ಮೂಲ-ವಲಸಿಗ ಕಿತ್ತಾಟ : ಬಿಎಸ್ವೈಗೆ ಸಂಪುಟ ಸಂಕಟ…!

0
66

ಕೇಂದ್ರ ಬಿಜೆಪಿ ವರಿಷ್ಠರನ್ನು ಭೇಟಿಯಾಗಿ ಬಂದು ೩ ದಿನ ಕಳೆದರೂ ಸಚಿವ ಸಂಪುಟ ವಿಸ್ತರಣೆ ಇಲ್ಲವೇ ಪುನಾರಚನೆಯ ವಿಚಾರದಲ್ಲಿ ಕೇಂದ್ರದ ನಾಯಕರಿಂದ ಯಾವುದೇ ಸೂಚನೆಯು ಬಂದಿಲ್ಲ. ಆದರೆ ಈ ಕಡೆ ರಾಜ್ಯದಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳು ಮಾತ್ರ ರಾಜ್ಯ ನಾಯಕರನ್ನು ಸಚಿವ ಸ್ಥಾನಕ್ಕಾಗಿ ದುಂಬಾಲು ಬೀಳುವುದು ನಿಂತಿಲ್ಲ. ಜೊತೆಗೆ ಕೇಂದ್ರ ನಾಯಕರ ಮೇಲೆ ಒತ್ತಡವನ್ನು ಹೇರುವ ತಂತ್ರವನ್ನು ಒಳಗಿಂದ ಒಳಗೆ ನಡೆಸುವುದು ಸದ್ದಿಲ್ಲದೇ ಸಾಗಿದೆ.

ಸಚಿವ ರಮೇಶ್ ಜಾರಕಿಹೊಳಿ ಅವರು ಮೊನ್ನೆ ದಿಲ್ಲಿಯಲ್ಲಿ ಬಿ.ಎಲ್.ಸಂತೋಷ್ ಅವರನ್ನು ಭೇಟಿಯಾದ ವಿಷಯವು ರಾಜ್ಯದ ನಾಯಕರಲ್ಲಿ ಸಂಚಲನ ಸೃಷ್ಟಿಸಿತ್ತು. ನಂತರ ಅವರನ್ನು ಮುಖ್ಯಮಂತ್ರಗಳ ಆಪ್ತ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಭೇಟಿಯಾಗಿ ಚರ್ಚೆ ನಡೆಸಿದ್ದು ಸಹ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿತ್ತು.

ಇನ್ನು ಉಪಚುನಾವಣೆ ನಡೆದ ನಂತರದಲ್ಲಿ ರಾಜ್ಯ ರಾಜಕಾರಣದಲ್ಲಿ ಸಚಿವ ಸಂಪುಟ ಪುನಾರಚನೆಯ ವಿಷಯ ಮುನ್ನೆಲೆಗೆ ಬಂದಿದೆ. ಆದರೆ ಬಿಎಸ್‌ವೈ ಅವರು ಮಾತ್ರ ತಮಗೂ ಇದಕ್ಕೂ ಸಂಬಂಧವಿಲ್ಲ ಎನ್ನುವಂತೆ ಕೇಂದ್ರದ ನಾಯಕರತ್ತ ಬೆಟ್ಟು ಮಾಡಿ ತೋರಿಸುತ್ತಿದ್ದಾರೆ. ಕೇಂದ್ರದಲ್ಲಿ ವರಿಷ್ಠರನ್ನು ಭೇಟಿಯಾಗಿ ಬಂದಿರುವ ರಮೇಶ್ ಜಾರಕಿಹೊಳಿ ಅವರು ಬಿಜೆಪಿ ಸರ್ಕಾರ ರಚನೆಗೆ ನೆರವಾದ ಎಲ್ಲರಿಗೂ ಕೂಡ ಸೂಕ್ತವಾದ ಸ್ಥಾನಮಾನ ಸಿಗಬೇಕು ಎಂದು ಹೇಳಿಕೆ ನೀಡುವ ಮೂಲಕ ತಾನು ಬೇರೆ ಪಕ್ಷದಿಂದ ವಲಸೆ ಬಂದವರ ಹಾಗೂ ಯೋಗೇಶ್ವರ್ ಪರ ನಿಂತಿದ್ದೇನೆ ಎಂಬ ಸ್ಪಷ್ಟ ಸಂದೇಶವನ್ನು ನೀಡುತ್ತಿದ್ದಾರೆ. ಇನ್ನೊಂದು ಕಡೆ ಮೂಲ ಬಿಜೆಪಿಗರು ಸಿಎಂ ಬಿಎಸ್‌ವೈ ಮತ್ತು ಪಕ್ಷದ ರಾಜ್ಯಾಧ್ಯಕ್ಷರನ್ನು ಭೇಟಿಯಾಗಿ ತಮಗೆ ಅನುಕೂಲ ಮಾಡಿಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ. ಸದ್ಯ ರಮೇಶ್ ಜಾರಕಿಹೊಳಿ, ಯಡಿಯೂರಪ್ಪ, ನಳಿನ್ ಮತ್ತು ಎಂ.ಪಿ. ರೇಣುಕಾಚಾರ್ಯ ಸುತ್ತ ಸಂಪುಟ ವಿಸ್ತರಣೆಯ “ಲಾಬಿ’ ಸುತ್ತುತ್ತಿದೆ.

ಸಚಿವ ಸಂಪುಟ ಪುನಾರಚನೆ ಬೆಳವಣಿಗೆಯಲ್ಲಿ ಸಚಿವರಾದ ರಮೇಶ್ ಜಾರಕಿಹೊಳಿ ಅವರು ಕೇಂದ್ರ ಬಿಂದುವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಪಕ್ಷಕ್ಕೆ ಬಂದವರಿಗೆ ಸಚಿವ ಸ್ಥಾನ ನೀಡಲೇಬೇಕು ಎಂಬ ಪಟ್ಟನ್ನು ಮುಂದುವರಿಸಿದ್ದಾರೆ. ಬಿ.ಎಲ್. ಸಂತೋಷ್ ಅವರನ್ನು ಭೇಟಿಯಾಗಿ ಕುತೂಹಲ ಹೆಚ್ಚಿಸಿ ಯೋಗೇಶ್ವರ್‌ಗೆ ಸ್ಥಾನ ನೀಡಲೇಬೇಕು ಎನ್ನುವ ಒತ್ತಡವನ್ನು ಹೇರುತ್ತಿದ್ದಾರೆ. ಆದರೆ ಇದನ್ನು ಎಂ.ಪಿ.ರೇಣುಕಾಚಾರ್ಯ, ರಾಜು ಗೌಡ ಅವರ ಸದಸ್ಯರು ಒಪ್ಪದೆ, ಸೋತಿರುವವರಿಗೆ ಅಧಿಕಾರ ಕೊಡಬಾರದೆಂದು ಆಗ್ರಹಿಸಿದ್ದಾರೆ.

ಆದರೆ ಯಡಿಯೂರಪ್ಪ ತನ್ನ ಸಂಪುಟದಲ್ಲಿ ವಲಸಿಗರು, ಮೂಲ ಬಿಜೆಪಿಯ ಇನ್ನಷ್ಟು ಮಂದಿಗೆ ಸ್ಥಾನ ಕಲ್ಪಿಸಿ ಮಾತು ಉಳಿಸಿಕೊಳ್ಳುವ ಲೆಕ್ಕಾಚಾರದಲ್ಲಿದ್ದಾರೆ. ಇನ್ನೊಂದೆಡೆ ಕೇಂದ್ರದ ವರಿಷ್ಠರ ಸೂಚನೆಯ ನಿರೀಕ್ಷೆಯಲ್ಲಿರುವುದಾಗಿ ಸದ್ಯಕ್ಕೆ ಜಾರಿಕೊಂಡಿದ್ದಾರೆ. ಇನ್ನೊಂದೆಡೆ ಅವರ ಆಪ್ತ ಬಳಗದಲ್ಲಿ ಇರುವವರು ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕಟೀಲ್ ಅವರನ್ನು ಭೇಟಿಯಾಗಿ ಕೆಲವು ಹಾಲಿ ಸಚಿವರನ್ನು ಕೈಬಿಡಬೇಕು ಎಂಬುದಾಗಿ ೪೦ಕ್ಕೂ ಹೆಚ್ಚು ಶಾಸಕರ ಒತ್ತಾಯವಿದೆ ಎಂಬ ಮಾಹಿತಿ ರವಾನಿಸಿದ್ದಾರೆ.

LEAVE A REPLY

Please enter your comment!
Please enter your name here