SSLC ಪೂರಕ ಪರೀಕ್ಷೆ ಫಲಿತಾಂಶ ಕಳೆದ ಬಾರಿಗಿಂತ ಉತ್ತಮ: ಸುರೇಶ್ ಕುಮಾರ್

0
42
sureshkumar sslc press meet

ಬೆಂಗಳೂರು: ಕಳೆದ ತಿಂಗಳು ನಡೆದ ಎಸ್ ಎಸ್ ಎಲ್ ಸಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು,ಈ ಬಾರಿ ಶೇ. 8.81ರಷ್ಟು ಹೆಚ್ಚಿನ ಫಲಿತಾಂಶ ದಾಖಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡುವ ಮೂಲಕ ಸಂತಸ ಹಂಚಿಕೊಂಡಿರುವ ಸಚಿವ ಸುರೇಶ್, ಶೇ. 51.28ರಷ್ಟು ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಳೆದ ವರ್ಷದ ಪೂರಕ ಪರೀಕ್ಷೆಯಲ್ಲಿ ಶೇ. 42.47 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಈ ಬಾರಿ ಶೇ. 8.81ರಷ್ಟು ಹೆಚ್ಚಿನ ಫಲಿತಾಂಶ ದಾಖಲಾಗಿದೆ ಎಂದರು.

ಪೂರಕ ಪರೀಕ್ಷೆಯಲ್ಲಿ ವಿದ್ಯಾರ್ಥಿನಿಯರು ಮೇಲುಗೈ ಸಾಧಿಸಿದ್ದರೆ, ಗ್ರಾಮೀಣ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿಗಳ ಮೊಬೈಲ್ ಸಂಖ್ಯೆಗೆ ಫಲಿತಾಂಶಗಳನ್ನು ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯಿಂದ ನೇರವಾಗಿ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಶುಕ್ರವಾರವೇ ಆಯಾ ಶಾಲೆಗಳಲ್ಲಿ ಫಲಿತಾಂಶ ಪ್ರಕಟವಾಗಿದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಾಲಾ ಅಭ್ಯರ್ಥಿಗಳು, ಪುನರಾವರ್ತಿತ ಶಾಲಾ ಅಭ್ಯರ್ಥಿಗಳು, ಖಾಸಗಿ ಅಭ್ಯರ್ಥಿಗಳು ಮತ್ತು ಪುನರಾವರ್ತಿತ ಖಾಸಗಿ ಅಭ್ಯರ್ಥಿಗಳು ಸೇರಿ ಒಟ್ಟು 213955 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ 109719 ಅಭ್ಯರ್ಥಿಗಳು ಉತ್ತೀಣರಾಗಿದ್ದಾರೆ. 135202 ವಿದ್ಯಾರ್ಥಿಗಳಲ್ಲಿ 65652 ವಿದ್ಯಾರ್ಥಿಗಳು (ಶೇ. 48.56) ಉತ್ತೀರ್ಣರಾಗಿದ್ದರೆ, 78753 ವಿದ್ಯಾರ್ಥಿನಿಯರಲ್ಲಿ 44067 ವಿದ್ಯಾರ್ಥಿನಿಯರು (55.96) ತೇರ್ಗಡೆ ಹೊಂದಿದ್ದಾರೆ. ನಗರ ಪ್ರದೇಶದ 105207 ಅಭ್ಯರ್ಥಿಗಳಲ್ಲಿ 50764 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದರೆ (ಶೇ. 48.25), ಗ್ರಾಮೀಣ ಪ್ರದೇಶದ 108748 ಅಭ್ಯರ್ಥಿಗಳಲ್ಲಿ 58955 ಅಭ್ಯರ್ಥಿಗಳು ಉತ್ತಿರ್ಣರಾಗಿದ್ದಾರೆ. (ಶೇ. 54.21) ಅ. 7 ರಿಂದ 13 ರವರೆಗೆ ನಾಲ್ಕು ಕಂದಾಯ ವಿಭಾಗಗಳ 14 ಶೈಕ್ಷಣಿಕ ಜಿಲ್ಲೆಗಳ 84 ಕೇಂದ್ರಗಳಲ್ಲಿ ನಡೆದ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ 13834 ಶಿಕ್ಷಕರು ಪಾಲ್ಗೊಂಡಿದ್ದರು ಎಂದು ಅವರು ಪರೀಕ್ಷಾ ಪ್ರಕ್ರಿಯೆಯ ವಿವರ ಒದಗಿಸಿದ್ದಾರೆ.

ಸರ್ಕಾರಿ ಶಾಲೆಗಳಿಗೆ ಶೇ. 50.19, ಅನುದಾನಿತ ಶಾಲೆಗಳಿಗೆ ಶೇ. 53.13 ಮತ್ತು ಅನುದಾನರಹಿತ ಶಾಲೆಗಳಿಗೆ 50.87 ಫಲಿತಾಂಶ ಲಭ್ಯವಾಗಿದೆ. ಮಾಧ್ಯಮವಾರು ಫಲಿತಾಂಶದಲ್ಲಿ ಕನ್ನಡ- ಶೇ. 50.79, ಇಂಗ್ಲಿಷ್-ಶೇ. 49.25, ಉರ್ದು-ಶೇ. 64.88, ಮರಾಠಿ-ಶೇ. 61.84, ತೆಲುಗು-ಶೇ. 58.1, ತಮಿಳು-ಶೇ. 25.45, ಹಿಂದಿ-ಶೇ. 44.71 ಫಲಿತಾಂಶ ಲಭ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.

ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಛಾಯಾ ಪ್ರತಿ ಹಾಗೂ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಆನ್ ಲೈನ್‌ ನಲ್ಲಿ ಅವಕಾಶ ಕಲ್ಪಿಸಲಾಗಿದೆ. ಸ್ಕ್ಯಾನ್ ಪ್ರತಿಗಾಗಿ ಅರ್ಜಿಸಲ್ಲಿಸಲು ಅ. 17 ರಿಂದ 21 ರವರೆಗೆ, ಮರು ಎಣಿಕೆಗಾಗಿ ಅ. 20 ರಿಂದ ಆ. 28 ರವರೆಗೆ ಮತ್ತು ಮರುಮೌಲ್ಯಮಾಪನಕ್ಕಾಗಿ ಅ. 20ರಿಂದ 29ರವರೆಗೆ ಅವಕಾಶವಿದ್ದು, ಅಭ್ಯರ್ಥಿಗಳು ಇದರ ಸದುಪಯೋಪಡಿಸಿಕೊಳ್ಳಬೇಕೆಂದು ಸುರೇಶ್ ಕುಮಾರ್ ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here