ಕಪ್ಪು ಹಣವನ್ನು ದೇಶಕ್ಕೆ ತರುತ್ತೇವೆ ಎಂದು ವಾಗ್ದಾನ ನೀಡಿ ಎರಡು ಬಾರಿ ಅಧಿಕಾರ ಹಿಡಿದಿರುವ ಬಿಜೆಪಿ ಈ ಬಾರಿಯಾದರು ಕಪ್ಪು ಕುಳಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತಾ ಎಂಬುದನ್ನು ಕಾದುನೋಡುವ ಸಮಯ ಬಂದಿದೆ. ಹೌದು, ಭಾರತ ವಿಶ್ವದ ಅನೇಕ ದೇಶಗಳ ಜೊತೆ ಮಾಡಿಕೊಂಡಿರುವ ಒಪ್ಪಂದದನ್ವಯ ತೆರಿಗೆಗಳ್ಳರ ಮಾಹಿತಿಯನ್ನು ಪಡೆದುಕೊಂಡಿದೆ. ಇದೀಗ ತೆರಿಗೆ ಕಳ್ಳರ ಸ್ವರ್ಗವಾಗಿದ್ದ ಸ್ವಿಸ್ ಬ್ಯಾಂಕ್ಗಳು ತಮ್ಮ ಗ್ರಾಹಕರ ಮಾಹಿತಿ ಹಂಚಿಕೊಳ್ಳಲು ಮುಂದಾಗಿವೆ. ಸ್ವಿಸ್ ಬ್ಯಾಂಕುಗಳು ಮೊದಲ ಪಟ್ಟಿಯನ್ನು ಈ ಹಿಂದೆ ಬಿಡುಗಡೆ ಮಾಡಿದ್ದು, ಇದೀಗ ೨ನೇ ಪಟ್ಟಿಯನ್ನು ಬಿಡುಗಡೆ ಮಾಡಿವೆ. ಈ ಪಟ್ಟಿಯಲ್ಲಿ ವಿವಿದ ದೇಶಗಳ ಸುಮಾರು ೩೧ ಲಕ್ಷ ತೆರಿಗೆ ಕಳ್ಳರ ಮಾಹಿತಿ ಇದೆ ಎನ್ನಲಾಗಿದೆ. ಇನ್ನು ಪಟ್ಟಿಯಲ್ಲಿ ಅನೇಕ ಭಾರತೀಯರ ಹೆಸರುಗಳಿವೆ.
ಈ ಸ್ವಿಸ್ ಬ್ಯಾಂಕ್ಗಳು ಅಂದರೆ ವಿಶ್ವದ ಅನೇಕ ಬಡ ರಾಷ್ಟ್ರಗಳ ಭ್ರಷ್ಟ ರಾಜಕಾರಣಿಗಳು, ಉದ್ಯಮಿಗಳು ಹಾಗೂ ಅಧಿಕಾರಿಗಳು ಅಕ್ರಮ ಸಂಪತ್ತನ್ನು ಸುರಕ್ಷಿತವಾಗಿಟ್ಟ ಜಾಗ ಎನ್ನಲಾಗಿತ್ತು. ಆದರೆ ಈ ಹಿಂದೆ ಸ್ವಿಸ್ ಸರ್ಕಾರ ಸ್ವಿಸ್ ಬ್ಯಾಂಕುಗಳಲ್ಲಿ ಹಣವಿಟ್ಟವರ ಮಾಹಿತಿಯನ್ನು ಯಾವುದೇ ಕಾರಣಕ್ಕೂ ಬಹಿರಂಗ ಪಡಿಸುತ್ತಿರಲಿಲ್ಲ. ಆದರೆ ಕಪ್ಪು ಹಣದ ಹಾವಳಿ ಹೆಚ್ಚಾದಂತೆ ಜಾಗತಿಕ ಒತ್ತಡದ ಪರಿಣಾಮವಾಗಿ ಸ್ವಿಸ್ ಸರ್ಕಾರ ತೆರಿಗೆ ಕಳ್ಳರ ಮಾಹಿತಿಯನ್ನು ಬಹಿರಂಗ ಪಡಿಸುತ್ತಿದೆ. ೨೦೧೯ರ ಸೆಪ್ಟೆಂಬರ್ನಲ್ಲಿ ಮೊದಲ ಪಟ್ಟಿ ರಿವೀಲ್ ಆಗಿತ್ತು.
ಇದೀಗ ೨ನೇ ಲಿಸ್ಟ್ ಕೂಡ ಬಿಡುಗಡೆಯಾಗಿದೆ. ಇನ್ನು ಸ್ವಿಜರ್ಲೆಂಡ್ ಬ್ಯಾಂಕ್ಗಳು ಎಲ್ಲಾ ದೇಶಗಳ ತೆರಿಗೆ ಕಳ್ಳರ ಮಾಹಿತಿ ಹಂಚಿಕೊಂಡಿಲ್ಲ. ಆದರೆ ಆಯ್ದ ೮೬ ದೇಶಗಳ ತೆರಿಗೆ ಕಳ್ಳರ ಮಾಹಿತಿಯನ್ನು ಮಾತ್ರ ಹಂಚಿಕೊಳ್ಳಲಾಗುತ್ತಿದೆ. ೮೬ ದೇಶಗಳ ಪಟ್ಟಿಯಲ್ಲಿ ಭಾರತವೂ ಇದೆ.
ಇನ್ನು ಕಳೆದ ವರ್ಷವೇ ಮೊದಲ ಪಟ್ಟಿ ಬಹಿರಂಗಗೊಂಡಿದ್ದರು ಮೋದಿ ಸರ್ಕಾರ ಅಂದುಕೊಂಡಷ್ಟು ಹಣವನ್ನು ದೇಶಕ್ಕೆ ಮರಳಿ ತಂದಿಲ್ಲ. ಈಗ ೨ನೇ ಲಿಸ್ಟ್ ಸಿಕ್ಕಿದ್ದು ಪ್ರಧಾನಿ ನರೇಂದ್ರ ಮೋದಿ ತೆರಿಗೆಗಳ್ಳರನ್ನು ಶಿಕ್ಷಿಸಿ ದೇಶಕ್ಕೆ ಕಪ್ಪು ಹಣವನ್ನು ಮರಳಿ ತರುತ್ತಾರಾ ಎಂಬುದನ್ನು ಕಾದುನೋಡಬೇಕಿದೆ. ಪ್ರಧಾನಿ ಮೋದಿ ಈ ಹಿಂದೆ ಹೇಳಿದಂತೆ ದೇಶಕ್ಕೆ ಕಪ್ಪು ಹಣವನ್ನು ವಾಪಸ್ ತಂದರೆ ದೇಶದ ಪ್ರತಿಯೊಬ್ಬ ಬಡ ನಾಗರಿಕನ ಖಾತೆಗೆ ೧೫ ಲಕ್ಷ ಜಮೆ ಮಾಡುವುದಾಗಿ ಘೋಷಿಸಿದ್ದರು.
ಪ್ರಧಾನಿಗಳ ಈ ಘೋಷಣೆ ಜಾರಿಗೆ ಬರುತ್ತಾ ಅಥವಾ ಬರೀ ಘೋಷಣೆಯಾಗಿಯೇ ಉಳಿಯುತ್ತಾ ಎಂಬುದನ್ನು ಕಾದುನೋಡಬೇಕಿದೆ. ಒಟ್ಟಾರೆಯಾಗಿ ದೇಶದ ಸಂಪತ್ತನ್ನು ಕೊಳ್ಳೆಹೊಡೆದು ವಿದೇಶಗಳಲ್ಲಿ ಅಡಗಿಸಿಟ್ಟಿರುವ ಕಪ್ಪು ಕುಳಗಳಿಗೆ ತಕ್ಕ ಶಿಕ್ಷೆಯಾಗಬೇಕು. ಈ ದೇಶದ ಸಾಮಾನ್ಯ ನಾಗರಿಕನ ತೆರಿಗೆ ಹಣ ದೇಶಕ್ಕೆ ಮರಳಿ ಬರಬೇಕು. ಆ ಮೂಲಕ ದೇಶವೂ ಆರ್ಥಿಕವಾಗಿ ಸದೃಡವಾಗಬೇಕು ಎಂಬುದೇ ನಮ್ಮ ಆಶಯ.