ತೋಂಟದಾರ್ಯ ಸಿದ್ಧಲಿಂಗ ಶ್ರೀಗಳ‌ ರಾಷ್ಟ್ರೀಯ ಪುರಸ್ಕಾರ: ಈ.ಕೃಷ್ಣಪ್ಪ.!

0
139
Loading...

ಇಂದು ಅನೇಕ ಖಾಸಗಿ ಚಾನೆಲ್ ಗಳು ಆರ್ಥಿಕ ಸಂಕಷ್ಟದಿಂದ ನರಳುವುದು ಗೊತ್ತಿದ್ದರೂ ಬಸವಾದಿ ಶರಣರ ಮೇಲಿನ ಅಪಾರ ಶ್ರದ್ಧೆಯಿಂದ ಬೆಂಗಳೂರಿನ ಕಾರ್ಪೋರೇಟರ್ ಆಗಿದ್ದ ಈ.ಕೃಷ್ಣಪ್ಪನವರಿಗೆ ಬಸವಣ್ಣನವರ ಹೆಸರಿನಲ್ಲಿ ಧಾರ್ಮಿಕ ಚಾನಲ್ ಆರಂಭಿಸುವ ಕನಸು. ಕನಸುಗಾರರಿಗೆ ಸಾತ್ವಿಕ ಛಲವಿದ್ದರೆ ಸಾಕು‌ ಎಲ್ಲ ತಾನೇ ತಾನಾಗಿ ಮೈದಾಳಿಬಿಡುತ್ತವೆ. ಆಧ್ಯಾತ್ಮಿಕ ವಾಹಿನಿಗಳ ಬೆಳವಣಿಗೆ ಗಮನಿಸಿದ ಕೃಷ್ಣಪ್ಪ ಅಲ್ಲಿ ಯಾವುದೇ ರೀತಿಯ ಜಾಹಿರಾತುಗಳ ಲಾಭ ಇರುವುದಿಲ್ಲ ಎಂಬ ಕಟು ಸತ್ಯ ಅರ್ಥಮಾಡಿಕೊಂಡರು. ಚಾನಲ್ ಬಸವಣ್ಣನವರ ಘನತೆಗೆ ತಕ್ಕಂತೆ ಇರಲಿ ಎಂಬ ಹಿರಿದಾದ ಉದ್ದೇಶ ಇಟ್ಟುಕೊಂಡು ಉಪಗ್ರಹ ಆಧಾರಿತ ಸೆಟ್ಲೈಟ್ ಚಾನೆಲ್ ಆರಂಭಿಸಲು ನಿರ್ಧರಿಸಿದರು.

ಆರ್ಥಿಕವಾಗಿ ಇದು ತುಂಬ ಅನಾಹುತಕಾರಿ ರಿಸ್ಕ್ ಎಂದು ಗೊತ್ತಿದ್ದರೂ ನಂಬಿದ ಬಸವ ತತ್ವ ಮೌಲ್ಯಗಳು ತಮ್ಮ‌ ಕೈ ಬಿಡುವುದಿಲ್ಲ ಎಂಬ ಭರವಸೆಯಿಂದ ಮುನ್ನುಗ್ಗಿಬಿಟ್ಟರು. ಮುಂದೆ ನಡೆದ ಘಟನೆಗಳು ನಮ್ಮ ಕಣ್ಣೆದುರು ಇವೆ. ಕೋಟ್ಯಾಂತರ ರೂಪಾಯಿ ಸಾಲ ಮಾಡಿ, ಗಳಿಸಿದ ಎಲ್ಲ ಆಸ್ತಿ ಮಾರಿ ಚಾನೆಲ್ ನಡೆಸಿಕೊಂಡು ಹೊರಟಿದ್ದಾರೆ. ನಾಡನ್ನೆಲ್ಲ ಸುತ್ತಿ ಬಸವ ತತ್ವಗಳಲ್ಲಿ ನಂಬಿಕೆ ಇಟ್ಟಿರುವ ಸ್ವಾಮಿಗಳು ಮತ್ತು ಭಕ್ತರ ಮುಂದೆ ಅಂಗಲಾಚಿ ಟಿವಿ ಉಳಿಸಲು ಬೇಡಿಕೊಂಡರು. ಆಗ ಬಹುಪಾಲು ಮಠಾಧೀಶರ ನಿರಾಶಾದಾಯಕ ಮಾತುಗಳಿಂದ ಕೃಷ್ಣಪ್ಪ ಸೋತು ಹೋದರು. ಆದರೆ ಗದುಗಿನ ತೋಂಟದಾರ್ಯ ಮಠದ ಡಾ.ಸಿದ್ಧಲಿಂಗ ಮಹಾಸ್ವಾಮಿಗಳು ಕೃಷ್ಣಪ್ಪನವರ ಸಂಕಷ್ಟಕ್ಕೆ ಸ್ಪಂದಿಸಿ ಆರ್ಥಿಕ ನೆರವು ಒದಗಿಸಿ ಆಶಿರ್ವದಿಸಿದರು.

ಶ್ರೀ ಮಠದ ಹಿರಿಯರಾದ ಚನ್ನಯ್ಯ ಹಿರೇಮಠ ಮತ್ತು ಕಾಶಪ್ಪ ಮಂದಾಲಿ ಅವರ ಮೂಲಕ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದಾಗ ಕೃಷ್ಣಪ್ಪ ನಿಟ್ಟುಸಿರು ಬಿಟ್ಟರು. ಕೃಷ್ಣಪ್ಪ ಅಮಾಯಕರು, ಮಾಧ್ಯಮ ಲೋಕದ ಆಳ ವ್ಯವಹಾರದ ಅನುಭವ ಇರದವರು. ಆದರೆ ಅವರ ಬಸವಪ್ರಜ್ಞೆ ಮತ್ತು ನಿಷ್ಠೆ ಅಚಲ. ಅದೇ ನಂಬಿಕೆ ಇಟ್ಟುಕೊಂಡು ಅನೇಕ ಸಂಕಷ್ಟಗಳ ಮಧ್ಯೆ ಚಾನಲ್ ನಡೆಸಿಕೊಂಡು ಹೊರಟಿರುವುದು ಅವರ ಸಾತ್ವಿಕ ಛಲದ ಸಂಕೇತ. ಪೂಜ್ಯ ಶ್ರೀಗಳು ಲಿಂಗೈಕ್ಯರಾಗುವ ಕೆಲ ತಿಂಗಳ ಮೊದಲು,ನನ್ನ ಅಸಂಗತ ಬರಹಗಳು ಪುಸ್ತಕ ನೀಡಲು ಪೂಜ್ಯ ತೋಂಟದಾರ್ಯ ಅಜ್ಜಾ ಅವರ ಹತ್ತಿರ ಹೋದಾಗ ಬಸವ ಟಿವಿ ಮತ್ತು ಕೃಷ್ಣಪ್ಪ ಅವರ ಸಾಹಸವನ್ನು ವಿವರಿಸಿ, ಅಲ್ಲಿ ಕಾರ್ಯಕ್ರಮ ನೀಡುವಂತೆ ಸೂಚಿಸಿದರು. ಅವರ ಅಗಲಿಕೆಯ ನಂತರ ಪೂಜ್ಯರ ಸಾಧನೆಗಳ ಕುರಿತು ಸ್ವತಃ ಕೃಷ್ಣಪ್ಪ ಅವರೇ ನನ್ನ ಸಂದರ್ಶನ ಮಾಡಿದರು.

ಒಟ್ಟು ಏಳು ಕಂತುಗಳಲ್ಲಿ ಪೂಜ್ಯರ ಸಾಧನೆ ಕುರಿತು ನನ್ನ ಅನುಭವ ಹಂಚಿಕೊಳ್ಳುವ ಅವಕಾಶ ಕಲ್ಪಿಸಿದಾಗ ನಾನು ಅವರ ಹೋರಾಟವನ್ನು ಹತ್ತಿರದಿಂದ ಕಾಣಲು ಸಾಧ್ಯವಾಯಿತು. ನಂತರ ವಚನ ಮಾರ್ಗ ಮಾಲಿಕೆಯಲ್ಲಿ ವಚನ ವಿಶ್ಲೇಷಣೆ ಮತ್ತು ಸಂದರ್ಶನ ಮುಂದುವರೆಸಿಕೊಂಡು ಸಾಗಿದ್ದೇನೆ. ಪೂಜ್ಯ ತೋಂಟದಾರ್ಯ ಅಜ್ಜಾ ಅವರ ಆಶಯದಂತೆ ಇಂದಿನ ಪೀಠಾಧಿಪತಿಗಳಾದ ಪೂಜ್ಯ ತೋಂಟದ ಸಿದ್ಧರಾಮ ಸ್ವಾಮಿಗಳು ಮತ್ತು ಆಡಳಿತಾಧಿಕಾರಿ ಪ್ರೊ.ಶಿವಾನಂದ ಪಟ್ಟಣಶೆಟ್ಟಿ ಅವರು ತೋಂಟದ ಸಿದ್ಧಲಿಂಗ ಶ್ರೀಗಳ ರಾಷ್ಟ್ರೀಯ ಪುರಸ್ಕಾರವನ್ನು ಈ.ಕೃಷ್ಣಪ್ಪ ಅವರಿಗೆ ನೀಡುತ್ತಿರುವುದು ಪೂಜ್ಯರ ಆತ್ಮಕ್ಕೆ ಗೌರವ ತರುವ ಕಾರ್ಯವಾಗಿದೆ.

ಪೂಜ್ಯರ ಮನದಾಸೆಯಂತೆ ಶ್ರೀ ಬಸವ ಟಿವಿ ಉಳಿಸಿ,ಬೆಳೆಸುವುದು ಬಸವ ಭಕ್ತರ ಜವಾಬ್ದಾರಿಯಾಗಿದೆ. ನಾಡಿನ ಬಸವ ಚಿಂತಕರು ಯಾವುದೇ ರೀತಿಯ ಪ್ರತಿಫಲಾಪೇಕ್ಷೆ ಇಲ್ಲದೇ ಬಸವ ಟಿವಿಯಲ್ಲಿ ಭಾಗವಹಿಸುವುದು ಇಂದಿನ ಅಗತ್ಯವೂ ಹೌದು.ನಾಡಿನ ಸಾವಿರಾರು ಲಿಂಗಾಯತ ಮಠಗಳು ಕೃಷ್ಣಪ್ಪನವರ ಬೆಂಬಲಕ್ಕೆ ನಿಲ್ಲಬೇಕು. ಸದಸ್ಯತ್ವ ಅಭಿಯಾನದ ಮೂಲಕ ಕೃಷ್ಣಪ್ಪನವರ ನೈತಿಕ ಬಲ ಹೆಚ್ಚಿಸುವ ಹೊಣೆಗಾರಿಕೆಯನ್ನು ಅರ್ಥಮಾಡಿಕೊಳ್ಳಬೇಕು.

ಕೃಷ್ಣಪ್ಪ ಅವರ ಈ ಸಾಧನೆಯ ಹಿಂದಿನ ಬಹು ದೊಡ್ಡ ಶಕ್ತಿ ಅವರ ಧರ್ಮಪತ್ನಿ ಶ್ರೀಮತಿ ಯಶೋಧಮ್ಮ ಅವರು. ಸದುವಿನಯದ ತುಂಬಿದ ಕೊಡದಂತಿರುವ ಯಶೋಧಕ್ಕ ಬಸವ ಚಾನೆಲ್ಲಿನ ಧೀಶಕ್ತಿ.
ಅವರ ಸಹನೆ,ಸಹಕಾರ ಮತ್ತು ಶ್ರದ್ಧೆ ಬಸವ ಟಿವಿಯ ಉಳಿವಿಗೆ ಪ್ರೇರಕ ಚೈತನ್ಯ. ಪರಮಪೂಜ್ಯ ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗ ಪ್ರಥಮ ಪುಣ್ಯಸ್ಮರಣೆಯ ಸಮಾರಂಭದಲ್ಲಿ ಕೃಷ್ಣಪ್ಪನವರಿಗೆ ರಾಷ್ಟ್ರೀಯ ಪುರಸ್ಕಾರ ನೀಡಲಾಗುತ್ತದೆ.ಈ.ಕೃಷ್ಣಪ್ಪ ಹಾಗೂ ಬಸವ ವಾಹಿನಿಯ ಎಲ್ಲ ಸಮೂಹವನ್ನು ಹಾರ್ದಿಕವಾಗಿ ಅಭಿನಂದಿಸುತ್ತೇನೆ.

-ಸಿದ್ದು_ಯಾಪಲಪರವಿ.

Loading...

LEAVE A REPLY

Please enter your comment!
Please enter your name here