ಸಿದ್ದರಾಮಯ್ಯನವರ ಅನಿವಾರ್ಯತೆ ಮತ್ತು ಕಾಂಗ್ರೆಸ್..!

0
113
Loading...

ಕಾಂಗ್ರೆಸ್ ಹಿರಿಯರು ಲೋಕಸಭಾ ಚುನಾವಣೆಯಲ್ಲಿ ಸೋತ ಮೇಲೆ ತುಂಬ ಹತಾಶರಾಗಿರುವುದು ಸಹಜ. ಆದರೆ ಇಷ್ಟೊಂದು ಸಹನೆ ಕಳೆದುಕೊಳ್ಳಬಾರದಿತ್ತು. ಪಕ್ಷ ಸಂಘಟನೆಯೊಂದಿಗೆ ಐದು ವರ್ಷ ಪೂರ್ಣ ಪ್ರಮಾಣದ ಸರಕಾರ ನಡೆಸಿದ ಸಿದ್ದರಾಮಯ್ಯನವರು ಖಂಡಿತ ಮಾಸ್ ಲೀಡರ್. ಅವರ ವಿರುದ್ಧ ಹತ್ತಾರು ಹಿರಿಯ ತಲೆಗಳು ಒಗ್ಗಟ್ಟಾಗಿ ಇಷ್ಟೊಂದು ತೀಕ್ಷ್ಣವಾಗಿ ಮಾತಾಡಿರುವುದೇ ಅವರ ಸಾಮರ್ಥ್ಯಕ್ಕೆ ಸಾಕ್ಷಿ. ಹೈಕಮಾಂಡ್ ಜೊತೆ ವ್ಯವಹಾರ ಸರಿಯಾಗಿಟ್ಟುಕೊಂಡು, ಜನಪರ ಸರಕಾರ ನಡೆಸೋ ಜವಾಬ್ದಾರಿ ಹೊರುವ‌ ಸಾಮರ್ಥ್ಯ ಇಲ್ಲದ ಈ ಹಳೇ ಹುಲಿಗಳು ಹೀಗೆ ಗಾಯಗೊಂಡವರಂತೆ ಏಕವಚನದಲ್ಲಿ ಮಾತನಾಡುವಷ್ಟು ಹತಾಶರಾಗಬಾರದಿತ್ತು. ಇದು ಸಿದ್ದರಾಮಯ್ಯ ಇನ್ನೂ ಬೆಳೆಯಲು ಕಾರಣವಾಗಿದೆ.

ಅಕಸ್ಮಾತ್ ವಿರೋಧ ಪಕ್ಷದ ನಾಯಕ ಸ್ಥಾನ ತಪ್ಪಿದರೆ ಸಿದ್ದು ಸುಮ್ಮನಿರುವ ಮನುಷ್ಯ ಅಲ್ಲ.
ಮುಂಬರುವ ಬೈ ಎಲೆಕ್ಷನ್ ಸಮಯದಲ್ಲಿ ಅವರ ಪ್ರಭಾವ ತೋರಿಸಿಯೇ ತೋರಿಸುತ್ತಾರೆ.
ಸಮ್ಮಿಶ್ರ ಸರಕಾರ ಮನೆಗೆ ಕಳಿಸಲು ಯಾರು ಕಾರಣ ಎಂಬುದು ಓಪನ್ ಸಿಕ್ರೆಟ್. ಚಾಣಾಕ್ಷ ರಾಜಕಾರಣ, ತೂಕಬದ್ಧ ಮಾತುಗಳು, ಆತ್ಮವಿಶ್ವಾಸದ ಒರಟು ಬಾಡಿ ಲ್ಯಾಂಗ್ವೇಜ್ ಸಿದ್ದರಾಮಯ್ಯನವರ ಶಕ್ತಿ ಮತ್ತು ಆಕರ್ಷಣೆ. ಜನ ಅವರ ಈ ಜವಾರಿ ದೇಸಿಯ ಶೈಲಿಗೆ ಒಗ್ಗಿ ಹೋಗಿದ್ದಾರೆ.
ಕೊಂಚ ಜಾತಿವಾದಿ ಎಂಬ ಆರೋಪ ಬಿಟ್ಟರೆ ಉಳಿದ ವಿಷಯದಲ್ಲಿ ಜೆಮ್. ಹಾಗಂತ ಬರೀ ಜಾತಿ ಲೆಕ್ಕಾಚಾರದಲ್ಲಿ ಕಳೆದು ಹೋಗುವ ಸಣ್ಣತನವೂ ಇಲ್ಲ.

ಕಾನೂನು, ಅರ್ಥಶಾಸ್ತ್ರ, ಭಾಷೆ ಮತ್ತು ಸಾಮಾಜಿಕ ಕಾಳಜಿಯ ಆಳ ಅರಿತಿರುವ ಅವರ ಸಮನಾಗಿರುವ ನಾಯಕ ಸದ್ಯಕ್ಕಂತು ಕಾಂಗ್ರೆಸ್ ಪಕ್ಷದಲ್ಲಿ ಕಾಣಿಸುತ್ತಿಲ್ಲ. ಬಿಜೆಪಿಯ ಆಂತರಿಕ ಜಗಳ ಉಪಯೋಗಿಸಿಕೊಂಡು ಪಕ್ಷ ಕಟ್ಟುವ ಜಾಣತನ ಸಿದ್ರಾಮಯ್ಯನವರಿಗಿದೆ. ಜಾತಿ ಮತ್ತು ಹಣಬಲ ಹೊಂದಿದ್ದ ಡಿಕೆ ಸೋದರರ ಅನುಪಸ್ಥಿತಿಯಲ್ಲಿ ಮತ್ತೊಬ್ಬ ನಾಯಕನನ್ನು ಸೃಷ್ಟಿ ಮಾಡಲು ಕಾಂಗ್ರಸ್ ಪಕ್ಷಕ್ಕೆ ಸಾಧ್ಯವಿಲ್ಲ. ಮಾಸ್ ಲೀಡರ್ ಆಗಿ ಬೆಳೆಯುವ ಎತ್ತರದ ವ್ಯಕ್ತಿತ್ವ ಹುಡುಕಾಡಿದರು ಸಿಗುವುದಿಲ್ಲ.

ಹಳೆ ಕಾಂಗ್ರೆಸ್ ಮತ್ತು ವಲಸಿಗರು ಎಂಬ ಆರೋಪದಲ್ಲಿ ಈಗ ಯಾವ ಹುರುಳಿಲ್ಲ. ಚುನಾವಣಾ ರಾಜಕಾರಣದಲ್ಲಿ ಸೋಲು,ಗೆಲುವು ಸಹಜ. ಚಾಮುಂಡಿಯಲ್ಲಿ ಅವರು ಸೋಲಲಿಲ್ಲ ತುಂಬ ಕಷ್ಟ ಪಟ್ಟು ವ್ಯವಸ್ಥಿತವಾಗಿ ಸೋಲಿಸಲಾಯಿತು. ಅದರ ಪ್ರತಿಫಲ ಲೋಕಸಭಾ ಚುನಾವಣೆಯಲ್ಲಿ ಅನುಭವಿಸಿದ್ದೂ ಆಯಿತು.ಅಲ್ಲಿಗೆ ಹಳೆ ಲೆಕ್ಕ ಚುಕ್ತಾ ಆಯಿತು. ಈಗ ಏನಿದ್ದರೂ ಹೊಸ ಆಟ ಶುರು. ಇಲ್ಲಿಯೂ ಸಿದ್ದರಾಮಯ್ಯ ವಿರುದ್ಧ ಸಮರ ಸಾರಿದರೆ ಪೆಟ್ಟು ಬೀಳುವುದು ಕಾಂಗ್ರೆಸ್ ಪಕ್ಷಕ್ಕೆ ಹೊರತು ಅವರಿಗಲ್ಲ.

ಸಿದ್ದು_ಯಾಪಲಪಾರವಿ.

Loading...

LEAVE A REPLY

Please enter your comment!
Please enter your name here