“ಮೈತ್ರಿ ಸರ್ಕಾರವನ್ನು ಉರುಳಿಸಲು ಸಿದ್ದರಾಮಯ್ಯ ತೆರೆಮರೆಯಲ್ಲಿ ಭಾರೀ ಕಸರತ್ತು ನಡೆಸಿದ್ರು. ಅವರ ಆಪ್ತ ಶಾಸಕರನ್ನು ರಾಜೀನಾಮೆ ಕೊಡಿಸಿ, ಮುಂಬೈಗೆ ಹೋಗಲು ವಿಮಾನ ಹತ್ತಿಸಿದ್ದು ಮಾಜಿ ಸಿಎಂ ಸಿದ್ದರಾಮಯ್ಯ” ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದ್ದಾರೆ.

ಇನ್ನು ನಾನು ಸಿಎಂ ಆಗಿದ್ದು ಸಿದ್ದರಾಮಯ್ಯ ಅವರಿಗೆ ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ. ತಮ್ಮ ಆಪ್ತ ಶಾಸಕರನ್ನು ಸರ್ಕಾರದ ವಿರುದ್ದ ಎತ್ತಿಕಟ್ಟುವ ಕೆಲಸ ಮಾಡಿಕೊಂಡು ಬಂದಿದ್ದರು. ಕಾಂಗ್ರೆಸ್ ಶಾಸಕರ ರಾಜೀನಾಮೆಗೂ ಸಿದ್ದರಾಮಯ್ಯ ನೇರ ಕಾರಣ ಎಂದು ಸಿದ್ದರಾಮಯ್ಯ ವಿರುದ್ದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ನಾನು ಸಿಎಂ ಆಗುವುದೇ ಸಿದ್ದರಾಮಯ್ಯ ಅವರಿಗೆ ಇಷ್ಟವಿರಲಿಲ್ಲ. ಹೀಗಾಗಿ ಹಂತಹಂತವಾಗಿ ಸರ್ಕಾರ ಅಸ್ಥಿರಗೊಳಿಸುವ ಕೆಲಸವನ್ನು ಸಿದ್ದರಾಮಯ್ಯ ಮಾಡುತ್ತಿದ್ದರು. ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕೆಂಬ ಹುನ್ನಾರ ನಡೆಸಿದ್ದರು. ಮುಖ್ಯಮಂತ್ರಿಯಾಗಿ ನಾನು ಕೈಗೊಂಡ ತೀರ್ಮಾನ ಅವರಿಗೆ ಸಹಿಸಲು ಸಾಧ್ಯವಾಗಲಿಲ್ಲ. ಇನ್ನು ಮೈತ್ರಿ ಸರ್ಕಾರ ಮುಂದುವರೆಯಬೇಕೆಂಬುದು ಕಾಂಗ್ರೆಸ್ ಹೈಕಮಾಂಡ್ ತೀರ್ಮಾನವಾಗಿತ್ತು. ಆದರೆ ಸಿದ್ದರಾಮಯ್ಯಗೆ ಅದು ಇಷ್ಟವಿರಲಿಲ್ಲ. ಹೀಗಾಗಿಯೇ ಮೈತ್ರಿ ಸರ್ಕಾರದ ಪತನಕ್ಕೆ ನಿರಂತರ ಪ್ರಯತ್ನ ಮಾಡಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.