ಸೆಂಚುರಿ ಸ್ಟಾರ್ ಅಭಿನಯದ ‘ಟಗರು’ ಸಿನಿಮಾದ ಹಾಡುಗಳು ಎಂದೆಂದಿಗೂ ಎಲ್ಲರ ಮೋಸ್ಟ್ ಫೇವರೆಟ್. ಅದರಲ್ಲೂ ಶಿವರಾಜ್ಕುಮಾರ್ ಅವರ ಮ್ಯಾನರಿಸಂ, ಇಮೇಜ್ಗೆ ತಕ್ಕಂತೆ ಹಾಡಲಾದ ‘ಟಗರು ಬಂತು..ಟಗರು’ ಹಾಡು ಸಖತ್ ಕ್ರೇಜ್ ಹುಟ್ಟುಹಾಕಿತ್ತು.
ತಮಿಳು ಜಾನಪದ ಗಾಯಕ ಆಂಟೋನಿ ದಾಸನ್ ಈ ಹಾಡಿನ ಗಾಯಕ. ಇದೀಗ ‘ಸಲಗ’ ಚಿತ್ರಕ್ಕಾಗಿ ಮತ್ತೊಂದು ಹಾಡು ಹಾಡಿದ್ದಾರೆ. ದುನಿಯಾ ವಿಜಯ್ ಸಿನಿಮಾವೊಂದನ್ನು ನಿರ್ದೇಶಿಸುತ್ತಿದ್ದಾರೆ ಎಂದು ತಿಳಿದಾಗಿನಿಂದ ಈ ಸಿನಿಮಾ ಮೇಲೆ ಸ್ಯಾಂಡಲ್ವುಡ್ ಹಾಗೂ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಸಿನಿಮಾದ ಮೇಕಿಂಗ್ ವಿಡಿಯೋ ಕೂಡಾ ಬಿಡುಗಡೆಯಾಗಿದ್ದು ದಿನದಿಂದ ದಿನಕ್ಕೆ ಚಿತ್ರದ ಮೇಲಿನ ಕ್ರೇಜ್ ಹೆಚ್ಚಾಗುತ್ತಿದೆ. ‘ನಾಕು ಕ್ವಾರ್ಟರ್ ಕುಡ್ದ್ರೂ…’ ಎಂಬ ಸಾಲಿನಿಂದ ಆರಂಭವಾಗುವ ಈ ಮಾಸ್ ಗೀತೆಯನ್ನು ಆಂಟೋನಿ ದಾಸನ್ ಹಾಡಿದ್ದಾರೆ. ಚರಣ್ರಾಜ್ ಈ ಹಾಡಿಗೆ ಸಂಗೀತ ನೀಡಿದ್ದಾರೆ.
ಈ ಹಾಡಿನ ಲಿರಿಕಲ್ ವಿಡಿಯೋ ನಾಳೆ ಬೆಳಗ್ಗೆ 10 ಗಂಟೆಗೆ ಬಿಡುಗಡೆಯಾಗುತ್ತಿದ್ದು ಆಂಟೋನಿ ಕೂಡಾ ತಮ್ಮ ಫೇಸ್ಬುಕ್ನಲ್ಲಿ ಈ ಹಾಡಿನ ಬಗ್ಗೆ ಬರೆದುಕೊಂಡಿದ್ದಾರೆ. ಈ ಹಾಡಿನ ರೆಕಾರ್ಡಿಂಗ್ ವೇಳೆ ಮಾಡಲಾದ ವಿಡಿಯೋ ತುಣುಕೊಂದು ವೈರಲ್ ಆಗಿದ್ದು ಸಂಗೀತ ನಿರ್ದೇಶಕ ಚರಣ್ರಾಜ್ ಕೂಡಾ ಆಂಟೋನಿ ಜೊತೆ ಹೆಜ್ಜೆ ಹಾಕಿದ್ದಾರೆ. ಟಗರು ಟೈಟಲ್ ಹಾಡಿನಂತೆ ಈ ‘ಸಲಗ’ ಚಿತ್ರದ ಹಾಡು ಕೂಡಾ ಫೇಮಸ್ ಆಗುವ ಲಕ್ಷಣಗಳು ಕಾಣುತ್ತಿವೆ. ಇನ್ನು ‘ಟಗರು’ ಸಿನಿಮಾ ನಿರ್ಮಿಸಿದ್ದ ಕೆ.ಪಿ. ಶ್ರೀಕಾಂತ್ ಅವರೇ ‘ಸಲಗ’ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ವಿಜಯ್ ಜೊತೆಗೆ ಡಾಲಿ ಧನಂಜಯ್, ಸಂಜನಾ ಆನಂದ್, ಕಾಕ್ರೋಚ್ ಸುಧೀಂದ್ರ ಹಾಗೂ ಇನ್ನಿತರರು ಸಿನಿಮಾದಲ್ಲಿ ನಟಿಸಿದ್ದು ಫೆಬ್ರವರಿಯಲ್ಲಿ ‘ಸಲಗ’ ನಿಮ್ಮ ಮುಂದೆ ಬರಲಿದ್ದಾನೆ.