ಕಲಾವಿದರಾಗಿ ಬಣ್ಣದ ಲೋಕದಲ್ಲಿ ಮಿಂಚುವುದು ನಿಜಕ್ಕೂ ತೀರಾ ಸುಲಭದ ವಿಚಾರವೇನಲ್ಲ. ಯಾಕೆಂದರೆ ನಟನಾ ಕ್ಷೇತ್ರದಲ್ಲಿ ಕಾಣಿಸಿಕೊಳ್ಳಬೇಕು ಎಂದರೆ ಇಲ್ಲಿ ಅದೃಷ್ಟ ಎಂಬುದು ತುಂಬಾ ಮುಖ್ಯ. ಇದರ ಜೊತೆಗೆ ಅವಕಾಶಗಳು ಕೂಡಾ ಬೇಕು. ಸಂತಸದ ವಿಚಾರವೆಂದರೆ ಈಕೆಯ ಪಾಲಿಗೆ ಅದೃಷ್ಟವೂ ಅವಕಾಶಗಳು ಜೊತೆಯಾಗಿಯೇ ಇದೆ. ಅದೇ ಕಾರಣದಿಂದ ಈಕೆ ಇಂದು ನಟನಾ ಕ್ಷೇತ್ರದಲ್ಲಿ ಮಿಂಚುತ್ತಿದ್ದಾಳೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೀವ ಹೂವಾಗಿದೆ ಧಾರಾವಾಹಿಯಲ್ಲಿ ನಾಯಕಿ ಮಧುಮಿತ ಆಗಿ ನಟಿಸುತ್ತಿರುವ ಶಿಲ್ಪಾ ಅವರು ಓದಿದ್ದು ಆಕಸ್ಮಾತ್ ಆಗಿ ಬಣ್ಣದ ಲೋಕಕ್ಕೆ ಬಂದ ಚೆಲುವೆ. ತಮಿಳು ಧಾರಾವಾಹಿಯ ಮೂಲಕ ಕಿರುತೆರೆ ಲೋಕಕ್ಕೆ ಬಂದ ಶಿಲ್ಪಾ ಇಂದು ಕನ್ನಡ ಕಿರುತೆರೆಯಲ್ಲಿ ಸಂಪೂರ್ಣ ಬ್ಯುಸಿ.
ಕಲ್ಕಿ ವಾಹಿನಿಯಲ್ಲಿ ಅಮ್ನೋರು ಅನ್ನುವ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಮೂಲಕ ಕನ್ನಡ ಕಿರುತೆರೆಗೆ ಕಾಲಿಟ್ಟ ಶಿಲ್ಪಾ ಮುಂದೆ ಶ್ರೀನಿವಾಸ ಕಲ್ಯಾಣ, ಸಪ್ತ ಮಾತೃಕಾ ಧಾರಾವಾಹಿಗಳಲ್ಲಿ ನಟಿಸಿದ್ದರು. ತದ ನಂತರ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ನಾಗಿಣಿ ಧಾರಾವಾಹಿಯಲ್ಲಿ ಮಯೂರಿ ಎಂಬ ಖಳನಾಯಕಿಯ ಪಾತ್ರದಲ್ಲಿ ನಟಿಸಿದ ಈಕೆ ಆ ಪಾತ್ರದಿಂದಲೇ ಇಂದಿಗೂ ಮನೆ ಮಾತಾಗಿದ್ದಾರೆ. ಇಂದು ಶಿಲ್ಪಾ ಎತ್ತ ಹೋದರೂ ಜನ ಆಕೆಯನ್ನು ನಾಗಿಣಿಯ ಮಯೂರಿ ಎಂದೇ ಗುರುತಿಸುತ್ತಾರೆ.
ನಾಗಿಣಿ ಧಾರಾವಾಹಿಯ ನಂತರ ಸಣ್ಣ ಬ್ರೇಕ್ ತೆಗೆದುಕೊಂಡ ಶಿಲ್ಪಾ ಮುಂದೆ ಉದಯ ವಾಹಿನಿಯ ಮಾನಸ ಸರೋವರ ಧಾರಾವಾಹಿಯಲ್ಲಿ ನಾಯಕಿಯಾಗಿ ಮಿಂಚಿದರು. ಮಾನಸ ಸರೋವರದ ನಂತರ ಜೀವ ಹೂವಾಗಿದೆ ಧಾರಾವಾಹಿಯ ಮಧುಮಿತಳಾಗಿ ನಟಿಸುತ್ತಿರುವ ಶಿಲ್ಪಾ ಮನೋಜ್ಞ ಅಭಿನಯದ ಮೂಲಕ ಸೀರಿಯಲ್ ಪ್ರಿಯರ ಮನ ಸೆಳೆಯುತ್ತಿದ್ದಾರೆ.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಘವೇಂದ್ರ ರಾಜ್ ಕುಮಾರ್ ನಿರ್ಮಾಣದ ಜೀವ ಹೂವಾಗಿದೆ ಧಾರಾವಾಹಿಯಲ್ಲಿ ನಟಿಸುತ್ತಿರುವ ಶಿಲ್ಪಾಗೆ ಈ ಧಾರಾವಾಹಿಯಲ್ಲಿ ನಟಿಸುತ್ತೇನೆಂಬ ಕನಸು ಕೂಡಾ ಇರಲಿಲ್ಲವಂತೆ. ಜೀವ ಹೂವಾಗಿದೆ ಧಾರಾವಾಹಿಯ ಭಾಗ ಆಗಿರುವುದಕ್ಕೆ ಬಹಳ ಸಂತಸವಾಗಿದೆ ಎನ್ನುವ ಶಿಲ್ಪಾ ಧಾರಾವಾಹಿಯ ಚಿತ್ರೀಕರಣ ಸಿನಿಮಾದಷ್ಟೇ ರಿಚ್ ಆಗಿದೆ ಎನ್ನುತ್ತಾರೆ.
ಸ್ಮೈಲ್ ಪ್ಲೀಸ್ ಸಿನಿಮಾದಲ್ಲಿ ಎರಡನೇ ನಾಯಕಿಯಾಗಿ ಕಾಣಿಸಿಕೊಳ್ಳುವ ಮೂಲಕ ಬೆಳ್ಳಿತೆರೆಗೂ ಕಾಲಿಟ್ಟಿರುವ ಶಿಲ್ಪಾ ಮುಂದೆ ದಯವಿಟ್ಟು ಗಮನಿಸಿ, ನಾವು ಭಾಗ್ಯವಂತರು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ನಟನೆಯೇ ನನ್ನ ಜೀವ ಎಂದು ನಗುನಗುತ್ತಾ ಹೇಳುವ ಶಿಲ್ಪಾ ರವಿ ಉತ್ತಮ ಅವಕಾಶ ದೊರೆತರೆ ಸಿನಿಮಾದಲ್ಲಿ ನಟಿಸಲು ತಯಾರಿದ್ದಾರೆ.
ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಬಂದರೆ ಧಾರಾವಾಹಿಯನ್ನು ಬಿಡಲು ತಯಾರಿಲ್ಲ ಎನ್ನುವ ಶಿಲ್ಪಾ ಈಗಾಗಲೇ ಜಾಹೀರಾತುಗಳಲ್ಲಿಯೂ ನಟಿಸಿದ್ದಾರೆ. ನಟಿಯಾಗಬೇಕು, ಬಣ್ಣದ ಲೋಕದಲ್ಲಿ ಮಿಂಚಬೇಕು ಎಂಬ ಕನಸು ಕಾಣದೇ ಕಿರುತೆರೆಗೆ ಬಂದ ಶಿಲ್ಪಾ ಇದೀಗ ಬಣ್ಣದ ಲೋಕದಲ್ಲಿ ಮಿಂಚುತ್ತಿದ್ದಾರೆ.
– ಅಹಲ್ಯಾ