“ವಿಪಕ್ಷ ಸ್ಥಾನ ಎಲ್ಲಿ ಅಲ್ಲಾಡಿ ಹೋಗುತ್ತೋ ಅನ್ನೋ ಭಯ ಇದೆ ಸಿದ್ದರಾಮಯ್ಯಗೆ”..!

0
58

ಹಾವೇರಿ: ಬೈ ಎಲೆಕ್ಷನ್ ನಲ್ಲಿ ಸಿದ್ದರಾಮಯ್ಯ ವರ್ಸಸ್ ಆಪ್ತ ಬಳಗದ ಜಟಾಪಟಿ ಭಾರೀ ಸದ್ದು ಮಾಡುತ್ತಿದೆ. ಚುನಾವಣೆಗೆ ಇನ್ನೊಂದು ದಿನ ಬಾಕಿ ಇದೆ. ಇದನ್ನೂ ಮಿಸ್ ಮಾಡಿಕೊಳ್ಳದೇ ಬಳಸಿಕೊಂಡ ಕೃಷಿ ಸಚಿವರು, ಅಲಿಯಾಸ್ ಒಂದು ಕಾಲದ ಸಿದ್ದರಾಮಯ್ಯ ಆಪ್ತ ಶಾಸಕ ಬಿಸಿ ಪಾಟೀಲ್, ಸಿದ್ದರಾಮಯ್ಯಗೆ ತನ್ನ ವಿರೋಧ ಪಕ್ಷದ ಸ್ಥಾನ ಎಲ್ಲಿ ಅಲ್ಲಾಡಿ ಹೋಗುತ್ತದೆಯೋ ಎಂಬ ಭಯವಿದೆ ಎಂದು ಟೀಕೆ ಮಾಡಿದರು. ಹಾವೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿ.ಸಿ.ಪಾಟೀಲ್, ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದರಿಂದ ಸಿದ್ದರಾಮಯ್ಯ ವಿಪಕ್ಷ ನಾಯಕರಾಗಲು ಸಾಧ್ಯವಾಯಿತು. ಹೆಚ್.ಡಿ.ಕುಮಾರಸ್ವಾಮಿ ಜೊತೆ ಮೈತ್ರಿ ಸರ್ಕಾರದಲ್ಲಿಯೇ ಇದ್ದಿದ್ದರೆ ಸಿದ್ದರಾಮಯ್ಯ ಬಾಡಿಗೆ ಮನೆಯಲ್ಲಿದ್ದಂತಿರಬೇಕಾಗಿತ್ತು. ಇದೀಗ ಅವರಿಗೆ ವಿರೋಧ ಪಕ್ಷದ ಸ್ಥಾನ ಎಲ್ಲಿ ಅಲ್ಲಾಡಿಬಿಡುತ್ತೋ ಎಂಬ ಭಯ ಇದೆ ಎಂದು ವ್ಯಂಗ್ಯ ಮಾಡಿದರು.

“ಸಿದ್ದರಾಮಯ್ಯಗೆ ಸಂಸ್ಕೃತಿ ಇಲ್ಲ”
ಮನುಷ್ಯರನ್ನು ನಾಯಿಗೆ ಹೋಲಿಸುವುದು, ಬಂಡೆಗೆ ಹೋಲಿಸುವುದು, ಹುಲಿ, ಟಗರು ಎನ್ನುವುದು ಸಂಸ್ಕೃತಿಯಿಲ್ಲದ್ದು. ಸಿದ್ದರಾಮಯ್ಯ ಈ ರೀತಿ ಪದಗಳನ್ನು ಬಳುಸುವುದು ಸಂಸ್ಕೃತಿಗೆ ತಕ್ಕದ್ದಲ್ಲ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿ ತಿರುಗೇಟು ನೀಡಿದರು. ಮನುಷ್ಯರನ್ನು ರಾಜಕೀಯವಾಗಿ ಸಮಾಧಿ ಮಾಡುವುದು, ನಾಯಿ ಎನ್ನುವುದು ಸಿದ್ದರಾಮಯ್ಯ ಹಾಗೂ ಡಿಕೆಶಿ ಘನತೆಗೆ ಸೂಕ್ತವಲ್ಲ.ನಾಯಿಗೆ ನಿಯತ್ತು ಇರುತ್ತದೆ.ಇವರು ಸಾಕಿರುವ ನಾಯಿಗಳೆಲ್ಲ ಬಹುಶಃ ಕಚ್ಚುವ ನಾಯಿಗಳೇ ಇರಬೇಕು.ಒಳ್ಳೆಯ ನಾಯಿಗಳನ್ನು ಸಾಕಿದ್ದರೆ ಈ ರೀತಿ ದುಃಸ್ಥಿತಿ ಇವರಿಗೆ ಬರುತ್ತಿರಲಿಲ್ಲ.ಹದಿನೇಳು ಜನ ರಾಜಕೀಯ ಸಮಾಧಿಯಾಗುತ್ತಾರೆ ಎಂದು ಡಿಕೆಶಿ ಹೇಳಿದ್ದರು.ಆದರೆ ನಿಜವಾಗಿಯೂ ಸಮಾಧಿಯಾಗುತ್ತಿರುವವರು ಯಾರು ಎಂಬುದನ್ನು ಅರಿಯಬೇಕು ಎಂದು ಮಾರ್ಮಿಕವಾಗಿ ನುಡಿದರು.

“ಯಡಿಯೂರಪ್ಪ ನೇತೃತ್ವದಲ್ಲಿಯೇ ಮುಂದಿನ ಚುನಾವಣೆ”
ಯಡಿಯೂರಪ್ಪ ನೇತೃತ್ವದಲ್ಲಿಯೇ ಮುಂದಿನ ಚುನಾವಣೆ ನಡೆಯಲಿದೆ. ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇನ್ನುಳಿದಿರುವ ಎರಡುವರೆ ವರ್ಷ ಯಾರೂ ಸಹ ಅಲುಗಾಡಿಸಲು ಸಾಧ್ಯವಿಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದರು.

“ತಿರುಕನ ಕನಸ್ಸು ಕಾಣುತ್ತಿದ್ದಾರೆ”
ಸುಮ್ಮನೆ ಪಕ್ಷದಲ್ಲಿ ಗೊಂದಲ ಸೃಷ್ಟಿಸುವುದು ತಿರುಕನ ಕನಸ್ಸು, ಹಗಲು ಗನಸು ಕಾಣುವುದನ್ನು ಕೆಲವರು ಮಾಡುತ್ತಿದ್ದಾರೆ. ಅದೆಂದೂ ಸಾಧ್ಯವಿಲ್ಲ. ಯಡಿಯೂರಪ್ಪ ನೇತೃತ್ವದಲ್ಲಿಯೇ ಸ್ಥಳೀಯ ಸಂಸ್ಥೆ ಚುನಾವಣೆಯಿಂದ ಹಿಡಿದು ಎಲ್ಲಾ ಚುನಾವಣೆಗಳು ನಡೆಯಲಿವೆ ಎಂದರು.

LEAVE A REPLY

Please enter your comment!
Please enter your name here