ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ 22 ಜಿಲ್ಲೆಗಳಲ್ಲಿ ಉಂಟಾಗಿರುವ ಭೀಕರ ಪ್ರವಾಹಕ್ಕೆ ರಾಜ್ಯಾದ್ಯಂತ ಜನತೆ ಮನಪೂರ್ವಕವಾಗಿ ಸಹಾಯ ಹಸ್ತಚಾಚಿಸಿದ್ದಾರೆ. ಅನೇಕ ಸಂಘ-ಸಂಸ್ಥೆಗಳು, ಮಠ-ಮಾನ್ಯಗಳು, ರಾಜಕಾರಣಿಗಳು, ಉದ್ಯಮಿಗಳು, ಚಿತ್ರನಟರು ಮತ್ತು ಕಲಾವಿದರು ಸೇರಿದಂತೆ ಕನ್ನಡ ನಾಡಿನ ಅನೇಕ ಸಹೃದಯ ಮನಸುಗಳು ನೆರೆ ಸಂತ್ರಸ್ಥರ ನೆರವಿಗೆ ಉದಾರ ದೇಣಿಗೆ ನೀಡಿವೆ.
ಆದರೆ ಇದೀಗ ಪಕ್ಕದ ರಾಜ್ಯದ ನಟರೊಬ್ಬರು ಕರ್ನಾಟಕದ ಪ್ರವಾಹ ಸಂತ್ರಸ್ಥರಿಗೆ ಅಪಾರ ದೇಣಿಗೆ ನೀಡುವ ಮೂಲಕ ಕನ್ನಡಿಗರ ಕಷ್ಟಕ್ಕೆ ಸ್ಪಂದಿಸಿದ್ದಾರೆ. ಹೌದು, ತೆಲುಗು ಚಿತ್ರರಂಗದ ಸ್ಟಾರ್ ಸಂಪೂರ್ಣೇಶ್ ಬಾಬು ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗೆ ನೆರವಾಗಲು ದೇಣಿಗೆ ನೀಡಿದ್ದಾರೆ.

ಇನ್ನು “ಉತ್ತರ ಕರ್ನಾಟಕದ ಪ್ರವಾಹದ ಸುದ್ಧಿ ನನ್ನ ಮನ ಕಲಕಿಬಿಟ್ಟಿತು, ಕನ್ನಡದ ಜನ ತೆಲುಗು ಚಿತ್ರಗಳನ್ನು ದಶಕಗಳ ಕಾಲದಿಂದ ಆದರಿಸುತ್ತಾ ಬಂದಿರುವವರು ಉತ್ತರ ಕರ್ನಾಟಕ ಜನ. ನನ್ನನ್ನು ಸಹ ‘ಹೃದಯಕಾಲೇಯಂ’ ಚಿತ್ರದಿಂದ ಬಹಳ ಮೆಚ್ಚಿದ್ದೀರಿ, ಅದಕ್ಕೆ ನಾನು ಚಿರ ಋಣಿ, ಇತ್ತೀಚಿನ ಪ್ರವಾಹದ ಫೋಟೋಗಳನ್ನ ಮತ್ತು ಆ ಪ್ರಾಂತ್ಯದ ಜನರ ನೋವನ್ನು ನೋಡಿ ನನಗೆ ತುಂಬಾ ದುಃಖ ಉಂಟಾಗಿದೆ. ಹೀಗಾಗಿ ನನ್ನ ಕೈಲಾದಷ್ಟು ಸಹಾಯವನ್ನು ನಾನು ಮಾಡುತ್ತಿದ್ದೇನೆ. ನನ್ನ ಅಳಿಲು ಸೇವೆಯಾಗಿ 2,00,000 ರೂ. ನೆರವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡುತ್ತಿದ್ದೇನೆ. ಜೈ ಹಿಂದ್” ಎಂದು ತಮ್ಮ ಫೇಸ್ಬುಕ್ ಪೇಜ್ನಲ್ಲಿ ಸಂಪೂರ್ಣೇಶ್ ಬಾಬು ಬರೆದುಕೊಂಡಿದ್ದಾರೆ. ತೆಲುಗು ನಟನ ಈ ಉದಾರ ಮನಸಿಗೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ.
