ಕೊವಿಡ್ ಸೋಂಕಿತರ ಸೇವೆಗಾಗಿ ನರ್ಸ್ ಆಗಿದ್ದ ಬಾಲಿವುಡ್ ನಟಿಗೂ ಕೊರೊನಾ ಪಾಸಿಟಿವ್

0
153

ವಿಶ್ವಾದ್ಯಂತ ಅಟ್ಟಹಾಸ ಮುಂದುವರೆಸುತ್ತಿರುವ ಕೊರೊನಾ ಸೋಂಕು ಬಡವರು, ಶ್ರೀಮಂತರು, ಜನಸಾಮಾನ್ಯರು, ಜನಪ್ರತಿನಿಧಿಗಳು, ನಟ-ನಟಿಯರು, ಸೆಲೆಬ್ರಿಟಿಗಳವರೆಗೂ ಬೆಂಬಿಡದೇ ಕಾಡುತ್ತಿದೆ. ಮಾತ್ರವಲ್ಲ ಕೊರೊನಾ ವಾರಿಯರ್ ಆಗಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು, ವೈದ್ಯಕೀಯ ಸಿಬ್ಬಂದಿಗಳನ್ನು ಬಿಡುತ್ತಿಲ್ಲ. ಕೊರೊನಾ ವಿರುದ್ಧ ಹೋರಾಡಲು ರೋಗಿಗಳಿಗೆ ಹಲವರು ಅನೇಕ ರೀತಿಯಲ್ಲಿ ಸಹಾಯಮಾಡುತ್ತಿದ್ದಾರೆ. ಆದರೆ ಬಾಲಿವುಡ್ ನಟಿಯೊಬ್ಬರು ಕೊವಿಡ್ ರೋಗಿಗಳ ಸೇವೆಗಾಗಿಯೇ ನರ್ಸ್ ವೃತ್ತಿಗೆ ಮರಳಿ ದೇಶದ ಗಮನ ಸೆಳೆದಿದ್ದರು. ಹೀಗೆ ಸ್ವಯಂ ಪ್ರೇರಣೆಯಿಂದ ಕೊವಿಡ್ ರೋಗಿಗಳ ಸೇವೆಯಲ್ಲಿ ನಿರತರಾಗಿದ್ದ ನಟಿ ಇದೀಗ ಕೊವಿಡ್ ಗೆ ತುತ್ತಾಗಿದ್ದಾರೆ.

ಹೌದು. ಬಾಲಿವುಡ್ ನಟಿ ಶಿಖಾ ಮಲ್ಹೋತ್ರಾ ಕಳೆದ ಐದಾರು ತಿಂಗಳಿಂದ ಕೊರೊನಾ ರೋಗಿಗಳ ಸೇವೆಗಾಗಿ ಸ್ವಯಂ ಪ್ರೇರಣೆಯಿಂದ ಮುಂಬೈ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಈಗ ತಮಗೆ ಕೊವಿಡ್ ಪಾಸಿಟೀವ್ ಬಂದಿರುವುದಾಗಿ ಸ್ವತ: ಶಿಖಾ ತಿಳಿಸಿದ್ದಾರೆ. ಈ ಕುರಿತು ಮಾಹಿತಿ ಹಂಚಿಕೊಂಡಿರುವ ಶಿಖಾ, ಇತ್ತೀಚೆಗೆ ಕೊರೊನಾ ಸೋಂಕು ಅಂತಹ ಸಮಸ್ಯೆಯಲ್ಲ ಎಂದು ನಿರ್ಲಕ್ಷಿಸುತ್ತಿರುವವರಿಗೆ ಇದೊಂದು ಎಚ್ಚರಿಕೆ ಎಂದಿದ್ದಾರೆ. ಕೊವಿಡ್ ಟೆಸ್ಟ್ ತಮಗೆ ಪಾಸಿಟೀವ್ ಬಂದಿದ್ದು, ನಾನು ಆಸ್ಪತ್ರೆಗೆ ದಾಖಲಾಗಿದ್ದೇನೆ. ನನ್ನಲ್ಲಿ ಆಮ್ಲಜನಕ ಕೊರತೆ ಸಮಸ್ಯೆ ಕಂಡುಬರುತ್ತಿದೆ. ಕೊವಿಡ್ ಬಗ್ಗೆ ನಿರ್ಲಕ್ಷ್ಯ ಬೇಡ ಎಂದು ಹೇಳುವ ಮೂಲಕ ಆಸ್ಪತ್ರೆ ಬೆಡ್ ಮೇಲೆ ಮಲಗಿ ಚಿಕಿತ್ಸೆ ಪಡೆಯುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ.

ಕೆಲ ತಿಂಗಳ ಹಿಂದೆ ನಟಿ ಶಿಖಾ ಮಲ್ಹೋತ್ರಾ, ತಾವು ಸ್ವಯಂ ಪ್ರೇರಣೆಯಿಂದ ಕೊರೊನಾ ಸೋಂಕಿತರ ಸೇವೆಗಾಗಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು. ನಾನು ವರ್ಧಮಾನ್ ಮಹಾವೀರ್ ಮೆಡಿಕಲ್ ಕಾಲೇಜು ಹಾಗೂ ಸಫ್ದರ್ ಜಂಗ್ ಆಸ್ಪತ್ರೆಯಲ್ಲಿ ಐದು ವರ್ಷಗಳ ಕಾಲ ಬಿಎಸ್‍ಸಿ ನರ್ಸಿಂಗ್ ಮಾಡಿದ್ದು, ಕೊರೊನಾ ವೈರಸ್‍ನ ಈ ಬಿಕ್ಕಟ್ಟಿನ ಸಂದರ್ಭದಲ್ಲಿ ನರ್ಸ್ ಡ್ರೆಸ್, ಪಿಪಿಇ ಕಿಟ್ ಧರಿಸಿ ದೇಶ ಸೇವೆಗೆ ಮುಂದಾಗಿದ್ದೇನೆ. ಮುಂಬೈನಲ್ಲಿನ ಆಸ್ಪತ್ರೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ ಎಂದು ಹೇಳಿದ್ದರು. ಇದೀಗ ಸ್ವತ: ಶಿಖಾ ಕೊವಿಡ್ ಸೋಂಕಿನಿಂದ ಬಳಲುತ್ತಿದ್ದಾರೆ.

ಕೊವಿಡ್ ನಂತಹ ತುರ್ತು ಪರಿಸ್ಥಿತಿಯಲ್ಲಿ ನಟಿ ಶಿಖಾ ಚಿತ್ರರಂಗ ಬಿಟ್ಟು ನರ್ಸ್ ವೃತ್ತಿಗೆ ಮರಳಿ, ವೃತ್ತಿಪರತೆ ಮೆರೆದಿರುವುದಕ್ಕೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗಿತ್ತು. ಶಿಖಾ ಮಲ್ಹೋತ್ರಾ, ಕಾಂಚ್ಲಿ ಲೈಫ್ ಇನ್ ಎ ಸ್ಪಫ್ ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿ ನೀಡಿದ್ದರು ಅಲ್ಲದೇ ಶಾರುಖ್ ಖಾನ್ ಅಭಿನಯದ ಫ್ಯಾನ್ ಹಾಗೂ ರನ್ನಿಂಗ್ ಶಾದಿ ಚಿತ್ರದಲ್ಲಿ ಕೂಡ ಅಭಿನಯಿಸಿದ್ದಾರೆ.

LEAVE A REPLY

Please enter your comment!
Please enter your name here