ತೆಲುಗು ಚಿತ್ರರಂಗಕ್ಕೂ ಕಾಲಿಟ್ಟ ವೀಣಾ ಸುಂದರ್​, ನವೀನ್ ಕೃಷ್ಣ…ಇದು ಕನ್ನಡ ರೀಮೇಕ್, ಯಾವ ಚಿತ್ರ ಊಹಿಸಿ..!​​​​​​​

0
190

2004 ರಲ್ಲಿ ‘ಓಕೆ ಸಾರ್ ಓಕೆ’ ಚಿತ್ರದ ಮೂಲಕ ನಿರ್ದೇಶಕರಾಗಿ ಕರಿಯರ್ ಆರಂಭಿಸಿದ ದಯಾಳ್ ಪದ್ಮನಾಭನ್ ಈಗ ಸಖತ್ ಬ್ಯುಸಿ ನಿರ್ದೇಶಕ. ಅದರಲ್ಲೂ ಬಿಗ್​​ ಬಾಸ್​​​ಗೆ ಹೋಗಿ ಬಂದ ನಂತರವಂತೂ ಸಾಲು ಸಾಲು ಚಿತ್ರಗಳನ್ನು ನಿರ್ದೇಶಿಸುತ್ತಿದ್ದಾರೆ ದಯಾಳ್. ದಯಾಳ್ ಪದ್ಮನಾಭನ್​ ನಿರ್ದೇಶಕ ಮಾತ್ರವಲ್ಲ ನಿರ್ಮಾಪಕ, ಡಿಸ್ಟ್ರಿಬ್ಯೂಟರ್ ಹಾಗೂ ಬರಹಗಾರರಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ತಮ್ಮ 17 ವರ್ಷಗಳ ಚಿತ್ರರಂಗದ ಪಯಣದಲ್ಲಿ ದಯಾಳ್ ಸುಮಾರು 18 ಸಿನಿಮಾಗಳನ್ನು ನಿರ್ದೇಶಿಸಿ 8 ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಲೂಸ್ ಮಾದ ಹಾಗೂ ಅದಿತಿ ಪ್ರಭುದೇವ ನಟಿಸಿರುವ ದಯಾಳ್ 18ನೇ ಸಿನಿಮಾ ‘ಒಂಭತ್ತನೇ ದಿಕ್ಕು’ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಇದೀಗ ದಯಾಳ್ ತಮ್ಮ 19ನೇ ಸಿನಿಮಾ ತಯಾರಿಯಲ್ಲಿದ್ದಾರೆ. ಆದರೆ ಅದು ತೆಲುಗು ಚಿತ್ರ. ಇದೇ ಮೊದಲ ಬಾರಿಗೆ ದಯಾಳ್ ಪದ್ಮನಾಭನ್ ತೆಲುಗು ಚಿತ್ರವನ್ನು ನಿರ್ದೇಶಿಸುವ ಮೂಲಕ ಟಾಲಿವುಡ್​​​​ಗೆ ಕಾಲಿಟ್ಟಿದ್ದಾರೆ.

ವಿಶೇಷ ಎಂದರೆ ದಯಾಳ್ ಪದ್ಮನಾಭನ್ ನಿರ್ದೇಶಿಸುತ್ತಿರುವುದು 2018 ರಲ್ಲಿ ತಾವೇ ನಿರ್ದೇಶಿಸಿದ್ದ ‘ಆ ಕರಾಳ ರಾತ್ರಿ’ ಚಿತ್ರದ ತೆಲುಗು ರೀಮೇಕ್​​. ಈ ಚಿತ್ರದಲ್ಲಿ ಅನುಪಮಾ, ಜೆಕೆ, ವೀಣಾ ಸುಂದರ್ ಹಾಗೂ ಇನ್ನಿತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಈ ಚಿತ್ರಕ್ಕೆ ರಾಜ್ಯ ಪ್ರಶಸ್ತಿ ಕೂಡಾ ದೊರೆತಿತ್ತು. ತೆಲುಗು ಖ್ಯಾತ ನಟ ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಈ ಚಿತ್ರ ನೋಡಿ ಅದನ್ನು ತೆಲುಗಿಗೆ ರೀಮೇಕ್ ಮಾಡುವಂತೆ ದಯಾಳ್ ಪದ್ಮನಾಭನ್​ಗೆ ಆಫರ್ ನೀಡಿದ್ದಾರೆ. ಅದರಂತೆ ದಯಾಳ್ ಪದ್ಮನಾಭನ್ ಇದೀಗ ಸ್ವಲ್ಪ ದಿನಗಳ ಮಟ್ಟಿಗೆ ಹೈದರಾಬಾದ್​​​ನಲ್ಲಿ ನೆಲೆಸಿದ್ದು ಚಿತ್ರೀಕರಣ ಮುಗಿದ ನಂತರ ಬೆಂಗಳೂರಿಗೆ ಬರಲಿದ್ದಾರೆ.

ಈ ತೆಲುಗು ಸಿನಿಮಾದ ಚಿತ್ರೀಕರಣ ಇದೇ ತಿಂಗಳು ಆರಂಭವಾಗಲಿದೆ. ಹೈದರಾಬಾದ್ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಚಿತ್ರೀಕರಣ ನಡೆಸಲು ಎಲ್ಲಾ ತಯಾರಿ ನಡೆದಿದೆ. ​​​​​​​​​ಮತ್ತೊಂದು ವಿಶೇಷ ಎಂದರೆ ಈ ಚಿತ್ರಕ್ಕಾಗಿ ಕನ್ನಡ ಚಿತ್ರರಂಗದಿಂದ ಕೆಲವು ಕಲಾವಿದರು ಹಾಗೂ ತಂತ್ರಜ್ಞರನ್ನು ದಯಾಳ್ ಪದ್ಮನಾಭನ್ ಟಾಲಿವುಡ್​​ಗೆ ಕರೆದೊಯ್ದಿದ್ದಾರೆ. ಕ್ಯಾಮರಾಮ್ಯಾನ್​ ಆಗಿ ಬಿ. ರಾಕೇಶ್, ಸಂಗೀತ ನಿರ್ದೇಶಕರಾಗಿ ಮಣಿಕಾಂತ್ ಕದ್ರಿ, ಸಂಕಲನಾಕಾರರಾಗಿ ಪ್ರೀತಿ-ಬಾಬು ಕೆಲಸ ಮಾಡುತ್ತಿದ್ದಾರೆ. ಇನ್ನು ಕನ್ನಡದ ‘ಆ ಕರಾಳ ರಾತ್ರಿ’ ಚಿತ್ರಕ್ಕಾಗಿ ಉತ್ತಮ ಪೋಷಕ ನಟಿ ಪ್ರಶಸ್ತಿ ಪಡೆದ ವೀಣಾ ಸುಂದರ್, ತೆಲುಗಿನಲ್ಲಿ ಅದೇ ಪಾತ್ರ ಮಾಡುತ್ತಿದ್ದಾರೆ. ಜೊತೆಗೆ ಹಿರಿಯ ನಟ ಶ್ರೀನಿವಾಸ ಮೂರ್ತಿ ಪುತ್ರ ನವೀನ್ ಕೃಷ್ಣ ಅವರು ಚಿತ್ರದಲ್ಲಿ ಪ್ರಮುಖ ಸಹ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ.

ಉಳಿದಂತೆ ಕನ್ನಡದಲ್ಲಿ ಅನುಪಮಾ ಗೌಡ, ಜಯರಾಮ್ ಕಾರ್ತಿಕ್ ಪಾತ್ರವನ್ನು ತೆಲುಗಿನಲ್ಲಿ ಯಾರು ಮಾಡಲಿದ್ದಾರೆ..? ಚಿತ್ರದ ಹೆಸರೇನು..? ಹಾಗೂ ಇನ್ನಿತರ ತಾರಾಗಣದ ಬಗ್ಗೆ ಶೀಘ್ರವೇ ತಿಳಿಸುವುದಾಗಿ ನಿರ್ದೇಶಕ ದಯಾಳ್ ಪದ್ಮನಾಭನ್ ಹೇಳಿದ್ದಾರೆ. ಒಟ್ಟಿನಲ್ಲಿ ಒಂದು ದೊಡ್ಡ ಬ್ಯಾನರ್​​ನಲ್ಲಿ ದಯಾಳ್ ಕೆಲಸ ಮಾಡುತ್ತಿದ್ದು ಕನ್ನಡದಂತೆ ತೆಲುಗಿನಲ್ಲಿ ಕೂಡಾ ಈ ಚಿತ್ರ ಕಮಾಲ್ ಮಾಡಲಿದ್ಯಾ ಕಾದು ನೋಡಬೇಕು.

LEAVE A REPLY

Please enter your comment!
Please enter your name here