ಹಾವಿನ ಜೊತೆ ಸರಸ ಸರಿಯಿಲ್ಲ ಎಂಬ ಮಾತಿದೆ. ಆದರೆ ಇಲ್ಲೊಬ್ಬ ಭೂಪ ಹಾವಿಗೆ ಮುತ್ತು ಕೊಡುವ ಸಾಹಸ ಮಾಡಿ ಕೊನೆಗೆ ಹಾವಿನಿಂದ ಸರಿಯಾಗಿ ಮುತ್ತು ಪಡೆದು ತುಟಿ ಊದಿಸಿಕೊಂಡಿದ್ದಾನೆ.
ಶಿವಮೊಗ್ಗದ ಹೊಸಮನೆ ಬಡಾವಣೆಯ ಅಂಗಡಿಯೊಂದರ ಬಳಿ ಹಾವು ಕಾಣಿಸಿಕೊಂಡಿದೆ. ಸ್ಥಳೀಯರು ಹಾವನ್ನು ಹೊಡೆಯದೆ ಸೋನು ಎಂಬಾತನನ್ನು ಹಾವು ಹಿಡಿಯಲು ಕರೆಸಿದ್ದಾರೆ. ಆದರೆ ಸೋನು ಆ ಸ್ಥಳಕ್ಕೆ ಕುಡಿದು ಬಂದಿದ್ದಾನೆ. ಸುಮ್ಮನೆ ಹಾವು ಹಿಡಿಯದೆ, ಹಾವಿಗೆ ಮುತ್ತು ಕೊಡಲು ಪ್ರಯತ್ನಿಸಿದ್ದಾನೆ. ಮೊದಲು ತಾಳ್ಮೆಯಿಂದ ಸುಮ್ಮನೆ ಇದ್ದ ಹಾವು ಸೋನುವಿಗೆ ಸಮಯ ನೋಡಿ ತುಟಿಗೆ ಸರಿಯಾಗಿ ಕಚ್ಚಿದೆ.
ಹಾವು ಕಚ್ಚಿದ ಕೂಡಲೇ ಸೋನುವಿಗೆ ತುಟಿಯಿಂದ ರಕ್ತ ಬರಲಾರಂಭಿಸಿದೆ. ಕೂಡಲೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿ ಪ್ರಥಮ ಚಿಕಿತ್ಸೆ ಕೊಡಿಸಲಾಗಿದೆ. ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಕೊಡಿಸಲು ಮೆಗ್ಗಾನ್ ಆಸ್ಪತ್ರೆಗೆ ಸೇರಿಸಲಾಗಿದೆ.