ಒಡಿಶಾದ ಜಜ್ಪುರ್ ಜಿಲ್ಲೆಯ ಗ್ರಾಮವೊಂದರಲ್ಲಿ ವಾಸಿಸುವ ಸುಮಾರು 75 ವರ್ಷದ ಮಾಜಿ ಪತ್ರಕರ್ತ ತಮ್ಮ ಆಸ್ತಿಯನ್ನು ರಾಜ್ಯ ಸರ್ಕಾರಕ್ಕೆ ದಾನ ಮಾಡಿದ ಘಟನೆ ನಡೆದಿದೆ. ಸರ್ಕಾರಕ್ಕೆ ದಾನ ಮಾಡಿರುವ ತಮ್ಮ ಜಾಮೀನಿನಲ್ಲಿ ವೃದ್ಧಾಶ್ರಮವನ್ನು ನಿರ್ಮಿಸಬೇಕೆಂದು ಮನವಿ ಮಾಡಿದ್ದಾರೆ.
ಯಾರು ಆ ವ್ಯಕ್ತಿ ಅನ್ನುವ ಕುತೂಹಲ ಇದೆಯೇ ??? ಅವರೆ ಮಾಜಿ ಪತ್ರಕರ್ತ ಖೇತ್ರಮೋಹನ್ ಮಿಶ್ರಾ . ತಮ್ಮ ಮಗ ಮತ್ತು ಸೊಸೆ ಸರಿಯಾಗಿ ನೋಡಿಕೊಳ್ಳದಿದ್ದಕ್ಕೆ ಅವರು ತಮ್ಮ ಸಂಪೂರ್ಣ ಆಸ್ತಿಯನ್ನು ಸರ್ಕಾರಕ್ಕೆ ಬರೆದು ಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಮಗ ಹಾಗೂ ಸೊಸೆ ನನ್ನನ್ನು ಕೊಲೆ ಮಾಡಲೂ ಸುಮಾರು ಬಾರಿ ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ನನ್ನ ಮಗ ಹಾಗೂ ಸೊಸೆಯ ನಡವಳಿಕೆಯಿಂದ ನಾನು ಬೇಸರಗೊಂಡು ಈ ನಿರ್ಣಯವನ್ನು ತೆಗೆದುಕೊಂಡಿದ್ದೇನೆ. ಇದು ನಾನು ಸ್ವಇಚ್ಛೆಯಿಂದ ತೆಗೆದುಕೊಂಡಿರುವ ನಿರ್ಧಾರವಾಗಿದ್ದು ನನ್ನ ಸಂಪೂರ್ಣ ಆಸ್ತಿ ಸರ್ಕಾರಕ್ಕೆ ಎಂದು ಸಹಿ ಹಾಕಿದ್ದಾರೆ. ಅಲ್ಲದೆ ನನ್ನ ಜೀವನದ ಉಳಿದ ಭಾಗವನ್ನು ವೃದ್ಧಾಶ್ರಮದಲ್ಲಿ ಕಳೆಯುತ್ತೇನೆ ಎಂದು ತಿಳಿಸಿದ್ದಾರೆ. ಹೀಗಾಗಿ ತಾವು ಸರ್ಕಾರಕ್ಕೆ ನೀಡಿರುವ ಜಾಗದಲ್ಲಿ ವೃದ್ಧಾಶ್ರಮವನ್ನು ನಿರ್ಮಿಸಬೇಕೆಂದು ಇದೆ ಸಂದರ್ಭದಲ್ಲಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಯಾಕೆಂದರೆ ಇದು ನನ್ನಂತಹ ನೊಂದ ಪೋಷಕರಿಗೆ ಕೊನೆಗಾಲದಲ್ಲಿ ಆಶ್ರಯ ಆಗಲಿ ಎನ್ನುವುದು ನನ್ನ ಅಭಿಪ್ರಾಯ ಎಂದು ತಿಳಿಸಿದ್ದಾರೆ.

ಮಿಶ್ರಾ ಅವರನ್ನು ಚಂಡಿಖೋಲೆ ಬಳಿಯ ವೃದ್ಧಾಶ್ರಮವೊಂದರಲ್ಲಿ ಇರಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಜಜ್ಪುರ ಜಿಲ್ಲಾಧಿಕಾರಿಗಳಾದ ರಂಜನ್ ಕೆ.ದಾಸ್ ತಿಳಿಸಿದ್ದಾರೆ. ಅವರ ಮರಣದ ನಂತರವೂ ಅವರ ಕುಟುಂಬದ ಸದಸ್ಯರು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಅನುಮತಿ ನೀಡಬಾರದೆಂದು ನಮ್ಮ ಬಳಿ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೆ ಮಿಶ್ರಾ ಅವರು ತಮ್ಮ ಭೂಮಿಯಲ್ಲಿ ವೃದ್ಧಾಶ್ರಮವನ್ನು ನಿರ್ಮಿಸಬೇಕೆಂದು ಮನವಿ ಸಲ್ಲಿಸಿದ್ದು ಅವರ ಮನವಿಯ ಅಂತೆಯೇ ಅಲ್ಲಿ ವೃದ್ಧಾಶ್ರಮವನ್ನು ನಿರ್ಮಿಸಲು ನಿರ್ಧರಿಸಿದ್ದೇವೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.