ಶೂನ್ಯದಿಂದ ವೃತ್ತಿ ಜೀವನವನ್ನು ಪ್ರಾರಂಭಿಸಿ ಸಾಧನೆಯ ತುತ್ತ ತುದಿಯಲ್ಲಿರುವ ಡಾಕ್ಟರ್ ಬಿ. ಸರೋಜಾದೇವಿ ಅಮ್ಮನವರು !

0
220

ಬಿ.ಸರೋಜದೇವಿ, ಭಾರತೀಯ ಚಿತ್ರರಂಗ ಕಂಡ ಧೀಮಂತ ನಾಯಕಿ, ಭಾರತೀಯ ಸಿನಿಮಾ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಪಾತ್ರಗಳನ್ನು ನಿರ್ವಹಿಸಿ ಆರು ದಶಕಗಳಲ್ಲಿ ಸುಮಾರು 200 ಚಿತ್ರಗಳಲ್ಲಿ ನಟಿಸಿ, ಅಭಿನಯ ಸರಸ್ವತಿ ಎಂದೇ ಖ್ಯಾತರಾಗಿದ್ದಾರೆ. ಕನ್ನಡ ಸೇರಿದಂತೆ ತಮಿಳು, ತೆಲುಗು ಮತ್ತು ಹಿಂದಿ ಚಲನಚಿತ್ರಗಳಲ್ಲಿ ಅಭಿನಯಿಸಿರುವ ಪಾತ್ರಗಳು ಜನರ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿದು ಬಿಟ್ಟಿದೆ.

 

 

ಸರೋಜಾದೇವಿ ಅವರ ಹುಟ್ಟು ಹೆಸರು ರಾಧಾ ದೇವಿ , ಭೈರಪ್ಪ ಮತ್ತು ರುದ್ರಮ್ಮ ದಂಪತಿಯ ಕುಟುಂಬದಲ್ಲಿ ನಾಲ್ಕನೇ ಮಗಳಾಗಿ ಬೆಂಗಳೂರಿನಲ್ಲಿ ಜನಿಸಿದ ಅವರನ್ನು ಅಜ್ಜ ಮಾಯಣ್ಣ ಗೌಡ ದತ್ತು ತೆಗೆದುಕೊಳ್ಳಬೇಕೆಂದು ಬಯಸಿದ್ದರಂತೆ. ಆದರೆ ಇದಕ್ಕೆ ಅವರ ತಂದೆ ನಿರಾಕರಿಸಿದ್ದರು. ನೃತ್ಯವನ್ನು ಕಲಿಯಬೇಕು ಎಂಬ ಮಹದಾಸೆ ಹೊಂದಿದ್ದ ಸರೋಜಾದೇವಿ ಅಮ್ಮನವರು, ತನ್ನ ತಂದೆಯ ಬಳಿ ಕೇಳಿಕೊಂಡಿದ್ದರು. ಅಂತೆಯೆ ತಂದೆ ಭೈರಪ್ಪ ಮಗಳ ಆಸೆಯಂತೆ ನೃತ್ಯ ಮತ್ತು ನಟನೆಯನ್ನು ವೃತ್ತಿ ಜೀವನ ಮಾಡಿಕೊಳ್ಳಲು ಪ್ರೋತ್ಸಾಹಿಸಿದರು.

 

 

ಆರ್.ಕೃಷ್ಣಮೂರ್ತಿ ಅವರು ತಮ್ಮ 13 ನೇ ವಯಸ್ಸಿನಲ್ಲಿ ಒಂದು ಸಮಾರಂಭದಲ್ಲಿ ಹಾಡುತ್ತಿದ್ದಾಗ, ಅವರನ್ನು ಮೊದಲು ಗುರುತಿಸಲಾಯಿತು. ಆದರೆ ಅವರು ಚಲನಚಿತ್ರ ಪ್ರಸ್ತಾಪವನ್ನು ನಿರಾಕರಿಸಿದರು..

ತನ್ನ 17 ನೇ ವಯಸ್ಸಿನಲ್ಲಿ, ಸರೋಜಾ ದೇವಿ ಅಮ್ಮನವರು ಹೊನ್ನಪ್ಪ ಭಗವತಾರ್ ಅವರ ಕನ್ನಡ ಚಿತ್ರ ಮಹಾಕವಿ ಕಾಳಿದಾಸ (1955) ಚಿತ್ರದ ಮೂಲಕ ಪೋಷಕ ಪಾತ್ರದಲ್ಲಿ ಅಭಿನಯಿಸಿ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಈ ಚಿತ್ರವು ಕನ್ನಡದಲ್ಲಿ ಅತ್ಯುತ್ತಮ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಮುಂದೆ, ಅವರು ಬಿ.ಆರ್.ಪಂಥುಲು ಅವರ ತಮಿಳು ಚಿತ್ರ ತಂಗಮಲೈ ರಾಗಸಿಯಂ (1957) ನಲ್ಲಿ ನಟಿಸಿದರು. ಇದರಲ್ಲಿ ಅವರು ನೃತ್ಯ ಸರಣಿಯನ್ನು ಪ್ರದರ್ಶಿಸಿದರು.

 

ತಾನೂ ಚೆನ್ನಾಗಿ ಓದಿ ಶಿಕ್ಷಕಿ ಆಗಬೇಕು ಅಂತ ಕನಸು ಕಂಡಿದ್ದ ಬಿ.ಸರೋಜಾದೇವಿ ಅಮ್ಮನವರು, ಅಭಿನಯ ಸರಸ್ವತಿ ಆಗ್ತೀನಿ ಅಂತ ಎಂದೂ ಅಂದುಕೊಂಡಿರಲಿಲ್ಲವಂತೆ. ಇದೊಂದೇ ಸಿನಿಮಾ, ಆಮೇಲೆ ನಟಿಸುವುದು ಬೇಡ…ಓದೋಣ’ ಅಂತ ಒಂದೊಂದೇ ಸಿನಿಮಾ ಮಾಡುತ್ತಾ ಬಂದ ಬಿ.ಸರೋಜಾದೇವಿ ನೋಡ ನೋಡುತ್ತಲೇ ದಕ್ಷಿಣ ಭಾರತದ ಯಶಸ್ವಿ ನಟಿಯಾಗಿ ಸೂಪರ್ ಸ್ಟಾರ್ ಆಗಿಬಿಡುತ್ತಾರೆ.

ಕನ್ನಡದಲ್ಲಿ ಉದಯ್ ಕುಮಾರ್, ಕಲ್ಯಾಣ್ ಕುಮಾರ್, ವರನಟ ಡಾ. ರಾಜ್ಕುಮಾರ್ ಅವರಿಗೆ ನಾಯಕಿಯಾದರೆ, ತೆಲುಗಿನಲ್ಲಿ ಎನ್.ಟಿ.ಆರ್ ತಮಿಳುನಾಡಿನಲ್ಲಿ ಎಂ.ಜಿ.ಆರ್ ಎಲ್ಲರಿಗೂ ನಾಯಕಿ ಆಗಿ ಚಿತ್ರರಂಗದಲ್ಲಿ ಮೆರೆದು ಸಾಲು ಸಾಲು ಪ್ರಶಸ್ತಿಗಳನ್ನ ಪಡೆದು ಡಾಕ್ಟರ್ ಸರೋಜಾ ದೇವಿ ಆಗುತ್ತಾರೆ.

 

 

30-40 ವರ್ಷಗಳ ಕಾಲ ಚತುರ್ಭಾಷಾ ನಟಿಯಾಗಿ ಚಿತ್ರರಂಗವನ್ನು ಆಳಿದ ಅವರು
ವರ್ಷದಲ್ಲಿ 10-13 ಚಿತ್ರಗಳಂತೆ, ಒಟ್ಟು 200 ಚಿತ್ರಗಳಲ್ಲಿ ‘ನಾಯಕಿ’ ಆಗಿ ಅಭಿನಯಿಸಿದ್ದಾರೆ. ಕರ್ನಾಟಕದಲ್ಲಿ ‘ಅಭಿನಯ ಸರಸ್ವತಿ’, ಎಂಬ ಬಿರುದು ಪಡೆದುಕೊಂಡರೆ. ತಮಿಳುನಾಡಿನಲ್ಲಿ ‘ಕನ್ನಡತು ಪೈಂಗಿಳಿ’ (ಕನ್ನಡದ ಅರಗಿಣಿ) ಅಂತಲೇ ಬಿ.ಸರೋಜಾದೇವಿ ಜನಪ್ರಿಯರಾಗಿದ್ದಾರೆ.

 

 

ಮನೆಯ ನಿಶ್ಚಯದಂತೆ ಶ್ರೀಹರ್ಷ ಎಂಬುವವರನ್ನು ವಿವಾಹವಾದ ಸರೋಜಾದೇವಿ ಅಮ್ಮನವರು, 1 ಮಾರ್ಚ್ 1967 ಆ ಸಮಯದಲ್ಲಿ, ಅವರು ಒಂದು ಆರ್ಥಿಕ ಬಿಕ್ಕಟ್ಟಿನ ಸಮಸ್ಯೆ ಎದುರಾಯಿತು. ಆದಾಯ ತೆರಿಗೆಯ ತೊಂದರೆ ಎದುರಿಸುತ್ತಿದ್ದರು. ಈ ಸಮಸ್ಯೆಗಳನ್ನು ನಿವಾರಿಸಲು ಅವರ ಪತಿ ಸಹಾಯ ಮಾಡಿದರು ಮತ್ತು ಅವರ ಹಣಕಾಸನ್ನು ಹೇಗೆ ನಿರ್ವಹಿಸಬೇಕು ಎಂದು ಅವರಿಗೆ ಕಲಿಸಿದರು. 1967 ರಲ್ಲಿ ತಾಯಿಯ ಒತ್ತಾಯದಿಂದ ಸಿನಿಮಾಗಳನ್ನು ನಿಲ್ಲಿಸಿದ್ದಾರೆ ಎಂಬ ಸುದ್ದಿಹರಡುತ್ತದೆ.

 

 

ಆಗ ಸರೋಜಾದೇವಿ ಅವರು ಇಲ್ಲ ಯಾವುದೇ ರೀತಿಯಲ್ಲಿ ನನ್ನ ತಾಯಿ ಮತ್ತು ಪತಿಯಿಂದ ಯಾವ ನಿರ್ಬಂಧನೆಗಳು ಇಲ್ಲ! ನನ್ನ ಪತಿ, ನನ್ನ ಅಭಿನಯವನ್ನು ಪ್ರೋತ್ಸಾಹಿಸುತ್ತಾರೆ ಎಂದು ಹೇಳುತ್ತಾರೆ. 1968 ರ ನಂತರ, ತಮಿಳಿನ ಚಿತ್ರರಂಗದಲ್ಲಿ ಸರೋಜ ದೇವಿ ಅವರ ವೃತ್ತಿಜೀವನ ಕ್ರಮೇಣ ಕುಸಿಯಿತು ಮತ್ತು ಅವರು ಕನ್ನಡ ಚಲನಚಿತ್ರಗಳಲ್ಲಿ ಹೆಚ್ಚಾಗಿ ಸಕ್ರಿಯರಾದರು.

 

 

ತನ್ನ ಸುದೀರ್ಘ ವೃತ್ತಿಜೀವನದಲ್ಲಿ ಅವರು ಮುಖ್ಯವಾಗಿ 1960 ರ ದಶಕದಲ್ಲಿ ಮಾತ್ರ ಪ್ರಣಯ ಚಲನಚಿತ್ರಗಳನ್ನು ಆರಿಸಿಕೊಂಡರು. ನಂತರ 1960 ರ ದಶಕದ ಉತ್ತರಾರ್ಧದಿಂದ 1980 ರವರೆಗೆ ಭಾವನಾತ್ಮಕ ಮತ್ತು ಸಾಮಾಜಿಕವಾಗಿ ಸಂಬಂಧಿಸಿದ ಚಲನಚಿತ್ರಗಳನ್ನು ಆರಿಸಿಕೊಂಡರು. 1977 ರಲ್ಲಿ ಬಿಡುಗಡೆಯಾದ ಕನ್ನಡ ಚಿತ್ರ ಶ್ರೀ ರೇಣುಕಾದೇವಿ ಮಹಾತ್ಮೆ, ಅವರ ವೃತ್ತಿಜೀವನದ 150 ನೇ ಚಿತ್ರ ಮತ್ತು 1984 ರ ಹೊತ್ತಿಗೆ ಅವರು 161 ಚಲನಚಿತ್ರಗಳನ್ನು ಮುಖ್ಯ ನಾಯಕಿಯಾಗಿ ಪೂರ್ಣಗೊಳಿಸಿದ್ದರು. ಕನ್ನಡದಲ್ಲಿ ಯಾರಿವನು 161 ನೇ ಚಿತ್ರವಾಗಿದ್ದು, ಇದರಲ್ಲಿ ಅವರು ಮುಖ್ಯ ನಾಯಕಿಯಾಗಿ ನಟಿಸಿದ್ದಾರೆ.

 

 

ಸರೋಜ ಅಮ್ಮನವರ ಪತಿ ಶ್ರೀ ಹರ್ಷ 1986ರಲ್ಲಿ ನಿಧನರಾಗುತ್ತಾರೆ. ಈ ದಂಪತಿಗಳಿಗೆ ನಾಲ್ಕು ಮುದ್ದಾದ ಮಕ್ಕಳಿದ್ದು ಭುವನೇಶ್ವರಿ, ಇಂದಿರಾ, ಗೌತಮ್, ರಾಮಚಂದ್ರ ಅವರ ಹೆಸರುಗಳು.

ತಮ್ಮ ವೃತ್ತಿ ಜೀವನದಲ್ಲಿ ಅನೇಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಸರೋಜಾದೇವಿ ಅಮ್ಮನವರು ,
ಜೀವಮಾನ ಸಾಧನೆಗೆ ಕರ್ನಾಟಕದಲ್ಲಿ ರಾಜ್ಯೋತ್ಸವ ಪ್ರಶಸ್ತಿ, ಡಾ.ರಾಜ್ ಕುಮಾರ್ ಪ್ರಶಸ್ತಿ ಹಾಗೂ ಫಿಲ್ಮ್ ಫೇರ್ ಪ್ರಶಸ್ತಿ ಕನ್ನಡ ದಲ್ಲಿ ಪಡೆದಿದ್ದಾರೆ. ಅಂತೆಯೇ ಆಂಧ್ರ ಪ್ರದೇಶದ ಪ್ರತಿಷ್ಟಿತ ಎನ್.ಟಿ.ಆರ್ ಪ್ರಶಸ್ತಿ, ತಮಿಳುನಾಡು ಸರ್ಕಾರದಿಂದ ಎಂ.ಜಿ.ಆರ್ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ. ನಂತರ 2006 ರಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪಡೆದುಕೊಂಡರು. ಇಷ್ಟಲ್ಲದೇ 1969 ರಲ್ಲಿ ಪದ್ಮಶ್ರೀ ಪುರಸ್ಕಾರ, 1992 ಪದ್ಮಭೂಷಣ ಪುರಸ್ಕಾರ ಹಾಗೂ 2008 ರಲ್ಲಿ ಭಾರತ ಸರ್ಕಾರದಿಂದ ಜೀವಮಾನ ಶ್ರೇಷ್ಟ ಸಾಧನೆ ಪ್ರಶಸ್ತಿ ಪಡೆದಿದ್ದಾರೆ.

 

 

ಒಟ್ಟಾರೆ ಶೂನ್ಯದಿಂದ ಗೆಲುವಿನ ಬೆನ್ನೇರಿದ ಡಾಕ್ಟರ್ ಬಿ. ಸರೋಜಾದೇವಿ ಅಮ್ಮನವರು ಸಾಧನೆಯ ಶಿಖರದ ತುತ್ತ ತುದಿಯಲ್ಲಿದ್ದಾರೆ. ನೀವು ಕೂಡ ಅವರ ಅಭಿಮಾನಿಗಳಾಗಿದ್ದಲ್ಲಿ ಕಾಮೆಂಟ್ ಮುಖಾಂತರ ನಿಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿ.

LEAVE A REPLY

Please enter your comment!
Please enter your name here