ಇನ್ಫೋಸಿಸ್ ಪ್ರತಿಷ್ಟಾನದ ವತಿಯಿಂದ ಉತ್ತರಕರ್ನಾಟಕದ ಪ್ರವಾಹ ನಿರಾಶ್ರಿತರಿಗೆ 10 ಲಕ್ಷ ರೂ. ವೆಚ್ಚದಲ್ಲಿ 200 ಮನೆಗಳನ್ನು ನಿರ್ಮಿಸಿ ಕೊಡಲು ಸುರ್ಧಾಮೂರ್ತಿ ಮುಂದಾಗಿದ್ದಾರೆ. ನಿರಾಶ್ರಿತರಿಗೆ ಅಗತ್ಯ ಆಹಾರ ಸಾಮಗ್ರಿಗಳು ಮತ್ತು ದಿನ ಬಳಕೆ ವಸ್ತುಗಳನ್ನು ನೀಡುವುದರ ಜೊತೆಗೆ ಮನೆಗಳನ್ನು ಕಟ್ಟಿಕೊಡಲು ನಿರ್ಧರಿಸಿದ್ದು, ಸುರ್ಧಾಮೂರ್ತಿ ನಡೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ಇನ್ನು ಸುಧಾಮೂರ್ತಿ ಅವರು, ಬಾಗಲಕೋಟೆಯ ಕೊಣ್ಣೂರು ಗ್ರಾಮದ ಗಂಜಿಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿ ತಂಗಿದ್ದ ನಿರಾಶ್ರಿತರನ್ನು ಸಮಾಧಾನಪಡಿಸಿದರು. ಈ ಭಾಗದಲ್ಲಿ ಹೊಳೆ ದಂಡೆಯಲ್ಲಿ ಮನೆ ಕಟ್ಟಿದರೆ ಮತ್ತೆ ಆತಂಕ ಎದುರಾಗುತ್ತದೆ. ಆದ್ದರಿಂದ ಎತ್ತರ ಭಾಗದಲ್ಲಿ ಮನೆ ಕಟ್ಟಿಕೊಡಿ ಎಂದು ಸಂತ್ರಸ್ತರು ಮನವಿ ಮಾಡಿದ್ದು, ರಾಜ್ಯ ಸರ್ಕಾರ ಜಾಗ ತೋರಿಸಿದರೆ ನಾವು ಮನೆ ನಿರ್ಮಿಸಿ ಕೊಡುತ್ತೇವೆ. ಈ ಭಾಗದಲ್ಲಿ 200 ಮನೆಗಳನ್ನು ಕಟ್ಟಿಕೊಡಲು ನಿರ್ಧರಿಸಿದ್ದೇನೆ. ಒಂದು ಕಡೆ 50 ಮತ್ತೊಂದು ಕಡೆ 50 ಹೀಗೆ 200 ಮನೆಗಳನ್ನು ಕಟ್ಟಿಕೊಡುತ್ತೇವೆ ಎಂದು ನಿರಾಶ್ರಿತರಿಗೆ ಸುರ್ಧಾಮೂರ್ತಿ ಭರವಸೆ ನೀಡಿದರು.

ಇನ್ನು 2009ರಲ್ಲಿ ಗುಲ್ಬರ್ಗಾ, ಯಾದಗಿರಿ, ಸೇಡಂ ಭಾಗದಲ್ಲಿ ನೆರೆಯುಂಟಾಗಿತ್ತು. ಆಗ ಇನ್ಫೋಸಿಸ್ 30ಕೋಟಿ ರೂಪಾಯಿ ವೆಚ್ಚದಲ್ಲಿ 2384ಮನೆ ನಿರ್ಮಿಸಿಕೊಟ್ಟಿತ್ತು. ಇನ್ನು ಕಳೆದ ವರ್ಷ ಕೊಡಗಿನಲ್ಲಿ ಉಂಟಾದ ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ 200 ಮನೆ ನಿರ್ಮಿಸಿ ಕೊಟ್ಟು ನೆರವಾಗಿತ್ತು. ಅದೇ ರೀತಿ ಆಂಧ್ರಪ್ರದೇಶದ ವಿಜಯವಾಡದಲ್ಲಿ ಪ್ರವಾಹ ಬಂದಿದ್ದಾಗ ಮೀನುಗಾರರಿಗೆ 300 ಮನೆಗಳನ್ನು ಕಟ್ಟಿಕೊಟ್ಟಿತ್ತು. ಹೀಗೆ ದೇಶದ ಯಾವುದೇ ಭಾಗದಲ್ಲಿ ಜನರು ಸಂಕಷ್ಟಕ್ಕೆ ಸಿಲುಕಿದರು ಸುಧಾಮೂರ್ತಿ ನೆರವಿನ ಹಸ್ತ ಚಾಚಿದ್ದಾರೆ.