ಕೊಚ್ಚಿ: ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶ ಕುರಿತು ದೇಶಾದ್ಯಂತ ಸಾಕಷ್ಟು ಚರ್ಚೆಗಳು ನಡೆಯುತ್ತಿರುವ ಈ ಸಂದರ್ಭದಲ್ಲಿ ಖ್ಯಾತ ಗಾಯಕ ಕೆ.ಜೆ ಯೇಸುದಾಸ್ ಕೂಡ ಈ ಬಗ್ಗೆ ಮಾತನಾಡಿದ್ದು, ಮಣಿಕಂಠನ ದರ್ಶನಕ್ಕೆ ಮಹಿಳೆಯರು ಹೋಗಬಾರದು ಎಂದು ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಯೇಸುದಾಸ್, ಮಹಿಳೆಯರು ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಆಗಮಿಸುವುದರಿಂದ ಅಯ್ಯಪ್ಪ ಭಕ್ತರ ಮನಸ್ಸು ವಿಚಲಿತವಾಗುತ್ತದೆ. ಉದಾಹರಣೆಗೆ ಅಯ್ಯಪ್ಪನ ಸನ್ನಿಧಾನಕ್ಕೆ ಸುಂದರ ಯುವತಿಯೊಬ್ಬಳು ಆಧುನಿಕ ಉಡುಗೆ ತೊಟ್ಟು ಬಂದರೆ ಅಯ್ಯಪ್ಪ ಸ್ವಾಮಿ ಕಣ್ತೆರೆದು ನೋಡಲ್ಲ, ಆದರೆ ಅಯ್ಯಪ್ಪನ ಭಕ್ತರು ಆಕೆಯತ್ತ ದೃಷ್ಟಿ ಹರಿಸುತ್ತಾರೆ. ಹಾಗಾಗಿ ಅವರ ಮನಸ್ಸು ವಿಚಲಿತವಾಗುವ ಸಾಧ್ಯತೆ ಹೆಚ್ಚು ಎಂದಿದ್ದಾರೆ.
ದೇವಾಲಯಕ್ಕೆ ಆಗಮಿಸುವ ಅಯ್ಯಪ್ಪ ಭಕ್ತರ ನೇಮ- ನಿಷ್ಠೆ ಪದ್ಧತಿಗಳ ಮೂಲಕ ಒಳ್ಳೆಯ ಉದ್ದೇಶದಿಂದ ಬರುತ್ತಾರೆ. ಹಾಗಾಗಿ ಯುವತಿಯರು ದೇವಾಲಯಕ್ಕೆ ಹೋಗುವುದರಿಂದ ಅಯ್ಯಪ್ಪ ಭಕ್ತರನ್ನು ಪ್ರಚೋದಿಸಿದಂತಾಗುತ್ತದೆ. ಹಾಗಾಗಿ ಭಕ್ತರನ್ನು ಪ್ರಚೋದಿಸಬೇಡಿ ಎಂಬುದಷ್ಟೇ ನನ್ನ ಮನವಿ. ಇದೇ ಕಾರಣಕ್ಕೆ 50 ವರ್ಷಕ್ಕಿಂತ ಕಿರಿಯ ಮಹಿಳೆಯರು ಅಯ್ಯಪ್ಪ ದೇವಾಲಯಕ್ಕೆ ಹೋಗಬಾರದು ಎಂಬುದು ನನ್ನ ಅಭಿಪ್ರಾಯ ಎಂದಿದ್ದಾರೆ.
ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಎಲ್ಲಾ ವಯೋಮಾನದ ಮಹಿಳೆಯರು ಪ್ರವೇಶ ಮಾಡಬಹುದು ಎಂದು ಸುಪ್ರೀಂ ಕೋರ್ಟ್ 2018 ಸೆಪ್ಟೆಂಬರ್ 28ರಂದು ತೀರ್ಪು ನೀಡಿತ್ತು. ಹಲವರು ಸುಪ್ರೀಂ ತೀರ್ಪನ್ನು ಸ್ವಾಗತಿಸಿದ್ದರೆ ಇನ್ನು ಹಲವರು ತೀರ್ಪಿನ ಕುರಿತು ಆಕ್ಷೇಪ ವ್ಯಕ್ತಪಡಿಸಿ ಮರುಪರಿಶೀಲನಾ ಅರ್ಜಿ ಸಲ್ಲಿಸಲಾಗಿತ್ತು.
ಕಳೆದ ವಾರ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಪಂಚ ನ್ಯಾಯಮೂರ್ತಿಗಳ ಪೀಠ, ಇದು ಭಾವನಾತ್ಮಕ ವಿಚಾರವಾಗಿರುವುದರಿಂದ ಸಧ್ಯಕ್ಕೆ ಯಾವುದೇ ಆದೇಶ ನೀಡಲ್ಲ ಎಂದು ತಿಳಿಸಿ, 2018ರ ತೀರ್ಪಿನ ಬಗ್ಗೆ ವಿಸ್ತೃತ ವಿಚಾರಣೆ ನಡೆಯಬೇಕಿದೆ. ಹೀಗಾಗಿ ಏಳು ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾವಣೆ ಮಾಡಿತ್ತು.