ಕೆಲವು ದಶಕಗಳ ಹಿಂದೆ ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿದ್ದ ಶಿವಾಜಿರಾವ್ ಗಾಯಕ್ವಾಡ್, ಇದೀಗ ಸೂಪರ್ಸ್ಟಾರ್ ರಜನೀಕಾಂತ್ ಎಂದೇ ಫೇಮಸ್. ತಮ್ಮ ವಿಭಿನ್ನ ಮ್ಯಾನರಿಸಂನಿಂದಲೇ ಕೆ.ಬಾಲಚಂದರ್ ಗಮನ ಸೆಳೆದ ರಜನೀಕಾಂತ್ ಇದೀಗ ಅಭಿಮಾನಿಗಳ ಪಾಲಿನ ಆರಾಧ್ಯ ದೈವ. ಇತ್ತೀಚೆಗಷ್ಟೇ ರಜನೀಕಾಂತ್ ‘ದರ್ಬಾರ್’ ಚಿತ್ರದ ಶೂಟಿಂಗ್ ಮುಗಿಸಿ ಹೊಸ ಸಿನಿಮಾಗೆ ರೆಡಿಯಾಗುತ್ತಿದ್ದಾರೆ. ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ತಲೈವಾ ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
‘ಎಸ್ಎಸ್ಎಲ್ಸಿ ಓದುವಾಗ ಪರೀಕ್ಷೆ ಫೀಸ್ ಕಟ್ಟಲು ಮನೆಯವರು ನನಗೆ 150 ರೂಪಾಯಿ ನೀಡಿದ್ದರು. ಆದರೆ ಪರೀಕ್ಷೆಯಲ್ಲಿ ಫೇಲ್ ಆಗುತ್ತೇನೆ ಎಂದು ನನಗೆ ಮೊದಲೇ ತಿಳಿದಿತ್ತು. ನನಗೆ ಓದಿಗಿಂತ ಸಿನಿಮಾದಲ್ಲಿ ಹೆಚ್ಚಿಗೆ ಆಸಕ್ತಿ ಇತ್ತು. ಆದ ಕಾರಣ ಸಿನಿಮಾದಲ್ಲಿ ಅವಕಾಶ ಪಡೆಯಲು ಪರೀಕ್ಷೆ ಬರೆಯದೆ ಆ ಫೀಸ್ ಹಣದಲ್ಲಿ ಚೆನ್ನೈ ಟ್ರೈನ್ ಹತ್ತಿದೆ. ಆದರೆ ದಾರಿ ಮಧ್ಯೆ ಟ್ರೈನ್ ಟಿಕೆಟ್ ಕಳೆದುಹೋಯಿತು. ಟಿಸಿ ಎಷ್ಟು ಹೇಳಿದರೂ ನಂಬಲಿಲ್ಲ. ಆ ವೇಳೆ ಟ್ರೈನಿನಲ್ಲಿದ್ದ ಐವರು ಕೂಲಿಗಳು ನನಗೆ ಹಣ ನೀಡಲು ಮುಂದೆ ಬಂದರು.
ನಾನು ಟಿಕೆಟ್ ತೆಗೆದುಕೊಂಡಿಲ್ಲ ಎಂದು ಅವರಿಗೆ ಅನ್ನಿಸಿರಬಹುದು. ಆದರೆ ನಾನು ಟಿಕೆಟ್ ತೆಗೆದುಕೊಂಡಿದ್ದೆ. ಕೊನೆಗೆ ನನ್ನ ಮಾತನ್ನು ಅವರು ನಂಬಿದರು. ಅಲ್ಲಿಂದ ಚೆನ್ನೈ ಹೋದ ನಂತರ ಅಂದುಕೊಂಡಷ್ಟು ಸುಲಭವಾಗಿ ಅವಕಾಶ ಸಿಗಲಿಲ್ಲ. ಆದರೆ ಓದು ಮುಗಿಸಿ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದ ನನಗೆ ಸ್ನೇಹಿತರೊಬ್ಬರು ಆಕ್ಟಿಂಗ್ ಕೋರ್ಸ ಮಾಡುವಂತೆ ಸಲಹೆ ನೀಡಿದರು. ಮತ್ತೆ ಚೆನ್ನೈಗೆ ಹೋಗಿ ಫಿಲ್ಮ್ ಇನ್ಸಟ್ಯೂಟ್ನಲ್ಲಿ ಆಕ್ಟಿಂಗ್ ಕಲಿತೆ. ಅಲ್ಲಿ ಕೆ. ಬಾಲಚಂದರ್ ಪರಿಚಯವಾಗಿ ಅವರು ನನಗೆ ಅವಕಾಶ ನೀಡಿದರು’ ಎಂದು ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕಿದ್ದಾರೆ ಸೂಪರ್ಸ್ಟಾರ್.
ಟ್ರೈನಿನಲ್ಲಿ ಟಿಕೆಟ್ ಕಳೆದುಕೊಂಡಾಗ ನಾನು ಯಾರು ಎಂದು ತಿಳಿಯದಿದ್ದರೂ ಆ ಕೂಲಿಗಳು ನನ್ನನ್ನು ನಂಬಿ ಹಣ ನೀಡಲು ಮುಂದೆ ಬಂದರು. ನಂತರ ಕೆ. ಬಾಲಚಂದರ್ ಅವರು ನನ್ನನ್ನು ನಂಬಿ ತಮ್ಮ ಸಿನಿಮಾಗಳಲ್ಲಿ ನಟಿಸುವ ಅವಕಾಶ ನೀಡಿದರು. ಇದೀಗ ನನ್ನ ಅಭಿಮಾನಿಗಳಿಗೆ ನನ್ನ ಮೇಲೆ ಬಲವಾದ ನಂಬಿಕೆ ಇದೆ, ಜೊತೆಗೆ ಪ್ರೀತಿ ನೀಡಿದ್ದಾರೆ. ಈ ನಂಬಿಕೆ ಹಾಗೂ ಪ್ರೀತಿಯನ್ನು ಎಂದಿಗೂ ಕಳೆದುಕೊಳ್ಳುವುದಿಲ್ಲ ಎಂದು ಭಾವುಕರಾಗಿ ನುಡಿದಿದ್ದಾರೆ ರಜನೀಕಾಂತ್. ಅಂದಹಾಗೆ ‘ದರ್ಬಾರ್’ ಸಿನಿಮಾ ಮುಂದಿನ ವರ್ಷ ಜನವರಿಯಲ್ಲಿ ಬಿಡುಗಡೆಯಾಗಲಿದೆ.