ಆ ಒಂದು ಸಿಹಿ ತಿಂಡಿಗಾಗಿ ತಂದೆ ಜೇಬಿನಲ್ಲಿ ಹಣ ಕದಿಯುತ್ತಿದ್ದರಂತೆ ಭ್ರಮರಾಂಬಿಕ..!

0
309

ಭ್ರಮರಾಂಬಿಕ ಅಲಿಯಾಸ್ ಅಂಬಿಕ, 1978-1988 ರ ದಶಕದಲ್ಲಿ ಸ್ಯಾಂಡಲ್‍ವುಡ್‍ನಲ್ಲಿ ಬೇಡಿಕೆಯಲ್ಲಿದ್ದ ಕೆಲವೇ ಕೆಲವು ನಟಿಯರಲ್ಲಿ ಒಬ್ಬರು. ಮೂಲತ: ಮಲಯಾಳಂ ಕುಟುಂಬಕ್ಕೆ ಸೇರಿದವರಾದರೂ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಸುಮಾರು 250 ಕ್ಕೂ ಸಿನಿಮಾಗಳಲ್ಲಿ ನಟಿಸಿ ಹೆಸರು ಮಾಡಿದವರು ಅಂಬಿಕ.ಕೇರಳದ ತಿರುವನಂತಪುರಂನಲ್ಲಿ ಕುಂಜನ್ ನಾಯರ್ ಹಾಗೂ ಕಲ್ಲಾರ ಸರಸಮ್ಮ ದಂಪತಿಗೆ ಹುಟ್ಟಿದ ಅಂಬಿಕ ಮಲಯಾಳಂ ಸಿನಿಮಾದಲ್ಲಿ ಬಾಲನಟಿಯಾಗಿ ನಟಿಸುವ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟವರು.

 

ನಂತರ ‘ಸೀತಾ’ ಚಿತ್ರದ ಮೂಲಕ ನಾಯಕಿಯಾಗಿ ಅಭಿನಯಿಸಲು ಆರಂಭಿಸಿದರು. ‘ಶ್ರೀ ಯಡಿಯೂರು ಸಿದ್ದಲಿಂಗೇಶ್ವರ’ ಸಿನಿಮಾ ಮೂಲಕ ಕನ್ನಡಕ್ಕೆ ಕಾಲಿಟ್ಟ ಅಂಬಿಕ ನಂತರ ಅಂತ, ಗರುಡರೇಖೆ, ಚಲಿಸುವ ಮೋಡಗಳು, ಚಕ್ರವ್ಯೂಹ, ಎರಡು ನಕ್ಷತ್ರಗಳು, ಜೀವನ ಜ್ಯೋತಿ ಸೇರಿ ಬಹಳಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಂಬಿಕ ಅವರ ಸಹೋದರಿ ಉದಯಚಂದ್ರಿಕಾ ಅಲಿಯಾಸ್ ರಾಧ ಕೂಡಾ ಖ್ಯಾತ ನಟಿ.ಇತ್ತೀಚೆಗೆ ತೆಲುಗು ಚಾನೆಲ್‍ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅಂಬಿಕ ತಮ್ಮ ಬಾಲ್ಯದ ಬಗ್ಗೆ ಕೂಡಾ ಹೇಳಿಕೊಂಡಿದ್ದಾರೆ.

 

ಅಂಬಿಕಾಗೆ ಕಡ್ಲೆಮಿಠಾಯಿ ಎಂದರೆ ಬಹಳ ಇಷ್ಟವಂತೆ. ಸ್ಕೂಲ್‍ಗೆ ಹೋಗುವಾಗ ತಂದೆ ಜೇಬಿನಲ್ಲಿ ಹಣ ಕದ್ದು ಸ್ಕೂಲ್ ಎದುರಿನ ಅಂಗಡಿಯಲ್ಲಿ ದಿನಾ ಕಡ್ಲೆಮಿಠಾಯಿ ಕೊಂಡು ತಿನ್ನುತ್ತಿದ್ದರಂತೆ. ಒಂದು ದಿನ ವಿಷಯ ತಿಳಿದ ತಂದೆ ಅಂಬಿಕಾಗೆ ತಿಳಿಹೇಳಿದ ನಂತರ ಅವರು ಹಣ ಕದಿಯುವುದನ್ನು ಬಿಟ್ಟರಂತೆ. ಆದರೆ ಅಲ್ಲಿಂದ ತಂಗಿ ರಾಧಾ ಅಪ್ಪನ ಜೇಬಲ್ಲಿ ಹಣ ಕದಿಯಲು ಆರಂಭಿಸಿ ಆ ಕಳ್ಳತನವನ್ನು ಅಂಬಿಕ ಮೇಲೆ ಹೊರಿಸಿದ್ದರಂತೆ. ಈ ವಿಚಾರವನ್ನು ಹೇಳಿಕೊಂಡು ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡು ಭಾವುಕರಾಗಿದ್ದಾರೆ ಅಂಬಿಕ.

 

ಇನ್ನು ಅಂಬಿಕ ವೈಯಕ್ತಿಕ ಜೀವನಕ್ಕೆ ಬರುವುದಾದರೆ, 1988 ರಲ್ಲಿ ಎನ್‍ಆರ್‍ಐ ಪ್ರೇಮ್‍ಕುಮಾರ್ ಮೆನನ್ ಎಂಬುವವರನ್ನು ವಿವಾಹವಾದರು. ಈ ದಂಪತಿಗೆ ಇಬ್ಬರು ಗಂಡುಮಕ್ಕಳಿದ್ದಾರೆ. 1997 ರಲ್ಲಿ ಪ್ರೇಮ್ ಹಾಗೂ ಅಂಬಿಕ ವಿಚ್ಛೇದನ ಪಡೆದರು. ನಂತರ ಅಂಬಿಕ 2000 ರಲ್ಲಿ ನಟ ರವಿಕಾಂತ್ ಅವರನ್ನು ಮದುವೆಯಾದರು. ಆದರೆ ಈ ವೈವಾಹಿಕ ಜೀವನ ಕೂಡಾ ಸರಿಬರದೆ ಇಬ್ಬರೂ 2 ವರ್ಷಗಳಲ್ಲೇ ದೂರವಾದರು. ಸದ್ಯಕ್ಕೆ ಅಂಬಿಕ ತಮ್ಮ ಇಬ್ಬರು ಮಕ್ಕಳೊಂದಿಗೆ ಚೆನ್ನೈನಲ್ಲಿ ವಾಸವಾಗಿದ್ದಾರೆ. ಕೆಲವು ದಿನಗಳ ಕಾಲ ಸಿನಿಮಾಗಳಿಂದ ದೂರವಿದ್ದ ಅಂಬಿಕ ಮತ್ತೆ ನಟಿಸಲು ಆರಂಭಿಸಿದ್ದಾರೆ. ನನಗೆ ಸಿನಿಮಾ ಎಂದರೆ ಜೀವ. ನಟನೆಯನ್ನು ನಾನು ಬಹಳ ಗೌರವಿಸುತ್ತೇನೆ. ಯಾವ ಭಾಷೆಯಾದರೂ ನಾನು ನಟಿಸಲು ರೆಡಿಯಿದ್ದೇನೆ ಎನ್ನುತ್ತಾರೆ ಈ ಬಬ್ಲಿ ಬ್ಯೂಟಿ.

LEAVE A REPLY

Please enter your comment!
Please enter your name here