ ಈ ಪ್ರದೇಶದಲ್ಲಿ ನೈಸರ್ಗಿಕ ಅರಣ್ಯ ಬೆಳೆಯಲು ಅವಕಾಶ ಮಾಡಿಕೊಡಬೇಕು. ಈ ಮೂಲಕ ಪಶ್ಚಿಮಘಟ್ಟ ಹಾಗೂ ಮಲೆನಾಡಿದ ಪರಿಸರವನ್ನು ಪುನರುಜ್ಜೀವನಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here