ಕರುನಾಡಿನೊಂದಿಗೆ ಸುಷ್ಮಾ ನಂಟು, ಮರೆಯಲಾರದ ಪುಟಗಳು..!

0
106

ಸುಷ್ಮಾ ಸ್ವರಾಜ್ ಅವರು ರಾಷ್ಟ್ರ ರಾಜಕೀಯದಲ್ಲಿ ಹೆಚ್ಚಾಗಿ ಗುರುತಿಸಿಕೊಂಡಿದ್ದರು, ಕರ್ನಾಟಕದೊಂದಿಗೆ ಅವರಿಗೆ ವಿಶೇಷವಾದ ನಂಟಿತ್ತು. ಅನೇಕ ಸಂಗತಿಗಳ ಮೂಲಕ ಸುಷ್ಮಾ ಸ್ವರಾಜ್ ಹಾಗೂ ಕರ್ನಾಟಕಕ್ಕೆ ಅವಿನಾಭಾವ ಸಂಬಂಧವಿದೆ. ಅದರಲ್ಲೂ ಸುಷ್ಮಾ ಸ್ವರಾಜ್ ಅವರ ಕನ್ನಡ ಭಾಷಣ ಯಾವ ಕನ್ನಡಿಗನೂ ಮರೆಯಲು ಸಾಧ್ಯವಿಲ್ಲ. ನಿರರ್ಗಳವಾಗಿ ಕನ್ನಡವನ್ನು ಮಾತನಾಡುವ ಮೂಲಕ ಕನ್ನಡಿಗರ ಮನಗೆದ್ದ ಆ ಭಾಷಣ ಇದೀಗ ಸ್ಮರಣಿಯ.

ಹೌದು, ಅದು 1999ರ ಲೋಕಸಭಾ ಚುನಾವಣೆ. ಅನಿರೀಕ್ಷಿತವಾಗಿ ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸುಷ್ಮಾ ಸ್ವರಾಜ್ ಭರ್ಜರಿ ಪ್ರಚಾರ ನಡೆಸಿದ್ದರು. ಸುಷ್ಮಾ ಸ್ವರಾಜ್, ಅಟಲ್ ಬಿಹಾರಿ ವಾಜಪೇಯಿ, ಜಾರ್ಜ್ ಫನಾರ್ಂಡಿಸ್ ಸೇರಿದಂತೆ ಬಿಜೆಪಿ ಪ್ರಮುಖ ನಾಯಕರು ಬಳ್ಳಾರಿ ಚುನಾವಣಾ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಸುಷ್ಮಾ ಸ್ವರಾಜ್, ನಿರರ್ಗಗಳವಾಗಿ ಕನ್ನಡದಲ್ಲಿ ಮಾತನಾಡಿದ್ದರು. ರಾಜಕೀಯದ ಹೊರತಾಗಿ, ಭಾಷೆಯ ಮೂಲಕ ಜನರ ಮನಗೆಲ್ಲಬೇಕು ಎಂಬುದು ಸುಷ್ಮಾ ಅವರ ನಿಲುವಾಗಿತ್ತು. ಹೀಗಾಗಿಯೇ ಸುಷ್ಮಾ ಸ್ವರಾಜ್ ಕನ್ನಡ ಕಲಿತು ಮಾತನಾಡಿದ್ದರು. ಅವರು ಕನ್ನಡ ಕಲಿತದ್ದು ಕೆಲವೇ ದಿನಗಳಲ್ಲಿ ಮಾತ್ರ. ಒಂದು ರೀತಿಯಲ್ಲಿ ಕರ್ನಾಟಕ ಜನತೆಯ ಆಶೋತ್ತರಗಳಿಗೆ ಸ್ಪಂಧಿಸುವ ನಿಟ್ಟಿನಲ್ಲಿ ಸುಷ್ಮಾ ಕನ್ನಡ ಕಲಿತಿದ್ದರು. ಈ ಮೂಲಕ ತಾನು ಇತರ ರಾಜಕಾರಣಿಗಳಿಗಿಂತ ಭಿನ್ನ ಎಂದು ಸಾಬೀತು ಮಾಡಿದ್ದರು.

ಸುಷ್ಮಾ ಸ್ವರಾಜ್ ಅವರು ಕರ್ನಾಟಕದ ಜತೆ ಮೊದಲಿನಿಂದಲೂ ನಿಕಟ ಸಂಬಂಧ ಇರಿಸಿಕೊಂಡು ಬಂದವರು. ಅದರಲ್ಲಿಯೂ ವಿಶೇಷವಾಗಿ ಬಳ್ಳಾರಿಯೊಂದಿಗಿನ ಅವರ ನಂಟನ್ನು ನೆನಪಿಸಿಕೊಳ್ಳಲೇಬೇಕು. 1999ರಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದಾಗ ಪರಿಚಯವಾಗಿದ್ದ, ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಜೊತೆ ಉತ್ತಮ ಭಾಂಧವ್ಯ ಹೊಂದಿದ್ದರು. ಸುಷ್ಮಾ ಸ್ವರಾಜ್‍ಅವರನ್ನು ತಾಯಿ ಎಂದೇ ರೆಡ್ಡಿ ಸಹೋದರರು ಗೌರವಿಸುತ್ತಿದ್ದರು. ಪ್ರತಿ ವರ್ಷ ವರಮಹಾಲಕ್ಷ್ಮೀ ಹಬ್ಬಕ್ಕೆ ಬಳ್ಳಾರಿಗೆ ಆಗಮಿಸುತ್ತಿದ್ದ ಸುಷ್ಮಾ ವಿವಿಧ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದರು. ಒಂದು ರೀತಿಯಲ್ಲಿ ರೆಡ್ಡಿ ಸಹೋದರರಿಗೆ ರಾಜಕೀಯವಾಗಿಯೂ ತಾಯಿಯಾಗಿದ್ದರು. ಆದರೆ ಬದಲಾದ ಪರಿಸ್ಥಿತಿಯಲ್ಲಿ ರೆಡ್ಡಿ ಸಹೋದರರ ಮೇಲೆ ಗಣಿ ಹಗರಣ ಆರೋಪ ಕೇಳಿ ಬಂದ ನಂತರ ಸುಷ್ಮಾ ಸ್ವರಾಜ್ ಅವರು ನಿಧಾನವಾಗಿ ರೆಡ್ಡಿ ಸಹೋದರೊಂದಿಗೆ ಅಂತರ ಕಾಯ್ದುಕೊಂಡರು. ರಾಜಕೀಯವಾಗಿ ಮತ್ತು ವೈಯಕ್ತಿಕವಾಗಿ ಸುಷ್ಮಾ ಸ್ವರಾಜ್ ಅವರು ಕರ್ನಾಟಕದೊಂದಿಗೆ ಅವರಿಗಿದ್ದ ನಂಟನ್ನು ಇತ್ತೀಚೆಗೆ ಕಡಿದುಕೊಂಡಿದ್ದರು. ಆದರೆ ಸದಾ ಕಾಲ ನೆನಪಿನಲ್ಲಿ ಉಳಿಯ ಬಹುದಾದಷ್ಟು ನೆನಪುಗಳನ್ನು ಅವರು ಕನ್ನಡಿಗರೊಂದಿಗೆ ಬಿಟ್ಟು ಹೋಗಿದ್ದಾರೆ.

ಇನ್ನು ಕರ್ನಾಟಕದ ಅನೇಕ ಹಿರಿಯ ನಾಯಕರು ಸುಷ್ಮಾ ನಿಧನಕ್ಕೆ ಕಂಬನಿ ಮೀಡಿದಿದ್ದಾರೆ. “ಒಬ್ಬಳು ತಾಯಿಯನ್ನು ನಾವೆಲ್ಲಾ ಕಳೆದುಕೊಂಡಿದ್ದೇವೆ. ಸುಷ್ಮಾ ಸ್ವರಾಜ್ ಈ ದೇಶ ಕಂಡ ಅಪರೂಪದ ನಾಯಕಿ” ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸುಷ್ಮಾ ಸ್ವರಾಜ್ ಅವರೊಂದಿಗಿನ ಒಡನಾಟವನ್ನು ಹಂಚಿಕೊಂಡಿದ್ದಾರೆ. ಸಿಎಂ ಯಡಿಯೂರಪ್ಪನವರು “ಸುಷ್ಮಾ ಸ್ವರಾಜ್ ಅವರ ನಿಧನ ನಮ್ಮ ಪಕ್ಷಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ” ಎಂದಿದ್ದಾರೆ.

LEAVE A REPLY

Please enter your comment!
Please enter your name here